ಶಹಾಪುರ: ನಮ್ಮ ಸಂವಿಧಾನ ಅನುಷ್ಠಾನಕ್ಕೆ ಬಂದು 69 ವಸಂತಗಳು ಕಳೆದರೂ ಇಂದಿಗೂ ಪ್ರಸ್ತುತವಾಗಿರುವುದು ಹೆಮ್ಮೆಯ ಸಂಗತಿ. ಅಲ್ಲದೆ ಸಂವಿಧಾನ ಮನುಷ್ಯತ್ವದ ಒಂದು ಮಹತ್ವದ ದಾಖಲೆಯಾಗಿದೆ ಎಂಬುದು ಮರೆಯಬಾರದು ಎಂದು ವಿದ್ಯಾರ್ಥಿ ಅಮೀರಖಾನ್ ಹೇಳಿದರು. ನಗರದ ಚರಬಸವೇಶ್ವರ ವಿದ್ಯಾಸಂಸ್ಥೆ ವತಿಯಿಂದ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಂವಿಧಾನ ಸಂವೇದನೆ ಎಂದು ಭಾವಿಸಬೇಕು. ಸಂವೇದನೆ ಭಾವನೆ ಮತ್ತು ಚಿಂತನೆ ಒಂದಾಗಿ ಸಂವಿಧಾನ ಎದೆಯ ದನಿಯಾಗಬೇಕು. ಸಂವಿಧಾನ ಕೇವಲ ಪುಸ್ತಕವಲ್ಲ. ಅದು ನಮ್ಮ ನಡುವಿನ ಜೀವಂತ ಬದುಕಾಗಿದೆ. ವಿವಿಧ ಜಾತಿ, ಜನಾಂಗ, ಭಾಷೆ, ನಂಬಿಕೆಗಳು, ಆಚಾರ-ವಿಚಾರಗಳ, ಉಡುಪುಗಳ ಜನರನ್ನು ಒಟ್ಟಿಗೆ ಮುನ್ನಡೆಸುತ್ತಿರುವುದು ಭಾರತದ ಸಂವಿಧಾನ ಎಂಬುದು ಪ್ರತಿಯೊಬ್ಬ ನಾಗರಿಕನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇನ್ನೋರ್ವ ವಿದ್ಯಾರ್ಥಿನಿ ಸುಮಿತ್ರಾ ಮಾತನಾಡಿ, ಡಾ| ಬಿ.ಆರ್. ಅಂಬೇಡ್ಕರ ಅವರ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ನಮ್ಮ ಸಂವಿಧಾನದ ವಿನ್ಯಾಸಗಳು, ಆಶಯಗಳು ಬಹಳಷ್ಟು ಸಶಕ್ತವಾಗಿವೆ. ಭಾರತದ ಬಹುತ್ವ ಎನ್ನುವುದು ಬಹುದೊಡ್ಡ ಶಕ್ತಿ ಮಾತ್ರವಲ್ಲ. ಆಧುನಿಕ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ, ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೇ ಮುಖ್ಯ ಭಾಷಣಕರರಾಗಿ ಮಾತನಾಡುವುದು ತುಂಬಾ ವಿಶೇಷವಾಗಿದೆ. ಕಳೆದ 4-5 ವರ್ಷಗಳಿಂದ ಈ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದು ಮಾದರಿಯಾಗಿದೆ ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಘೇವರಚಂದ ಜೈನ್, ಪ್ರೌಢಶಾಲೆ ವಿಭಾಗದ ಮುಖ್ಯಶಿಕ್ಷಕ ಬಾಪುಗೌಡ ಅಸಂತಾಪುರ, ಕಾಲೇಜಿನ ಪ್ರಾಚಾರ್ಯರ ಧರ್ಮಣ್ಣಗೌಡ ಬಿರಾದಾರ, ಶಿವಲಿಂಗಣ್ಣ ಸಾಹು ಇದ್ದರು.
ದೈಹಿಕ ಶಿಕ್ಷಕ ಸುರೇಶ ಮಡ್ಡಿ ನಿರೂಪಿಸಿದರು. ಕು.ಸುಮಿತ್ರಾ ಸಗರ ಹಾಗೂ ಸಂಗಡಿಗರು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿ ರೋಜಾ ವಂದಿಸಿದರು.