ಸಿಂದಗಿ: ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಅನುಭವಿಸಲು ಸಾಧ್ಯವಾಗಿದೆ ಎಂದು ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹ ನಿರ್ದೇಶಕಿ ಸಿಂತಿಯಾ ಡಿಮೆಲೊ ಹೇಳಿದರು.
ಪಟ್ಟಣದ ಬಸವ ನಗರದಲ್ಲಿನ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಸಂವಿಧಾನ ಓದು ಎಂಬ ಶಿರ್ಷಿಕೆಯಡಿ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಕಂಠಪಾಠ ಮಾಡಿ ಕ್ರಿಯಾತ್ಮಕವಾಗಿ ಪ್ರಸ್ತುತ ಪಡಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಭಾರತ ದೇಶದ ಉತ್ತಮ ಪ್ರಜೆಯಾಗಿ ಬುದಕು ಸಾಗಿಸುತ್ತಿರುವುದು ನಮಗೆ ತುಂಬಾ ಹೆಮ್ಮೆ ಅನಿಸುತ್ತದೆ. ದೇಶದಲ್ಲಿ ನಾವಿಂದು ನಮ್ಮ ಹಕ್ಕುಗಳನ್ನು ಅನುಭವಿಸಿ ಬದುಕು ಸಾಗಿಸುತ್ತಿರುವುದಕ್ಕೆ ದೇಶದ ಸಂವಿಧಾನ ಕಾರಣ. ಆದ್ದರಿಂದ ಸಂವಿಧಾನ ಅರಿತು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಟಿಯೋಲ್ ಮಚದೊ ಮಾತನಾಡಿ, ಸಂವಿಧಾನ ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನ ಹೊಂದಿದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನ ದೇಶದ ಗುರಿಗಳು, ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ನಾವೆಲ್ಲರೂ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಈ ನಿಟ್ಟಿನಲ್ಲಿ ಸ್ಥಳಿಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರವು ನೊಂದ ಜನರಿಗೋಸ್ಕರ, ತುಳಿತಕ್ಕೊಳಪ್ಪ ಜನಾಂಗದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಸಂಗಮ ಸಂಸ್ಥೆ ನಿರ್ದೇಶಕ ಅಲ್ವಿನ್ ಡಿಸೋಜ ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಕೂಡಾ ಬಡವರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ದೀನ ದಲಿತರ ಮೇಲೆ ನಡೆಯುವ ಅನ್ಯಾಯ ಮತ್ತು ತಾರತಮ್ಯ ತಡೆಗಟ್ಟುವ ಸಲುವಾಗಿ ಅಂಬೇಡ್ಕರ್ ಸಂವಿಧಾನ ರಚಿಸಿದರು. ಸಂವಿಧಾನ ಜಾರಿಯಾದ ದಿನದಿಂದ ಎಲ್ಲರೂ ಗೌರವಯುತ ಜೀವನ ಸಾಗಿಸುವಂತಾಗಿದೆ. ಅದೇ ರೀತಿ ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಒಂದು ದೊಡ್ಡದಾದ ಅಕಾರವನ್ನು ಕೊಟ್ಟಿದೆ. ನಮಗಿರುವ ಮತದಾನದ ಹಕ್ಕು ವ್ಯರ್ಥವಾಗಿಸದೇ ಒಳ್ಳೆಯ ನಾಯಕರನ್ನು ಆರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಸಂಘಟನೆ ಕಾರ್ಯದರ್ಶಿ ಮಹಮ್ಮದಪಟೇಲ್ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಕಂಠಪಾಠ ಮಾಡಿ ಕ್ರಿಯಾತ್ಮಕವಾಗಿ ಪ್ರಸ್ತುತ ಪಡಿಸಿ ವಿಜೇತರಾದ ಕೆರೂಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿನೂತ್ ಹಿರೇಮಠ (ಪ್ರಥಮ), ಸಿದ್ದಮ್ಮ ಬುಳ್ಳಾ (ದ್ವಿತೀಯ), ಸಾನಿಯಾ ಬಾಗವಾನ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಸಂವಿಧಾನ ಓದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ತೇಜಸ್ವಿನಿ ಹಳ್ಳದಕೇರಿ ಸ್ವಾಗತಿಸಿದರು. ರಾಜೀವ್ ಕುರಿಮನಿ ನಿರೂಪಿಸಿದರು. ಸುರೇಶ ಬೈರವಾಡಗಿ ವಂದಿಸಿದರು.