ನವದೆಹಲಿ: ರಾಜ್ಯಸಭೆ ಉಪಸಭಾಪತಿ ಚುನಾವಣೆ ವಿಚಾರದಲ್ಲಿ, ಆರಂಭದಲ್ಲಿ ಸ್ವಪಕ್ಷದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸದೇ, ಇತರ ಪಕ್ಷದವರನ್ನೇ ಕಣಕ್ಕಿಳಿಸಿ ಬಿಜೆಪಿಯೇತರ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸಿ ಚುನಾವಣೆ ಎದುರಿಸಬೇಕು ಎಂದು ಹೊರಟಿದ್ದ ಕಾಂಗ್ರೆಸ್ ಕೊನೆಗೆ ತನ್ನ ಖೆಡ್ಡಾದಲ್ಲಿ ತಾನೇ ಬಿದ್ದಂತಾಗಿದೆ.
ಮೊದಲಿಗೆ ಎನ್‌ಸಿಪಿಯ ವಂದನಾ ಚವಾಣ್‌ರನ್ನು ಕಣಕ್ಕಿಳಿಸುವ ಪ್ರಸ್ತಾಪವಿತ್ತು. ಆದರೆ ಬಿಜೆಡಿ ಬೆಂಬಲ ಸಿಗುತ್ತಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆಯೇ, ರಾಜ್ಯಸಭೆಯಲ್ಲಿ ಹೀನಾಯವಾಗಿ ಸೋಲಲು ಬಯಸದ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹಿಂದೆ ಸರಿದರು. ಇದೇ ವೇಳೆ ಟಿಎಂಸಿ ಕೂಡ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಸ್ತಾವನೆಯಿಂದ ಹಿಂದೆ ಸರಿಯಿತು. ಹೀಗಾಗಿ ತನ್ನದೇ ಪಕ್ಷದ ಬಿ.ಕೆ. ಹರಿಪ್ರಸಾದ್‌ರನ್ನು ಕಣಕ್ಕಿಳಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು.
ಇಷ್ಟೆಲ್ಲ ಆಗಿ ಚುನಾವಣೆ ಕಣಕ್ಕೆ ಧುಮುಕಿದ ಮೇಲೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಕಾಂಗ್ರೆಸ್ ವಿಫಲವಾಯಿತು. ಬಿಜೆಪಿ ಜೊತೆಗೆ ವೈರತ್ವ ಕಟ್ಟಿಕೊಂಡಿದ್ದ ಪಿಡಿಪಿಯನ್ನೂ ಕಾಂಗ್ರೆಸ್ ಪರ ಮತ ಹಾಕುವಂತೆ ಮನವೊಲಿಸಲಾಗಲಿಲ್ಲ. ಎಎಪಿಯಂತೂ ನೇರವಾಗಿ ಕಾಂಗ್ರೆಸ್ ಮೇಲೆಯೇ ಆರೋಪ ಹೊರಿಸಿತು. ಬದಲಿಗೆ ಇನ್ನೊಂದೆಡೆ ಬಿಜೆಪಿಗೆ ಈ ಚುನಾವಣೆ ಹೊಸ ಮಿತ್ರರನ್ನು ಸೃಷ್ಟಿಸಿದೆ. ಬಿಜೆಡಿ ಮುಖ್ಯಸ್ಥ ಹಾಗೂ ಒಡಿಶಾ ಸಿಎಂ ನವೀನ್ ಪಾಟ್ನಾಯಕ್‌ಗೆ ಪ್ರಧಾನಿಯೇ ಸ್ವತಃ ಕರೆ ಮಾಡಿ ಮಾತನಾಡಿ ಒಲಿಸಿ ಕೊಂಡರೆ, ಹರಿವಂಶ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದಂತೆಯೇ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಉಭಯ ಪಕ್ಷಗಳ ಮಧ್ಯೆ ಎಲ್ಲವೂ ಸರಿಯಿದೆ ಎಂಬಂತೆ ಸಚಿವ ನಿತಿನ್ ಗಡ್ಕರಿ ಮನೆಗೆ ತೆರಳಿ ಕೈ ಕುಲುಕಿ ಬಂದರು.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಟಿಆರ್‌ಎಸ್ ಬೆಂಬಲ ಸಿಕ್ಕಿದೆ. ಇದು ಮುಂದಿನ ಲೋಕಸಭೆ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಬಿಜೆಪಿ ಅಭ್ಯರ್ಥಿಯನ್ನು ರಾಜ್ಯ ಸಭೆಯಲ್ಲಿ ಟಿಆರ್‌ಎಸ್ ಬೆಂಬಲಿಸಿದ್ದರೂ, ವಿಷಯಾಧಾರಿತ ಬೆಂಬಲವನ್ನು ಎನ್‌ಡಿಎಗೆ ನೀಡುತ್ತೇವೆ ಎಂದು ಹೇಳಿದೆ. ಇನ್ನೊಂದೆಡೆ ಎಐಎಡಿಎಂಕೆ ಕೂಡ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯಸಭೆ ಚುನಾವಣೆಯ ಫಲಿತಾಂಶ ವೇನೂ ಪರಿಣಾಮ ಬೀರದಿದ್ದರೂ, ಇಲ್ಲಿ ನಡೆದ ರಾಜಕೀಯ ಚಟುವಟಿಕೆಗಳು ಬಿಜೆಪಿಗೆ ಭಾರಿ ನೆರವಾಗಿದೆ. ಇನ್ನೊಂದೆಡೆ ಕಾಂಗ್ರೆಸ್, ಇತರ ಪಕ್ಷಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವಲ್ಲಿ ವಿಫಲ ವಾಗಿದೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
ಮೊದಲ ಬಾರಿ ಸದಸ್ಯತ್ವದಲ್ಲೇ ಉಪಸಭಾಪತಿ
62 ವರ್ಷದ ಹರಿವಂಶ್ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪತ್ರಕರ್ತರಾಗಿ ಕೆಲಸ ಮಾಡಿದ್ದ ಇವರು, ಮಾಜಿ ಪ್ರಧಾನಿ ಚಂದ್ರಶೇಖರ್‌ಗೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಸರ್ಕಾರ ಉರುಳಿದ ನಂತರ ಪುನಃ ತಮ್ಮ ಪತ್ರಕರ್ತ ವೃತ್ತಿಗೆ ವಾಪಸಾಗಿದ್ದರು. ಉತ್ತರ ಪ್ರದೇಶದ ಬಲಿಯಾದಲ್ಲಿ ಜನಿಸಿದ ಹರಿವಂಶ್, ಅರ್ಥಶಾಸOಉದಲ್ಲಿ ಎಂ.ಎ ಹಾಗೂ ಬನಾರಸ್ ಹಿಂದೂ ವಿವಿಯಿಂದ ಪತ್ರಿಕೋದ್ಯಮ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ.
ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಜನಿಸಿದ ಪ್ರಾಂತ್ಯದಲ್ಲೇ ಹುಟ್ಟಿದ ಹರಿವಂಶ್, ಆರಂಭದಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ದ್ದರಾದರೂ, ಪತ್ರಿಕೋದ್ಯಮದ ಸೆಳೆತ ಅವರನ್ನು ಹಿಂದಿ ದಿನಪತ್ರಿಕೆ ಪ್ರಭಾತ್ ಖಬರ್‌ನ ಮುಖ್ಯ ಸಂಪಾದಕ ಹುದ್ದೆಯ ವರೆಗೆ ಕರೆತಂದಿದೆ. ಬಿಹಾರ ಹಾಗೂ ಜಾರ್ಖಂಡ್ ಬಗ್ಗೆ ಹಿಂದಿಯಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. 2014ರಲ್ಲಿ ಇವರನ್ನು ಮೊದಲು ಬಿಹಾರ ಸಿಎಂ ನಿತೀಶ್ ರಾಜ್ಯಸಭೆಗೆ ನಾಮಕರಣ ಮಾಡಿದ್ದರು. ಇತರ ಎಲ್ಲ ಪಕ್ಷಗಳ ಮುಖಂಡರೊಂದಿಗೂ ಹರಿವಂಶ್ ಉತ್ತಮ ಸಂಬಂಧ ಹೊಂದಿದ್ದಾರೆ.