Advertisement

ನ.1ರಿಂದ ಕಾಂಗ್ರೆಸ್‌ “ದೀಪ ನಮನ’

10:50 AM Oct 30, 2017 | |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಕಾಂಗ್ರೆಸ್‌, ಭಾನುವಾರ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆ ನಡೆಸಿತು. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಈ ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಲು ಕರೆ ನೀಡಲಾಯಿತು.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ರಾಜ್ಯದಲ್ಲಿ ಮತ್ತೂಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯೋನ್ಮುಖರಾಗಬೇಕಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರು ದಿನದ
24 ಗಂಟೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ರಾಜ್ಯದ ಪ್ರತಿಯೊಬ್ಬ ನಾಗರೀಕ ಕೂಡ ಸರ್ಕಾರದ ಒಂದಲ್ಲಾ ಒಂದು ಕಾರ್ಯ ಕ್ರಮದ ಫ‌ಲಾನುಭವಿಯಾಗಿದ್ದಾನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅನುಷ್ಠಾನ ಗೊಳಿಸಿರುವ ಪ್ರತಿಯೊಂದು ಯೋಜನೆ ಹಾಗೂ ಅದರಿಂದ ಜನರಿಗೆ ಆದ ಪ್ರಯೋಜನಗಳ ಬಗ್ಗೆ ಮನೆ-ಮನೆಗೂ ಮಾಹಿತಿ ತಲುಪಿಸಬೇಕಿದೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಲಾಗಿದೆ. ಇದೆಲ್ಲ ಜನರಿಗೆ ಗೊತ್ತಾಗಬೇಕು. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಧ್ಯಕ್ಷರು ಹಗಲಿರಳು ಶ್ರಮಿಸಬೇಕು ಎಂದರು.

ವೇಣುಗೋಪಾಲ್‌ ಭೇಟಿ: ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು “ಮನೆ-ಮನೆಗೆ ಕಾಂಗ್ರೆಸ್‌’
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಗತಿ ಪರಿಶೀಲನೆಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಪ್ರತಿ ಜಿಲ್ಲೆಗೂ ಖುದ್ದು ಭೇಟಿ ನೀಡಲಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಪದಾಧಿಕಾರಿಗಳು ಮತ್ತು ಮುಖಂಡರು
ಕೆಲಸ ಮಾಡಬೇಕು. ಸರ್ಕಾರದ ಸಾಧನೆ ಹೇಳುವ ಒಂದೂವರೆ ಕೋಟಿ ಕಿರು ಪುಸ್ತಕಗಳನ್ನು ಜನರಿಗೆ ತಲುಪಿಸಬೇಕು. ಇದಕ್ಕಾಗಿ 56 ಸಾವಿರ ಬೂತ್‌ ಕಮಿಟಿಗಳ ಸದಸ್ಯರು ಬಿಡುವಿಲ್ಲದೇ ಕೆಲಸ ಮಾಡಬೇಕು ಎಂದು ಪರಮೇಶ್ವರ್‌ ಸೂಚನೆ ನೀಡಿದರು.

ದೀಪ ನಮನ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 100ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ನ.1ರಿಂದ ನ.30ರವರೆಗೆ ಕಾಂಗ್ರೆಸ್‌ನಿಂದ ಎಲ್ಲಾ ಪಂಚಾಯಿತಿ, ವಾರ್ಡ್‌ಗಳಲ್ಲಿ “ದೀಪ ನಮನ’ ಕಾರ್ಯಕ್ರಮ ಮಾಡಬೇಕು. ವಿಶೇಷವಾಗಿ ಮಹಿಳಾ ಕಾರ್ಯಕರ್ತರು ದೀಪನಮನ ಸಲ್ಲಿಸುವ ಮೂಲಕ ದೇಶದ ಬಡತನ ನಿರ್ಮೂಲನೆಗೆ ಶ್ರಮಿಸಿದ ಇಂದಿರಾಗಾಂಧಿಯವರಿಗೆ ಗೌರವ ಸಲ್ಲಿಸಬೇಕು. ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ ನ.8ರಂದು ಕರಾಳ ದಿನ ಆಚರಿಸಬೇಕು. ಇವಿಎಂ (ವಿದ್ಯುನ್ಮಾನ
ಮತಯಂತ್ರ)ಗಳನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಇವಿಎಂಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಬೂತ್‌ ಕಮಿಟಿ ಸದಸ್ಯರು ಮತ್ತು ಏಜೆಂಟರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ಏಳು  ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪರಮೇಶ್ವರ್‌ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತಿತರರು ಹಾಜರಿದ್ದರು.

ಶೋಭಾಗೆ ಮಂಪರು ಪರೀಕ್ಷೆ ಅಗತ್ಯ: ಸಿಎಂ 
ಮಂಡ್ಯ: “ನನಗೆ ಮಂಪರು ಪರೀಕ್ಷೆ ನಡೆಸುವ ಅಗತ್ಯವಿಲ್ಲ.  ಸುಳ್ಳು ಹೇಳುವ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಮಂಪರು ಪರೀಕ್ಷೆ ನಡೆಸುವ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು  ಮಾತನಾಡಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮನ್ನು ಮಾಧ್ಯಮದ ಮುಂದೆಯೇ ಮಂಪರು ಪರೀಕ್ಷೆಗೆ ಒಳಪಡಿಸಲಿ ಎಂಬ ಶೋಭಾ ಕರಂದ್ಲಾಜೆ ಸವಾಲಿಗೆ ಪ್ರತಿಕ್ರಿಯಿಸಿದ ಅವರು, “ವಿದ್ಯುತ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಲಾಗಿದೆ. ಸಮಿತಿ ಅ.30ರಂದು ವರದಿ ಸಲ್ಲಿಸಲಿದೆ. ಯಾರು ತಪ್ಪಿತಸ್ಥರು
ಎಂಬುದು ವರದಿಯಲ್ಲಿ ಬಹಿರಂಗವಾಗಲಿದೆ. ಸದ್ಯಕ್ಕೆ ಹಗರಣದ ಬಗ್ಗೆ ಏನು, ಎತ್ತ ಎಂಬುದೇ ನನಗೆ ಗೊತ್ತಿಲ್ಲ. ವರದಿ ಸಲ್ಲಿಕೆಯಾಗುವ ಮುನ್ನವೇ ಶೋಭಾಗೆ ಚಡಪಡಿಕೆ ಆರಂಭವಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದರೆ ಯಾಕೆ ಹೆದರಬೇಕು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರು ಎನ್ನುವಂತಾಗಿದೆ’ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next