Advertisement
ಸರ್ಕಾರದ ವಿರುದ್ಧ ಬಂಡೆದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹದಿನಾರು ಶಾಸಕರು ಆಯಾ ಪಕ್ಷದಿಂದ ಉಚ್ಛಾಟನೆ ಶಿಕ್ಷೆಗೊಳಗಾಗಿರುವುದು ಒಂದು ಕಡೆಯಾದರೆ ಅಷ್ಟು ಕ್ಷೇತ್ರಗಳ ಮಟ್ಟಿಗೆ ಎರಡೂ ಪಕ್ಷಗಳ ಅಸ್ತಿತ್ವಕ್ಕೂ ಧಕ್ಕೆ ತಂದುಕೊಂಡಂತಾಗಿದೆ.
Related Articles
Advertisement
ತಕ್ಕ ಶಾಸ್ತಿ: ಕಾಂಗ್ರೆಸ್ ಪಕ್ಷವು 79 ಸ್ಥಾನಗಳಿಂದ 65ಕ್ಕೆ ಇಳಿದಿದ್ದರೆ ಜೆಡಿಎಸ್ 34ಕ್ಕೆ ಕುಸಿದಿದೆ. ಲೋಕಸಭೆ ಚುನಾವಣೆಯಲ್ಲಿ ಹತ್ತು ಸ್ಥಾನ ಪಡೆದಿದ್ದ ಕಾಂಗ್ರೆಸ್ 1 ಸ್ಥಾನಕ್ಕೆ, 2 ಸ್ಥಾನ ಪಡೆದಿದ್ದ ಜೆಡಿಎಸ್ 1 ಸ್ಥಾನಕ್ಕೆ, ಮಂಡ್ಯದಂತಹ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುವಂತಾಯಿತು. ಇದೆ ಲ್ಲವೂ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರಿಂದಲೇ ಆಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗದಿದ್ದರೆ ಲೋಕ ಸಭೆಯಲ್ಲಿ ಮೈತ್ರಿಯಾಗುತ್ತಿರಲಿಲ್ಲ
ಮೈತ್ರಿ ಆಗದಿದ್ದರೆ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿದ್ದವು. ಆಗ, ಕಾಂಗ್ರೆಸ್ ಕನಿಷ್ಠ 8 ಸ್ಥಾನ, ಜೆಡಿಎಸ್ 2 ಸ್ಥಾನ ಗೆಲ್ಲುವ ಅವಕಾಶ ಇತ್ತು. ಆದರೆ, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಯಿತು. ಒಂದು ತಪ್ಪಿಗೆ ಮತ್ತೂಂದು ತಪ್ಪು ಸೇರಿ ಅದಕ್ಕೆ ಸರಿಯಾದ ಶಾಸ್ತಿ ಆದಂತಾಗಿದೆ ಎಂಬ ಮಾತುಗಳು ಎರಡೂ ಪಕ್ಷಗಳ ವಲಯದಲ್ಲಿ ಕೇಳಿಬರುತ್ತಿವೆ.
ಪಕ್ಷ ಸಂಘಟನೆಗೆ ಇಳಿದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕಾರ್ಯಕರ್ತರು ಹಾಗೂ ಮುಖಂಡರ ಬಿಸಿ ತಟ್ಟಿದೆ. ಅಧಿಕಾರ ಇದ್ದಾಗ ನಾವ್ಯಾರೂ ನೆನಪಿಗೆ ಬರುವುದಿಲ್ಲ, ಅಧಿಕಾರ ಅನುಭವಿಸಲು ಬೇರೆಯವರು, ಇದೀಗ ನಾವು ಬೇಕಾ? ಯಾರನ್ನು ಕೇಳಿ ಸರ್ಕಾರ ಮಾಡಿದ್ದೀರಿ, ಯಾರನ್ನು ಕೇಳಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರಿ. ಇದೀಗ ಇಂತಹ ಸ್ಥಿತಿಗೆ ಪಕ್ಷ ತಲುಪಲು ನೀವೇ ಕಾರಣ ಎಂದು ಬಹಿರಂಗವಾಗಿಯೇ ಆಂತರಿಕ ಸಭೆಗಳಲ್ಲಿ ಅತೃಪ್ತಿ ಹೊರಹಾಕುತ್ತಿದ್ದಾರೆ.
ಕಾಂಗ್ರೆಸ್ ನಾಯಕರಿಗೂ ಇದೇ ರೀತಿಯ ಅನುಭವ ಆಗುತ್ತಿದ್ದು, ಕೆಲವು ನಾಯಕರ ಸ್ವ ಪ್ರತಿಷ್ಠೆ, ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಅಧೋಗತಿಗೆ ತಲುಪುವಂತಾಗಿದೆ.
ಮತ್ತೆ ಪಕ್ಷ ಕಟ್ಟಿ ಗಟ್ಟಿಗೊಳಿಸುವುದು ಅಷ್ಟು ಸುಲಭವಲ್ಲ ಎಂದು ಜಿಲ್ಲಾ ಮಟ್ಟದ ನಾಯಕರು ಹೇಳುವಂತಾಗಿದೆ.
ಒಟ್ಟಾರೆ, ಸಮ್ಮಿಶ್ರ ಸರ್ಕಾರ ರಚನೆ, ಒಲ್ಲದ ಮದುವೆ ಎಂಬ ಲೋಕಸಭೆ ಚುನಾವಣೆ ಮೈತ್ರಿಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಭಾರೀ ‘ದಂಡ’ ತೆತ್ತಿದ್ದು , ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಪ್ರಭಾವದಲ್ಲಿ ಮತ್ತೆ ಪ್ರಬಲವಾಗುತ್ತಾ ಎಂಬುದು ಕಾದು ನೋಡಬೇಕಾಗಿದೆ.
50 ಕ್ಷೇತ್ರಗಳ ಕಥೆ ಚಿಂತಾಜನಕ
ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷದವರು ಅಧಿಕಾರ ಅನುಭವಿಸಿದ ಗಳಿಸಿದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬಂತಾಗಿದ್ದು, ಮೇಲ್ನೋಟಕ್ಕೆ ಹದಿನಾರು ಕ್ಷೇತ್ರಗಳ ಶಾಸಕರನ್ನು ಎರಡೂ ಪಕ್ಷಗಳು ಕಳೆದುಕೊಂಡಿವೆ. ಆದರೆ, ಲೋಕಸಭೆ ಚುನಾವಣೆ ಮೈತ್ರಿ ಹಾಗೂ ಫಲಿತಾಂಶದ ನಂತರದ ಪರಿಸ್ಥಿತಿಯಲ್ಲಿ ಸುಮಾರು ಐವತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷದವರಿಗೂ ಎಫೆಕ್ಟ್ ಆಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ವ್ಯಾಪ್ತಿಗೆ ಬರುವ 50 ವಿಧಾನಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ, ಸಮನ್ವಯವಾಗದೆ ಬಿಜೆಪಿಯತ್ತ ಹೋಗಿದ್ದಾರೆ. ಇದೀಗ ಪಕ್ಷ ಪುನಶ್ಚೇತನಕ್ಕೆ ಹೋಗುತ್ತಿರುವ ಮುಖಂಡರಿಗೆ ಇದರ ‘ಬಿಸಿ’ ತಟ್ಟುತ್ತಿದೆ.