Advertisement
ಸಹಕಾರ ಬ್ಯಾಂಕ್‌ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಲ್ಲಿ ಇಲ್ಲದೇ ಇರುವ ಇರುವ ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸುವ ಋಣ ಪರಿಹಾರ ಅಧಿನಿಯಮ ಜಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಂಡಿರುವ ದಿಢೀರ್ ನಿರ್ಧಾರದ ಹಿಂದೆ ಕಾಂಗ್ರೆಸ್‌ನವರು ಸರ್ಕಾರಕ್ಕೆ ಅಪಾಯ ಉಂಟುಮಾಡದಂತೆ ಸುಮ್ಮನಾಗಿಸುವ ಮತ್ತು ಒಂದೊಮ್ಮೆ ಸರ್ಕಾರ ಉರುಳಿದರೂ ಅದರ ಆರೋಪ ಕಾಂಗ್ರೆಸ್ ಮೇಲೆ ಬರುವಂತೆ ಮಾಡುವ ಉದ್ದೇಶವಿದೆ ಎಂದು ಹೇಳಲಾಗಿದೆ.
ಸಮ್ಮಿಶ್ರ ಸರ್ಕಾರ ರಚನೆಯಾದ ಆರಂಭದಿಂದಲೂ ಕಾಂಗ್ರೆಸ್‌ಗೆ ಆದ್ಯತೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಖಾತೆ ಹಂಚಿಕೆ ಸಂದರ್ಭದಲ್ಲಿ ಮಹತ್ವದ ಇಂಧನ ಖಾತೆಗೆ ಪಟ್ಟುಹಿಡಿದರೂ ಅದನ್ನು ಮುಖ್ಯಮಂತ್ರಿಗಳೇ ಉಳಿಸಿಕೊಂಡಿದ್ದರು. ಸರ್ಕಾರ ರಚನೆಯಾದ ಬಳಿಕ ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾಗಿದ್ದವು. ಕಾಂಗ್ರೆಸ್ ಶಾಸಕರ ಮಾತು ಕೇಳುತ್ತಿಲ್ಲ, ಅವರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿಲ್ಲ ಎಂಬ ದೂರುಗಳಿವೆ. ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮಾತಿಗೇ ಕಿಮ್ಮತ್ತು ಸಿಗಲಿಲ್ಲ. ಹಲವು ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಬರೆದ ಪತ್ರಗಳಿಗೂ ಪೂರಕ ಸ್ಪಂದನೆ ಸಿಕ್ಕಿಲ್ಲ. ಇದು ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿಲ್ಲದ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಅಸಮಾಧಾನವನ್ನು ಹೆಚ್ಚಿಸುತ್ತಲೇ ಬಂದಿದೆ.
Related Articles
Advertisement
ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮೊದಲು ಅಲ್ಲಿಗೆ ತೆರಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದರೂ ನಂತರದಲ್ಲಿ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರ.ಮಹೇಶ್ ಮಾತ್ರವೇ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂದಾಯ ಸಚಿವರು ಲೆಕ್ಕಲ್ಲಿಲ್ಲ ಎಂಬಂತೆ ಬಿಂಬಿಸಿದ್ದು ಸ್ವತಃ ದೇಶಪಾಂಡೆ ಸೇರಿದಂತೆ ಅನೇಕ ಕಾಂಗ್ರೆಸಿಗರಲ್ಲಿ ಬೇಸರ ತರಿಸಿದೆ. ಈ ಕಾರಣಕ್ಕಾಗಿಯೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಜಿಲ್ಲೆಗೆ ಹೋದಾಗ ಕಾಂಗ್ರೆಸ್‌ನ ಮುಖಂಡರಾರೂ ಇರಲಿಲ್ಲ. ಆದರೆ, ಸಿದ್ದರಾಮಯ್ಯ ತೆರಳಿದಾಗ ಸಾಕಷ್ಟು ಮಂದಿ ಹೋಗಿದ್ದರು.
ಕಾಂಗ್ರೆಸ್‌ಗೆ ತಿರುಗುಬಾಣ ಹೂಡಲು ತಂತ್ರ:ಈ ಎಲ್ಲಾ ಕಾರಣಗಳಿಂದಾಗಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್‌ನಲ್ಲಿ ಸರ್ಕಾರದ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಅತೃಪ್ತಿ ಹೆಚ್ಚುತ್ತಿದ್ದು, ಇದು ಇತ್ತೀಚೆಗೆ ಸಿದ್ದರಾಮಯ್ಯ ಅವರ ಮಾತಿನಲ್ಲೂ ವ್ಯಕ್ತವಾಗಿತ್ತು. ಈ ಅತೃಪ್ತಿಯ ಹೊಗೆ ಸರ್ಕಾರಕ್ಕೂ ಕಂಟಕವಾಗಲಿದೆ ಎಂಬ ಮಾತು ಕೇಳಿಬರುತ್ತಿರುವುದರಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿ ಸರ್ಕಾರಕ್ಕೇನಾದರೂ ಆಪಾಯವಾದರೆ ಅದಕ್ಕೆ ಆ ಪಕ್ಷವೇ ಕಾರಣ ಎಂಬ ಅಭಿಪ್ರಾಯ ಮೂಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೂ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದೇನೆ. ಅಲ್ಲದೆ, ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸುವ ಋಣ ಪರಿಹಾರ ಅಧಿನಿಯಮ ಜಾರಿಗೆ ತಂದಿದ್ದೇನೆ. ಆದರೆ, ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದು ಹೇಳುವ ಮೂಲಕ ತಾವು ಜನಾಕ್ರೋಶದಿಂದ ಪಾರಾಗಬಹುದು. ಆದರೆ, ಅದು ಕಾಂಗ್ರೆಸ್ಸನ್ನು ಸುತ್ತಿಕೊಳ್ಳುತ್ತದೆ. ಈ ರೀತಿಯ ಆರೋಪ ಬಂದರೆ ಮತ್ತೆ ಚುನಾವಣೆ ನಡೆದರೆ ಕಾಂಗ್ರೆಸ್ ವಿರುದ್ಧ ಜನ ಸಿಡಿದೇಳುವ ವಾತಾವರಣ ಸೃಷ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ ಅದು ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಇನ್ನಷ್ಟು ದಿನ ಮುಂದುವರಿಯಬಹುದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಕೆಶಿ, ಪರಮೇಶ್ವರ್‌ಗೆ ಅರ್ಥವಾಗಿದೆಯೇ ಈ ತಂತ್ರ
ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿರುವ ತಂತ್ರಗಾರಿಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಅರ್ಥವಾಗಿದೆ. ಈ ಕಾರಣಕ್ಕಾಗಿಯೇ ಅವರು ಮುಖ್ಯಮಂತ್ರಿಯವರ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರನ್ನು ಸುಮ್ಮನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಈ ಇಬ್ಬರಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮೊದಲಿನಿಂದಲೂ ಅಸಮಾಧಾನವಿದೆ. ಸರ್ಕಾರ ಉರುಳಿ ಮತ್ತೆ ಚುನಾವಣೆ ಎದುರಾದರೆ ಆಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿರುತ್ತಾರೆ. ತಮಗೆ ಅವಕಾಶ ಸಿಗುವುದು ಕಷ್ಟ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.