ಅಂದು ಬೆಳಗ್ಗೆ 7:24 ಧರ್ಮಸಿಂಗ್ ರು ನನಗೆ ಮೊಬೈಲ್ ಕರೆ ಮಾಡಿ ಬಿಹಾರದಲ್ಲಿ ನಿತೀಶಕುಮಾರ ಅವರು ಮಹಾಘಟ ಬಂಧನ್
ಒಡೆದು ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸುವ ಬಗ್ಗೆ ಚರ್ಚಿಸಿದರು. ದೇಶದಲ್ಲಿ ಒಂದೊಂದು ರಾಜ್ಯವನ್ನು ಕಾಂಗ್ರೆಸ್ ಪಕ್ಷ ಆಡಳಿತ ಕಳೆದುಕೊಳ್ಳುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇದು ಒಬ್ಬ ವ್ಯಕ್ತಿ ಪಕ್ಷವನ್ನು ನೆಚ್ಚಿಕೊಂಡಿರುವ ಪರಿ ವಿವರಿಸುತ್ತದೆ. ಧರ್ಮಸಿಂಗ್ ಅವರ ಉಸಿರೇ ಕಾಂಗ್ರೆಸ್ ಎನ್ನುವುದನ್ನು ಬಲಪಡಿಸುತ್ತದೆ. ಆಗ ಅವರು ಮಾತನಾಡುವ ಸಂದರ್ಭದಲ್ಲೇ ಧ್ವನಿಯಲ್ಲಿ ಏನೋ ಆತಂಕ ಕಾಡುತ್ತಿತ್ತು. ಇದಾದ ಎರಡು ಗಂಟೆಗಳ ನಂತರ ಅವರ ಸಾವಿನ ಸುದ್ದಿ
ನನ್ನ ಕಿವಿಗೆ ಬೀಳುತ್ತದೆ ಎನ್ನುವುದನ್ನು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅವರ ನಿಧನ ಸುದ್ದಿ ಎದೆ ಒಡೆದಂತೆ ಆಗಿತ್ತು. ತಕ್ಷಣ ವಾಹನ ನಿಲ್ಲಿಸಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ಬಿಕ್ಕಿ ಅತ್ತಿದ್ದೆ. ಧರ್ಮಸಿಂಗ್ ಅವರು ಓದಿದ್ದು ಹೈದ್ರಾಬಾದ್‌ನ ಉಸ್ಮಾನಿಯಾ
ವಿವಿಯಲ್ಲಿ ಹಿಂದಿ ಎಂ.ಎ., ಆಗ ವಿವಿಯಲ್ಲಿ ಎಡ ವಿಚಾರಬಾದಿಗಳ ಪ್ರಭಾವ ಬಹಳ ಇತ್ತು. ಎಡ ವಿಚಾರವಾದಿಗಳ ಪ್ರಭಾವಕ್ಕೆ
ಒಳಗಾಗದೆ ಮಾರ್ಕ್ಸ್ವಾದ, ಮಾವೋ ವಿಚಾರಧಾರೆ ಮೈಗೂಢಿಸಿಕೊಂಡಿದ್ದರು. ನಂತರ ಶಹಾಬಜಾರ ದಯಾನಂದ ಹಿಂದಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡರು. ಒಂದು ವೇಳೆ ರಾಜಕೀಯಕ್ಕೆ ಬಾರದಿದ್ದರೆ ಶಿಕ್ಷಕರಾಗಿ ನಿವೃತ್ತಿಯಾಗುತ್ತಿದ್ದರು. ಇದನ್ನು
ಅವರು ಆಗಾಗ ಹೇಳುತ್ತಿದ್ದರು. ನಟ ದಿಲೀಪಕುಮಾರ ಅವರನ್ನು ನೆಚ್ಚಿಕೊಂಡಿದ್ದರೆ, ಸಾಹಿತಿಯಾಗಿ ಪ್ರೇಮಚಂದ ಅವರನ್ನು
ಮೆಚ್ಚಿಕೊಂಡಿದ್ದರು. ಪ್ರೇಮಚಂದ ಅವರ ಗೋದಾನ ಕೃತಿಯನ್ನು ಪರಿಣಾಮಕಾರಿಯಾಗಿ ಓದಿದ್ದರು. ಅನೇಕ ಸಲ ಉದಾಹರಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಮಹಾತ್ಮಾಗಾಂಧೀಜಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೆನಿನ್ ಅವರನ್ನು ಸಹ ಮೆಚ್ಚಿಕೊಂಡಿದ್ದರು. ಇಷ್ಟದ ಊರು ನೆಲೋಗಿ ಎನ್ನುತ್ತಿದ್ದರು.
Advertisement
ಸಿ.ಬಿ.ಪಾಟೀಲ ಓಕಳಿ, ಕೆಪಿಸಿಸಿ ಕಾರ್ಯದರ್ಶಿ