Advertisement

ಅಸಮಾಧಾನದ ಲಾಭದತ್ತ ಕಾಂಗ್ರೆಸ್‌ ಚಿತ್ತ

11:45 AM May 07, 2019 | Team Udayavani |
ಬೆಳಗಾವಿ: ಇತಿಹಾಸ ಪ್ರಸಿದ್ಧ ಹಾಗೂ ಶಕ್ತಿ ದೇವತೆ ಏಳು ಕೊಳ್ಳದ ಯಲ್ಲಮ್ಮ ದೇವಿಯ ವಿಜಯದ ಆಶೀರ್ವಾದ ಯಾರ ಮೇಲೆ? ಅಲೆ ಇಲ್ಲವೇ ಅಸಮಾಧಾನದ ಲಾಭ ಯಾರಿಗೆ. ಇದು ಲೋಕಸಭೆ ಚುನಾವಣೆಯ ಮತದಾನದ ನಂತರ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಕುತೂಹಲದ ಚರ್ಚೆ ಹಾಗೂ ಲೆಕ್ಕಾಚಾರ.

ಮತ ಎಣಿಕೆ ದಿನ ಬರುವವರೆಗೆ ಕ್ಷೇತ್ರದಲ್ಲಿ ಈ ಚರ್ಚೆ ನಡೆದಿರುವುದು ಕಾಣುತ್ತದೆ. ಒಂದು ಕಡೆ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಗಳಿಸುತ್ತಾರೆ ಎಂಬ ಮಾತುಗಳು ಕೇಳಿಬಂದರೆ ಇನ್ನೊಂದು ಕಡೆ ಕಾಂಗ್ರೆಸ್‌ ಕಳೆದ ಸಲಕ್ಕಿಂತ ಈ ಸಲ ಹೆಚ್ಚಿನ ಮತಗಳನ್ನು ಗಳಿಸಲಿದೆ. ಪಕ್ಷದ ಅಭ್ಯರ್ಥಿ ಸಾಧುನವರ ಸವದತ್ತಿಯಿಂದ ಒಳ್ಳೆಯ ಮುನ್ನಡೆ ಪಡೆಯಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Advertisement

ಮತದಾನ ನಡೆದ ನಂತರ ಕ್ಷೇತ್ರದ ಜನರ ಮೂಡ್‌ ಹೇಗಿದೆ ಎಂದು ತಿಳಿಯಲು ಒಂದು ಸುತ್ತು ಓಡಾಡಿದರೆ ಯುವ ಸಮುದಾಯ ಬಹುತೇಕ ಮೋದಿ ಅಲೆಗೆ ಮಾರು ಹೋಗಿರುವುದು ಕಂಡುಬಂತು. ಅದರ ಜೊತೆಗೆ ಕಾಂಗ್ರೆಸ್‌ನ ನಿಷ್ಠಾವಂತ ಮತದಾರರು ಈ ಬಾರಿಯೂ ಸಹ ತಮ್ಮ ನಿಷ್ಠೆ ಬದಲಿಸದೇ ಇರುವುದು ವಿಶೇಷವಾಗಿದೆ. ಇದೇ ಆಧಾರದ ಮೇಲೆ ಕಾಂಗ್ರೆಸ್‌ ಹಾಗೂ ಬಿಜೆಪಿ ವಲಯದಲ್ಲಿ ಮುನ್ನಡೆ ಗಳಿಸುವ ಲೆಕ್ಕಾಚಾರ ಜೋರಾಗಿ ನಡೆದಿದೆ..

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಸಹಜವಾಗಿಯೇ ಅಭ್ಯರ್ಥಿ ಸುರೇಶ ಅಂಗಡಿ ಹೆಚ್ಚಿನ ಮತಗಳನ್ನು ಪಡೆಯಲಿದ್ದಾರೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಸಹ ಎಲ್ಲ ಕಡೆ ಇದ್ದು ಇದು ಮತದಾರರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ನಮಗೆ ಹೆಚ್ಚಿನ ಮತಗಳ ಅಂತರ ಸಿಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಒಟ್ಟು ಮತದಾರರು 1,94,081

ಮತ ಚಲಾಯಿಸಿದವರು 1,36,407

Advertisement

ಪುರುಷರು 72,034

ಮಹಿಳೆಯರು 64,373

ಆದರೆ ಕಾಂಗ್ರೆಸ್‌ ನಾಯಕರು ಹೇಳುವುದೇ ಬೇರೆ. ಬಿಜೆಪಿ ಅಭ್ಯರ್ಥಿಯ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನ ಇದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರು ತಾಲೂಕಿಗೆ ಬಂದಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಬಹಳ ಕಡಿಮೆ. ಹೀಗಾಗಿ ಜನರು ಈ ಬಾರಿ ಬಿಜೆಪಿಯಿಂದ ದೂರ ಉಳಿದಿದ್ದರು. ಅದು ನಮಗೆ ಅನುಕೂಲವಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾಗಿ ಸುಮಾರು 86 ಸಾವಿರ ಮತದಾರರು ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಮತಗಳು ನಮ್ಮವರ ಬಂಡಾಯದಿಂದ ಹಂಚಿಹೋಗಿದ್ದವು. ಈ ಎಲ್ಲ ಮತಗಳು ಈಗ ಒಂದಾಗಿ ಕಾಂಗ್ರೆಸ್‌ಗೆ ಬಂದಿವೆ. ಹೀಗಾಗಿ ನಮ್ಮ ಅಭ್ಯರ್ಥಿ ಸಾಧುನವರ ಮುನ್ನಡೆ ಪಡೆಯುತ್ತಾರೆ ಎಂಬುದು ಕಾಂಗ್ರೆಸ್‌ ನಾಯಕರ ವಿಶ್ವಾಸದ ಮಾತು.

.ಕೇಶವ ಆದಿ

 

Advertisement

Udayavani is now on Telegram. Click here to join our channel and stay updated with the latest news.

Next