ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಹೇಳಿದರೆ, ಆಶ್ಚರ್ಯ ಪಡ್ತೀರಾ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ “ಬಾಂಬ್’ಸಿಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರಲು ಯಾರೆಲ್ಲ ನಮ್ಮನ್ನು ಸಂಪರ್ಕ ಮಾಡಿದ್ದರು ಎಂದು ಹೇಳಿದರೆ ಶಾಕ್ ಆಗ್ತಿàರಾ. ನಮ್ಮ ಪಕ್ಷ ಸೇರುವವರ ದೊಡ್ಡ ಪಟ್ಟಿಯೇ ಇದೆ. ಸದ್ಯ ನಾನು ಯಾವುದನ್ನೂ ಹೇಳುವುದಿಲ್ಲ. ಸಂದರ್ಭ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.
ಉದ್ಯಮಿ ವರಪ್ರಸಾದ ರೆಡ್ಡಿ ಯಾವುದೋ ಒತ್ತಡದಿಂದ ಬಿಜೆಪಿ ಸೇರಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಐಟಿ ದಾಳಿಗೆ ಹೆದರಿ ಪಕ್ಷ ಸೇರಿದ್ದಾರೆ ಎನ್ನುವ ಕುರಿತು ನಾನು ಮಾತನಾಡುವುದಿಲ್ಲ, ಐಟಿ ದಾಳಿ ಕುರಿತು ಸಧ್ಯಕ್ಕೆ ಏನೂ ಮಾತನಾಡುವುದಿಲ್ಲ.
ಮಾತನಾಡುವ ಸಮಯ ಬಂದಾಗ ಖಂಡಿತ ಅದರ ಬಗ್ಗೆ ಮಾತನಾಡುತ್ತೇನೆ ಎಂದರು. ಏಳು ಜನ ಜೆಡಿಎಸ್ ಬಂಡಾಯ ಶಾಸಕರು ಪಕ್ಷಕ್ಕೆ ಬರುವುದರಿಂದ ಅವರ ಕ್ಷೇತ್ರಗಳಲ್ಲಿ ಯಾವುದೇ ಗೊಂದಲ ಇಲ್ಲ. ಮಾಗಡಿ ಸೇರಿದಂತೆ ಎರಡು ಮೂರು ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಗೊಂದಲಗಳಿವೆ.
ಅದನ್ನು ನಾವು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಕುಳಿತು ಚರ್ಚಿಸಿ ಬಗೆ ಹರಿಸಿಕೊಳ್ಳುತ್ತೇವೆ. ನಮ್ಮ ಪಕ್ಷಕ್ಕೆ ಬರುತ್ತಿರುವ ಏಳೂ ಜನ ಶಾಸಕರು ಬರಿಗೈಯಲ್ಲಿ ಬರುತ್ತಿಲ್ಲ, ಅವರೂ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಅವರಿಗೆ ಪಕ್ಷ ಸೂಕ್ತ ಅವಕಾಶ ನೀಡಲಿದೆ ಎಂದು ಹೇಳಿದರು.