Advertisement

ಕಾಂಗ್ರೆಸ್‌ ಸರ್ಕಾರ ಕೆಟ್ಟು ಹೋದ ಪರಿವರ್ತಕ 

06:00 AM May 02, 2018 | Team Udayavani |

ಶೃಂಗೇರಿ: “5 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೆಟ್ಟು ಹೋದ ವಿದ್ಯುತ್‌ ಪರಿವರ್ತಕ ಇದ್ದಂತೆ. ಅದನ್ನು ಬದಲಿಸಲಾಗದು, ಕಿತ್ತೆಸೆಯಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಟೀಕಾಪ್ರಹಾರ ನಡೆಸಿದರು.

Advertisement

ಶೃಂಗೇರಿ ಹೊರವಲಯದ ಭಕ್ತಂಪುರದಲ್ಲಿ ಮಂಗಳವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. “ವಿದ್ಯುತ್‌ ತಂತಿಯೊಂದು ಮನೆಯ ಮೇಲೆ ಹಾದು ಹೋದರೆ ಅದರಿಂದ ಮನೆಗೆ ವಿದ್ಯುತ್‌ ಬರುವುದಿಲ್ಲ. ಅಲ್ಲಿ ಒಂದು ವಿದ್ಯುತ್‌ ಪರಿವರ್ತಕ ಅಳವಡಿಸಬೇಕು. ಆದರೆ, ಆ ಪರಿವರ್ತಕವೇ ಕೆಟ್ಟು ಹೋದರೆ ಅದನ್ನು ಬದಲಿಸುವುದಕ್ಕಿಂತ ಕಿತ್ತೆಸೆಯಬೇಕು. ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರದ ಸ್ಥಿತಿ ಇದು. ಈ ಸರ್ಕಾರ ಯಾವುದೇ ರೀತಿಯ ಅಭಿವೃದ್ಧಿ ಮಾಡಲಿಲ್ಲ. ಯಡಿಯೂರಪ್ಪ ಅವರಿಗೆ ಇನ್ನೈದು ವರ್ಷ ಅವಕಾಶ ನೀಡಿ. ಈ ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂ.1 ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ’ ಎಂದರು.  “ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಆದರೆ ಅಲ್ಲಿ ಗೆಲ್ಲಲು ಸಾಧ್ಯವಾಗಲ್ಲ ಎಂಬುದನ್ನು ಅರಿತು ಬಾದಾಮಿಗೆ ಓಡಿ ಹೋಗಿದ್ದಾರೆ. ತಮ್ಮ ಕ್ಷೇತ್ರದಲ್ಲೇ ಗೆಲ್ಲಲಾಗದವರು ಈ ರಾಜ್ಯವನ್ನು ಉದ್ದಾರ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ದೇವೇಗೌಡರ ಸಹಕಾರ ಬೇಡ
ಅರಕಲಗೂಡು: “ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ದೇವೇಗೌಡರ ಸಹಕಾರದ ಅವಶ್ಯಕತೆಯಿಲ್ಲ. ಬಿಜೆಪಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿ, ರಾಜ್ಯದಲ್ಲಿ ಅತಂತ್ರ ವ್ಯವಸ್ಥೆ ತಲೆದೋರುತ್ತದೆ. ಆದ್ದರಿಂದ ಬಿಜೆಪಿ, ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತದೆ ಎಂಬ ಸುದ್ದಿಯಿಂದ ದೇವೇಗೌಡರು ಬಿಜೆಪಿಗೆ ಸಹಕಾರ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ಹೇಳಿಕೆ ಕೇಳಿದೆ. ಆದರೆ, ದೇವೇಗೌಡರ ಸಹಕಾರದ ಅವಶ್ಯಕತೆ ಬಿಜೆಪಿಗಿಲ್ಲ. ರಾಜ್ಯದ ಜನತೆ ಕೇಂದ್ರದಲ್ಲಿನ ಬಿಜೆಪಿ ಆಡಳಿತ ಕಂಡು ಈ ಬಾರಿ ರಾಜ್ಯದಲ್ಲಿಯೂ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ರೈತರ ಚಿಂತಕ ಯಡಿಯೂರಪ್ಪ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಲಿದ್ದಾರೆ ಎಂದರು.

ರಂಭಾಪುರಿ ಪೀಠಕ್ಕೆ ಭೇಟಿ
ಬಾಳೆಹೊನ್ನೂರು: ಅಮಿತ್‌ ಶಾ ಮಂಗಳವಾರ ಮಧ್ಯಾಹ್ನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಪೂಜೆ ಸಲ್ಲಿಸಿ ನಂತರ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬಳಿಕ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರೊಂದಿಗೆ ವಿಧಾನಸಭಾ ಚುನಾವಣೆಯ
ವಿಷಯಗಳ ಬಗ್ಗೆ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ವೇಳೆ ಶ್ರೀಗಳು, ವೀರಶೈವ ಲಿಂಗಾಯಿತ ಧರ್ಮ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ತಿಳಿಸಿದರಲ್ಲದೆ ವೀರಶೈವ ಲಿಂಗಾಯತ ಧರ್ಮದ ಸಮಗ್ರ 
ಮಾಹಿತಿಯನ್ನೊಳಗೊಂಡ ಮನವಿ ಪತ್ರವನ್ನು ಶಾ ಅವರಿಗೆ ನೀಡಿ ಪರಿಶೀಲಿಸುವಂತೆ ತಿಳಿಸಿದರು. ನಂತರ, ಅಲ್ಲಿಯೇ ಶಾ ಭೋಜನ ಸವಿದರು.

ಇಂದು ರೈತರೊಂದಿಗೆ ಮೋದಿ ಸಂವಾದ
ನವದೆಹಲಿ: ಕರ್ನಾಟಕದಲ್ಲಿ ಮಂಗಳವಾರ ತಮ್ಮ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಬುಧವಾರ ಸಾವಿರಾರು ರೈತರೊಂದಿಗೆ ತಮ್ಮ ಮೊಬೈಲ್‌ ಆ್ಯಪ್‌ ಮೂಲಕ ನೇರ ಸಂವಾದ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ “ಕಿಸಾನ್‌ ಕಲ್ಯಾಣ್‌ ಕಾರ್ಯಶಾಲಾ’ ಕಾರ್ಯಾಗಾರವನ್ನು ದೇಶದಾದ್ಯಂತ ಆಯೋಜಿಸುತ್ತಿದ್ದು, ಇದರ ಉದ್ಘಾಟನಾ ದಿನದಂದೇ ಮೋದಿ, ರಾಜ್ಯದ ರೈತರೊಂದಿಗೆ ಈ ಸಂವಾದ ನಡೆಸುತ್ತಿರುವುದು ವಿಶೇಷ. ಇತ್ತೀಚೆಗಷ್ಟೇ, ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳ ಜತೆಗೆ ಅವರು ಆ್ಯಪ್‌ ಮೂಲಕ ಸಂವಾದ ನಡೆಸಿದ್ದರು. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಮಸ್ಯೆಗಳ  ವಿಚಾರವು ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಚುನಾವಣಾ ವಾಕ್ಸಮರಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ, ಮೋದಿ ಹಾಗೂ ರಾಜ್ಯದ ರೈತರ ನಡುವಿನ ಸಂವಾದ ಕುತೂಹಲ ಕೆರಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next