Advertisement
ತಮಗೆ ಉಪಮುಖ್ಯಮಂತ್ರಿ ಸ್ಥಾನವೇ ಬೇಕೆಂದು ಪಟ್ಟು ಹಿಡಿದಿದ್ದ ಮತ್ತು ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿಸಚಿವ ಸ್ಥಾನ ತೆಗೆದುಕೊಳ್ಳಲು ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಎಂದು ಹೇಳಿದ್ದ ಎಂ.ಬಿ.ಪಾಟೀಲ್, ಮತ್ತೂಂದು ಉಪಮುಖ್ಯಮಂತ್ರಿ ಸ್ಥಾನ ಇಲ್ಲವೆಂಬ ವರಿಷ್ಠರ ಹೇಳಿಕೆಯಿಂದಾಗಿ ಮತ್ತಷ್ಟು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ, ತಾವು ಸ್ಥಾನಮಾನದ ಬಗ್ಗೆ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿಯೇ ಇಲ್ಲ. ನನ್ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.
Related Articles
ಮಾಡಿರುವ ನೀರಾವರಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಆದರೆ, ಯಾವುದೇ ಹುದ್ದೆಗೂ ಬೇಡಿಕೆ ಇಟ್ಟಿಲ್ಲ. ಮಂತ್ರಿ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳನ್ನು ಕೇಳಿಲ್ಲ. ನನ್ನ ಭಾವನೆಗಳನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡಿದ್ದೇನೆ ಎಂದರು.
Advertisement
ರಾಜ್ಯದ ವಿದ್ಯಮಾನಗಳನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ.ಬಿಜೆಪಿಯಿಂದ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚೆ ನಡೆಸಿದ್ದು, ಚರ್ಚೆಯ ಯಾವ ವಿಷಯವನ್ನೂ ಬಹಿರಂಗ ಪಡಿಸುವುದಿಲ್ಲ. ನನಗೆ ಆಪ್ತರಾಗಿರುವ ಒಂದಷ್ಟು ಮುಖಂಡರ ಜತೆಗೆ ರಾಹುಲ್ ಗಾಂಧಿ ಜತೆಗಿನ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದರು. ಪಕ್ಷದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆಂಬ ವರದಿಗಳ
ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನಗೇನೂಗೊತ್ತಿಲ್ಲ. ಇದಕ್ಕೆ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು. ನನಗಾಗಿರುವ ಅನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಹೇಳಿಕೊಂಡಿದ್ದೇನೆ ಅಷ್ಟೆ ಎಂದು ತಿಳಿಸಿದರು. ಸಂಸದ ಪ್ರಕಾಶ್ ಹುಕ್ಕೇರಿ ಭೇಟಿ: ಈ ಮಧ್ಯೆ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಭಾನುವಾರ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಪ್ರಕಾಶ್ ಹುಕ್ಕೇರಿ ಅವರು ಮುನಿಸಿಕೊಂಡಿರುವ ಪಾಟೀಲರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಚರ್ಚೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಹುಕ್ಕೇರಿ, ರಾಜಕೀಯ ವಿಚಾರಗಳ ಬಗ್ಗೆ ಎಂ.ಬಿ.ಪಾಟೀಲರೊಂದಿಗೆ ಚರ್ಚಿಸಿಲ್ಲ. ನಮ್ಮ ಭಾಗದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಅವರು ಸಾಕಷ್ಟು ಕೆಲಸ ಮಾಡಿದ್ದು, ಆ ಕುರಿತಂತೆ ಸಮಾಲೋಚನೆ ನಡೆಸಿದ್ದೇನೆ. ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ಶಾಸಕನಲ್ಲ, ಸಂಸದ ಎಂದರು. ಪಾಟೀಲ್ ಭೇಟಿ ಮಾಡಿದ ಬಿಜೆಪಿ ಶಾಸಕ
ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಎಂ.ಬಿ.ಪಾಟೀಲ್ ಅವರನ್ನು
ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಊಹಾಪೋಹಗಳ ಮಧ್ಯೆಯೇ ರಾಯಚೂರು ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಭಾನುವಾರ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಯಿತು. ಎಂ.ಬಿ.ಪಾಟೀಲರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ ಶಿವರಾಜ್ ಪಾಟೀಲ್ ಐದು ನಿಮಿಷ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಭೇಟಿ ವೇಳೆ ರಾಜಕೀಯ ಚರ್ಚೆ ನಡೆಸಿಲ್ಲ. ಎಂ.ಬಿ.ಪಾಟೀಲ್ ನಮಗೆ ಸಂಬಂಧಿಕರಾಗಬೇಕಿದ್ದು, ಔಪಚಾರಿಕ ಮಾತುಕತೆ ನಡೆಸಿದ್ದೇನೆ. ನಮ್ಮದು ಪಕ್ಷ ಮೀರಿದ ಸಂಬಂಧ ಎಂದು ಹೇಳಿದರು.