Advertisement

ಋಣಮುಕ್ತರಾಗಲು ಕಾಯ್ದೆಯ ಗೊಂದಲ!

11:35 PM Sep 04, 2019 | mahesh |

ಕುಂದಾಪುರ: ರಾಜ್ಯದ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಜಾರಿಗೆ ತಂದ ಋಣ ಮುಕ್ತ ಕಾಯ್ದೆ ಅನುಷ್ಠಾನದಲ್ಲಿ ಗೊಂದಲ ಮುಂದುವರಿದಿದೆ. ಸಾರ್ವಜನಿಕರು ಅರ್ಜಿ ಹಿಡಿದು ಸಹಾಯಕ ಕಮಿ ಷನರ್‌ ಅವರ ಕಚೇರಿಗೆ ಬರುತ್ತಿದ್ದು ಅರ್ಜಿ ಸ್ವೀಕಾರಕ್ಕೇ ಸಿಬಂದಿ ಹಿಂದೇಟು ಹಾಕುತ್ತಿದ್ದಾರೆ!. ಬುಧವಾರ ಕಾಪು, ಗಂಗೊಳ್ಳಿ, ಬೈಂದೂರು ಮೊದಲಾದೆಡೆಯಿಂದ ಬಂದವರು ಮರಳಿ ಹೋಗಬೇಕಾಯಿತು.

Advertisement

ಬಡ್ಡಿ ವ್ಯಾಪಾರಿಗಳಿಂದ ಪಡೆದ ಸಾಲದ ಹಣ ಮನ್ನಾ ಅಗಲಿದೆ, ಕೈ ಸಾಲ ಮನ್ನಾ ಆಗಲಿದೆ ಎಂದು ನಂಬಿದ್ದ ಜನಕ್ಕೆ ಆರಂಭದಲ್ಲೇ ನಿರಾಶೆಯಾಗಿದೆ. ಕುಮಾರಸ್ವಾಮಿ ಅವರು ನಾನು ಅಧಿಕಾರಕ್ಕೆ ಬಂದರೆ ಕೈಸಾಲ ಪಡೆದ ವರಿಗೆ ಸಾಮಾಜಿಕ ನ್ಯಾಯ ನೀಡುವ ಋಣಮುಕ್ತ ಕಾಯ್ದೆ ತರುತ್ತೇನೆ ಎಂದು ತಿಳಿಸಿದ್ದರು.

ಏನಿದು ಋಣ ಮುಕ್ತ ಕಾಯ್ದೆ?

ಖಾಸಗಿ ಲೇವಾದೇವಿಗಾರರಿಂದ ಪಡೆದ ಕೈಸಾಲ ಮನ್ನಾ ಮಾಡುವ ಕಾಯ್ದೆ ಇದಾಗಿದ್ದು ನೋಡಲ್ ಅಧಿಕಾರಿಗೆ 90 ದಿನಗಳಲ್ಲಿ ಮಾಹಿತಿ ನೀಡಿದರೆ ಸಾಲ ಕಟ್ಟುವಂತಿಲ್ಲ. ಒಂದು ಕುಟುಂಬಕ್ಕೆ ಒಂದು ಬಾರಿಯಷ್ಟೇ ಸಂಪೂರ್ಣ ಸಾಲಮನ್ನಾ ಸೌಲಭ್ಯ ಸಿಗಲಿದೆ. ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದ್ದು ಜಾರಿಯಾಗಿದೆ.

ಋಣಮುಕ್ತ ಕಾಯ್ದೆಯ ಷರತ್ತುಗಳೇನು?

Advertisement

ಭೂಮಿ ಇಲ್ಲದ, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡರೈತರಿಗೆ ಅಥವಾ ವಾರ್ಷಿಕ 1.20 ಲಕ್ಷ ರೂ. ಆದಾಯ ಇರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಅಡಿ ಕೆಲಸ ಮಾಡುವ ಹಣಕಾಸು ಸಂಸ್ಥೆಗಳು ಈ ಕಾಯ್ದೆಗೆ ಒಳಪಡುವುದಿಲ್ಲ. ರಿಜಿಸ್ಟರ್ಡ್‌ ಫೈನಾನ್ಸ್‌ ಸಂಸ್ಥೆಗಳಿಗೆ, ಸಹಕಾರಿ ಸಂಘಗಳು, ನೋಂದಾಯಿತ ಫೈನಾನ್ಸ್‌ಗಳಿಗೆ ಇದು ಅನ್ವಯ ಆಗುವುದಿಲ್ಲ.

ಯೋಜನೆಯ ಲಾಭ

ನೋಡೆಲ್ ಆಫೀಸರ್‌ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. ಪ್ರತಿ ತಾಲೂಕಿಗೆ ಸಹಾಯಕ ಕಮಿ ಷನರ್‌ ನೋಡಲ್ ಅಧಿಕಾರಿ ಆಗಿದ್ದಾರೆ. 90 ದಿನಗಳ ಒಳಗೆ ಸಾಲದ ಮಾಹಿತಿ ದಾಖಲೆ ಸಮೇತ ನೋಡಲ್ ಅಧಿಕಾರಿಗೆ ನೀಡಬೇಕಾಗುತ್ತದೆ. ದಾಖಲಾತಿ ಪರಿಶೀಲನೆ ಬಳಿಕ ಅಡವಿಟ್ಟ ವಸ್ತು ಬಿಡುಗಡೆಗೆ ಆದೇಶ ನೀಡಲಾಗುತ್ತದೆ.

ಅರ್ಜಿ ನಿರಾಕರಣೆ

ಕಾಪು, ಬೈಂದೂರು, ಗಂಗೊಳ್ಳಿ ಮೊದಲಾದೆಡೆ ಯಿಂದ ಇಲ್ಲಿನ ಮಿನಿವಿಧಾನಸೌಧದಲ್ಲಿ ಅರ್ಜಿ ನೀಡಲು ಬಂದಾಗ ಸಹಾಯಕ ಕಮಿಷನರ್‌ ಕಚೇರಿ ಸಿಬಂದಿ ಅರ್ಜಿ ಸ್ವೀಕರಿಸಲು ನಿರಾಕರಿಸಿದರು ಎಂದು ಫ‌ಲಾನುಭವಿಗಳು ಮಾಧ್ಯಮದ ಮುಂದೆ ಆಪಾದಿಸಿದ್ದಾರೆ. ಕೆಲವು ಸಂಸ್ಥೆಗಳು ಶೇ.24ರಷ್ಟು ಬಡ್ಡಿ ಸ್ವೀಕರಿಸುತ್ತಿದ್ದಾರೆ. ನಾವು ನಮ್ಮ ಅಗತ್ಯ, ಅನಿವಾರ್ಯಕ್ಕಾಗಿ ಸಾಲ ಪಡೆದಿದ್ದೇವೆ. ಮನ್ನಾ ಎಂಬ ಮಾಹಿತಿ ಬಂದ ಕಾರಣ ಅರ್ಜಿ ನೀಡಲು ಬಂದಿದ್ದೆವು. ಆದರೆ ಇಲ್ಲಿ ; ಸಿಬಂದಿ ಇಲ್ಲ, ನೋಟಿಸ್‌ ಬೋರ್ಡು ನೋಡಿ, ಎಲ್ಲರೂ ಅರ್ಜಿ ತಂದರೆ ನಾವೇನು ಮಾಡುವುದು ಎಂದು ಕಾರಣಗಳನ್ನು ನೀಡುತ್ತಿದ್ದಾರೆ ಎಂದು ರೇವತಿ ಗುಜ್ಜಾಡಿ ಹೇಳಿದರು. ಎಲ್ಲೆಲ್ಲಿಂದ ಬಂದರೂ ಅರ್ಜಿ ಸ್ವೀಕರಿಸದೇ ಮರಳಿ ಕಳುಹಿಸಲಾಗುತ್ತಿದೆ. ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ. ಯಾವ ಸಾಲ ಮನ್ನಾ ಆಗುತ್ತದೆ ಎಂಬ ಕುರಿತು ನಮಗೆ ಒಂದಷ್ಟು ಗೊಂದಲ ಇದೆ. ಎಸಿ ಕಚೇರಿ ಅಲ್ಲದೇ ಬೇರೆಡೆ ಅರ್ಜಿ ನೀಡುವಂತೆಯೂ ಇಲ್ಲ. ಇಲ್ಲಿ ಐವರಿದ್ದೆವು, ಈಗ ಮೂವರೇ ಇರುವುದು, ಸಿಬಂದಿಯಿಲ್ಲ ಎಂದು ಹೇಳುತ್ತಾ ಅರ್ಜಿ ತೆಗೆದುಕೊಳ್ಳುವುದಿಲ್ಲ. ಸರಕಾರಿ ಕಚೇರಿಯಲ್ಲಿ ಸಿಬಂದಿ ಇಲ್ಲದಿದ್ದರೆ ನಾವೇನು ಮಾಡುವುದು ಎಂದು ಸುಶೀಲಾ ಅಲವತ್ತುಕೊಂಡರು. ಸಹಾಯಕ ಕಮಿಷನರ್‌ ಅವರು ಕಚೇರಿಯಲ್ಲಿ ಇರಲಿಲ್ಲ. ಕಾರ್ಕಳಕ್ಕೆ ತೆರಳಿದ್ದರು. ಆದ್ದರಿಂದ ಫ‌ಲಾನುಭವಿಗಳಿಗೆ ದೂರನ್ನು ನೇರ ಅವರ ಗಮನಕ್ಕೆ ತರಲು ಸಾಧ್ಯವಾಗಲಿಲ್ಲ.

ಡಿಸಿ ಸೂಚನೆಯಂತೆ ಬಂದೆವು

ನಾವು ದೂರದಿಂದ ಬಹಳಷ್ಟು ಮಂದಿ ಅರ್ಜಿ ತೆಗೆದುಕೊಂಡು ಬಂದಿದ್ದೇವೆ. ಇಲ್ಲಿ ಅರ್ಜಿ ಸ್ವೀಕರಿಸಲು ಸಿಬಂದಿ ಕೊರತೆ ಕಾರಣ ಹೇಳಿ ನಿರಾಕರಿಸುತ್ತಿದ್ದಾರೆ. ಆದ್ದರಿಂದ ಮರಳಿ ಹೋಗ ಬೇಕಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾಗ ಇಲ್ಲಿ ಅರ್ಜಿ ನೀಡಲು ಸೂಚಿಸಿದ್ದರು. ವಸೂಲಾತಿಗೆ ಪೀಡಿಸಿದರೆ ಪೊಲೀಸ್‌ ದೂರು ನೀಡುವಂತೆ ಸೂಚಿಸಿದ್ದಾರೆ.
-ಜೋಗ ಪೂಜಾರಿ,ಗಂಗೊಳ್ಳಿ

ನಿರಾಕರಿಸುವಂತಿಲ್ಲ

ಕಚೇರಿ ಮೆನೇಜರ್‌ಗೆ ಸುತ್ತೋಲೆ ಪ್ರತಿ ನೀಡಿ ಅರ್ಜಿ ಸ್ವೀಕರಿಸುವಂತೆ ಸೂಚಿಸ ಲಾಗಿದೆ. ಸೂಚನಾ ಫ‌ಲಕದಲ್ಲೂ ಹಾಕ ಲಾಗಿದೆ. ಅದರ ಮಾನದಂಡದಂತೆ ಅರ್ಜಿ ನೀಡಿದರೆ ಸ್ವೀಕರಿಸಲಾಗುತ್ತದೆ. ಬಳಿಕ ಕಾನೂನು ವ್ಯಾಪ್ತಿಯಲ್ಲಿ ಇದೆಯೇ ಎಂದು ಪರಿಶೀಲಿಸಲಾಗುತ್ತದೆ. ಕಚೇರಿ ಸಿಬಂದಿ ಅರ್ಜಿ ಸ್ವೀಕರಿಸಲು ನಿರಾಕರಿಸಿದರೆ ಸೂಚನೆ ನೀಡಲಾಗುವುದು.
-ಡಾ| ಎಸ್‌. ಎಸ್‌. ಮಧುಕೇಶ್ವರ್‌, ಸಹಾಯಕ ಕಮಿಷನರ್‌, ಕುಂದಾಪುರ
Advertisement

Udayavani is now on Telegram. Click here to join our channel and stay updated with the latest news.

Next