Advertisement

ನನ್ನ-ಸಿದ್ದು ನಡುವಿನ ತಿಕ್ಕಾಟ ದೊಡ್ಡದಲ್ಲ

02:38 AM May 15, 2019 | Team Udayavani |

ಹುಬ್ಬಳ್ಳಿ: “ಸಮ್ಮಿಶ್ರ ಸರಕಾರಕ್ಕೆ ಧಕ್ಕೆಯಾ ಗುವಂತಹ ಯಾವುದೇ ಭಿನ್ನಾಭಿಪ್ರಾಯ ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವೆ ಇಲ್ಲವೇ ಇಲ್ಲ. ಪರಸ್ಪರ ಅಪನಂಬಿಕೆ ಹೆಚ್ಚಿಸುವ, ಸಮ್ಮಿಶ್ರ ಸರಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಎರಡೂ ಪಕ್ಷದವರು ನೀಡುವುದು ಬೇಡ. ಮುಂದಿನ ನಾಲ್ಕು ವರ್ಷ ಜನಪರ ಆಡಳಿತ ನೀಡುವ ಚಿಂತನೆಯೊಂದಿಗೆ ಜತೆಯಾಗಿ ಸಾಗೋಣ’
– ಇದು ಮುಖ್ಯಮಂತ್ರಿ ಕುಮಾರ ಸ್ವಾಮಿ ಜೆಡಿಎಸ್‌ -ಕಾಂಗ್ರೆಸ್‌ ಮುಖಂಡರಲ್ಲಿ ಮಾಡಿದ ಮನವಿ. ಒಂದಂತೂ ಸ್ಪಷ್ಟಪಡಿಸುತ್ತೇನೆ. ಸಮ್ಮಿಶ್ರ ಸರಕಾರ ದೊಡ್ಡ ಬಂಡೆಗಲ್ಲು. ಇದನ್ನು ಯಾರಿಂದಲೂ ಹೊಡೆದುರುಳಿಸಲು ಸಾಧ್ಯವೇ ಇಲ್ಲ.

Advertisement

ಯಾರಿಗೂ ಅನುಮಾನ ಬೇಡವೇ ಬೇಡ, ಸಮ್ಮಿಶ್ರ ಸರಕಾರ ಸುಭದ್ರ-ಬಲಿಷ್ಠವಾಗಿದೆ. ಸಮ್ಮಿಶ್ರ ಸರಕಾರದಲ್ಲಿನ ವಿದ್ಯಮಾನ, ಹೇಳಿಕೆ- ಪ್ರತಿ ಹೇಳಿಕೆ ಸಹಿತ ಇನ್ನಿತರ ವಿಷಯಗಳ ಕುರಿತು ಸಿಎಂ ಎಚ್‌.ಡಿ. ಕುಮಾರಸ್ವಾಮಿ “ಉದಯವಾಣಿ’ಯೊಂದಿಗೆ ಮನದಾಳದ ವಿಚಾರಗಳನ್ನು ಹಂಚಿಕೊಂಡರು.

ಸಣ್ಣಪುಟ್ಟ ಗೊಂದಲ ಸಹಜ
– ನಿಜ ಹೇಳುತ್ತೇನೆ, ಸಮ್ಮಿಶ್ರ ಸರಕಾರದಲ್ಲಿ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯ ಸಹಜ. ಆದರೆ ಸಮ್ಮಿಶ್ರ ಸರಕಾರಕ್ಕೆ ಧಕ್ಕೆಯಾಗುವಷ್ಟು ಭಿನ್ನಾಭಿಪ್ರಾಯ ನನ್ನ ಮತ್ತು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವೆ ಇಲ್ಲವೇ ಇಲ್ಲ. ಸಮ್ಮಿಶ್ರ ಸರಕಾರ ರಚನೆ ರಾಹುಲ್‌ ಗಾಂಧಿ ಮತ್ತು ದೇವೇಗೌಡರ ನಿರ್ಧಾರದಿಂದ ಆಗಿದೆ. ಈ ನಿರ್ಧಾರಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ರಾಜ್ಯ ನಾಯಕರು ಒಪ್ಪಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಜತೆಯಾಗಿ ಸಾಗುತ್ತಿದ್ದೇವೆ.

ವಿಶ್ವನಾಥ್‌ಗೆ ಹೇಳುತ್ತೇನೆ
– ತಲೆ-ಬುಡವಿಲ್ಲದ ಊಹಾಪೋಹಗಳನ್ನು ಹರಿಯಬಿಡಲಾಗುತ್ತದೆ. ಇವುಗಳನ್ನೇ ನಂಬಿ ಮಿತ್ರ ಪಕ್ಷಗಳ ಮುಖಂಡರು ಪರಸ್ಪರ ಅಪನಂಬಿಕೆ, ಸವಾಲು ರೂಪದ ಹೇಳಿಕೆಗಳನ್ನು ನೀಡುವುದು ಬೇಡ. ಸಮ್ಮಿಶ್ರ ಸರಕಾರಕ್ಕೆ ಧಕ್ಕೆ ತರುವ ಹೇಳಿಕೆ ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರಿಗೂ ನಾನು ಮನವಿ ಮಾಡುವೆ.

ರೆಸಾರ್ಟ್‌ಗೆ ಹೋಗುವುದೇ ತಪ್ಪೇ?
– ಚುನಾವಣೆ ಮುಗಿದ ಅನಂತರ ಆಯುರ್ವೇದ ಚಿಕಿತ್ಸೆಗೆಂದು ರೆಸಾರ್ಟ್‌ಗೆ ಹೋಗಿದ್ದೆ. ಅದು ಮಹಾಪರಾಧವೇ? ಬಿಜೆಪಿಯವರು ನಾನೇನೋ ಮಹಾ ಹಗರಣ, ಅಪರಾಧ ಮಾಡಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹಳದಿ ಕಣ್ಣಿನಿಂದಲೇ ನೋಡಿದರೆ ನಾನೇನು ಮಾಡಲಿ.

Advertisement

ಬರ ನಿರ್ವಹಣೆಗೆ ಹಣವುಂಟು
– ಬರ ನಿರ್ವಹಣೆಯಲ್ಲಿ ನಮ್ಮದೇನು ನಿರ್ಲಜ್ಜ ಸರಕಾರವಲ್ಲ. ಎಲ್ಲಿ ಸಮಸ್ಯೆ-ಲೋಪವಾಗಿದೆ ಎಂಬುದನ್ನು ಹೇಳಲಿ. ಬರ ಕಾಮಗಾರಿಗೆ ಹಣದ ಕೊರತೆ ಇಲ್ಲ. ಮುಖ್ಯಕಾರ್ಯದರ್ಶಿಗೆ ಸಮರ್ಪಕ ಕ್ರಮಕ್ಕೆ ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳ ಕಡೆ ಸುಮಾರು 700 ಕೋಟಿ ರೂ.ನಷ್ಟು ಹಣವಿದೆ.

ಫ‌ಲಿತಾಂಶದ ಬಳಿಕ ಯಾವ ಕ್ರಾಂತಿಯೂ ಆಗಲ್ಲ
– ಮೇ 23ರ ಅನಂತರ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಯಾಗುವುದಿಲ್ಲ ರಾಜ್ಯದಲ್ಲಿ ಮುಂದಿನ 4 ವರ್ಷಕ್ಕೆ ಸಮ್ಮಿಶ್ರ ಸರಕಾರಕ್ಕೆ ಇನ್ನಷ್ಟು ಬಲ ತುಂಬುವ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ.

ಸಿದ್ದು ಸಿಎಂ ಆಗ್ತಾರೆ ಅಂದರೆ ತಪ್ಪೇನು?
ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಕೆಲವು ಕಾಂಗ್ರೆಸ್‌ನವರು, ಅಭಿಮಾನಿಗಳು ಹೇಳಿದ್ದಾರೆ. ಆದಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಹೇಳಿಕೆ ನೀಡಿರಬಹುದು. ಅವರೇನು ಕುಮಾರಸ್ವಾಮಿ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಮಾಡುತ್ತೇವೆ ಎಂದು ಹೇಳಿಲ್ಲವಲ್ಲ. ಅವರ ಹೇಳಿಕೆಗಳನ್ನು ತಪ್ಪಾಗಿ ಭಾವಿಸುವ ಅಗತ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next