Advertisement

ಊರಕೋಳಿಗಳ ಸಮ್ಮೇಳನ

12:30 AM Jan 13, 2019 | |

ಒಂದು ಫೈನ್‌ ಮೋರ್ನಿಂಗ್‌ ಆ ಕೋಳಿಗೆ ಒಂದು ಆಲೋಚನೆ ಬಂತು. ಎರ್‌ ಕಂಡೀಷನ್‌ ರೂಮ್‌ನಲ್ಲಿ ಕುಳಿತು ಹಳ್ಳಿಗಳ ಉದ್ಧಾರ, ಬಡತನ ನಿವಾರಣೆ, ಬಾಲ ಕಾರ್ಮಿಕರ ಸಮಸ್ಯೆಗಳು, ವರದಕ್ಷಿಣೆ ಸಾವುಗಳ ಬಗ್ಗೆ ಮಾತನಾಡುವ ಪುಢಾರಿಗಳ ಆಲೋಚನೆಗಳಂತಲ್ಲ ಅದು. ಮಾನಸಿಕವಾಗಿ ನೊಂದು ಬೆಂದು ಸೋತು ಸುಣ್ಣವಾಗಿ ಹತಾಶೆಗೊಳಗಾದ ನಂತರ ಬಂದ ಆಲೋಚನೆ. ಕನ್ನಡ ಸಾಹಿತ್ಯ ಸಮ್ಮೇಳನಗಳಂತೆ ಊರ ಕೋಳಿಗಳದ್ದೂ ಒಂದು ಸಮ್ಮೇಳನ ಯಾಕೆ ಏರ್ಪಡಿಸಬಾರದು?

Advertisement

ಊರ ಕೋಳಿಗಳ ಸಮ್ಮೇಳನ ಎಂದು ಒತ್ತಿ ಹೇಳಿದ್ದು ಯಾಕೆಂದರೆ ಫಾರ್ಮ್ನ ಕೋಳಿಗಳಿಗೆ ಅಲ್ಲಿ ಚಾನ್ಸ್‌ ಇಲ್ಲ, ಎಂಬುದು ಗೊತ್ತಾಗಲಿ ಎಂದು. ದುಬೈಯ ದಕ್ಷಿಣ ಕನ್ನಡಿಗರ ಕನ್ನಡ ಸಂಘದಲ್ಲಿ ಉತ್ತರಕನ್ನಡದವರಿಗೆ ಹೇಗೆ ಚಾನ್ಸ್‌ ಇಲ್ಲವೋ ಹಾಗೆ.

“”ಇಷ್ಟೆಲ್ಲ ಮಾತನಾಡುತ್ತೀರಿ? ಸಮ್ಮೇಳನಗಳ outcome  ಏನು?” ಎಂದು ಹಿಂದೊಮ್ಮೆ ಬುದ್ಧಿಜೀವಿ ಮಿತ್ರರೊಬ್ಬರು ಕೇಳಿದ್ದರು. ಕ್ಯಾಶುವಲ್ಲಾಗಿ ನಾನು ಅದೇ ಧಾಟಿಯಲ್ಲಿ ಹೇಳಿದ್ದೆ, “”outcome ನ ವಿಷಯ ನನಗೂ ಗೊತ್ತಿಲ್ಲ, income ಅಂತೂ ಇದ್ದೇ ಇದೆ” “”ಯಾರಿಗೆ….?” ಎಂದರು.
“”ಶಾಮಿಯಾನಾದವರಿಗೆ, ಊಟದ ಕಂಟ್ರಾಕುrದಾರರಿಗೆ, ಬ್ಯಾನರ್‌ ಬೋರ್ಡ್‌ ತಯಾರಕರಿಗೆ, ಮೈಕ್‌ಸೆಟ್‌ನವರಿಗೆ” ಎಂದೆ.
ಬುದ್ಧಿಜೀವಿ ತನ್ನ ಗಡ್ಡ  ನೀವಿಕೊಂಡು ತೆಳು ನಗೆ ನಕ್ಕರು.

ಐಡಿಯಾ ಬಂದದ್ದೇ ತಡ ಊರಿನಲ್ಲಿರುವ ಎಲ್ಲ ಹಿರಿಯ ಕಿರಿಯ, ತರುಣ-ತರುಣಿ ಕೋಳಿಗಳಿಗೆ ವಾಟ್ಸಾಪ್‌ ಬುಲಾವ್‌ ಹೋಯ್ತು. ಮರುದಿನ ಅಂದರೆ ಆದಿತ್ಯವಾರ ಈ ಬಗ್ಗೆ ಪೂರ್ವಭಾವಿ ಸಭೆ ಇದೆ ಎಂದು. ಹೆಚ್ಚು-ಕಮ್ಮಿ ನೂರು ಊರ ಕೋಳಿಗಳು ಅಲ್ಲಿ ಸೇರಿದ್ದವು. ಬೆಂಗಳೂರಿನಲ್ಲಿ ಬಿಟಿಎಸ್‌ ಕಂಡಕ್ಟರನಿಗೆ ವಿನಾಕಾರಣ ಯಾರಾದರೂ ಹೊಡೆದರೆ ಅರ್ಧಗಂಟೆಯಲ್ಲೇ ಯೂನಿಯನ್‌ನವರು ಒಟ್ಟಾಗುತ್ತಾರಲ್ವ ಹಾಗೆ !

ಅಲ್ಲಿ ಸಮ್ಮೇಳನದ ದಿನಾಂಕ-ಸ್ಥಳ ನಿರ್ಧಾರವಾಯಿತು. ಸಮ್ಮೇಳನದ ವೇದಿಕೆಗೆ ಕೀರ್ತಿಶೇಷ ಕೋಳಿಯೊಂದರ ಹೆಸರನ್ನಿಡುವುದು ಎಂದು ನಿರ್ಧಾರವಾಯಿತು. ಅದಕ್ಕೊಂದು ವಿಶೇಷತೆ ಇತ್ತು. ಅದು ಸತತವಾಗಿ 50 ಕೋಳಿ ಅಂಕಗಳಲ್ಲಿ ಡ್ರಗ್ಸ್‌ ಸೇವಿಸದೆ ಭಾಗಿಯಾಗಿ ವಿಜಯಿಯಾಗಿತ್ತು! ಇತ್ತೀಚೆಗಷ್ಟೇ ಪುಢಾರಿಯೋರ್ವರ ಬರ್ತ್‌ ಡೇಯಂದು ನಡೆದ ಡಿನ್ನರಿಗೆ ಬಲಿಯಾಗಿ ವೀರಮರಣವನ್ನು ಅಪ್ಪಿತ್ತು. ಅಧ್ಯಕ್ಷರಾಗಿ ಊರಿನ ಹಿರಿಯ ಕೋಳಿಯೊಂದನ್ನು ಆರಿಸಲಾಯಿತು. ಅದು ಒಮ್ಮತದ ಆಯ್ಕೆಯಾಗಿತ್ತು ಎನ್ನುವುದು ವಿಶೇಷ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಊರಿನ ಪುಢಾರಿಯೋರ್ವರು ಸಾಕಿದ ಬಲಾಡ್ಯ ಕೋಳಿಯೊಂದನ್ನು ಆರಿಸಲಾಯಿತು. ಮಂತ್ರಿಗಳ ಕೋಳಿ ಆದರೆ ಯಾರೂ ಎದುರು ಮಾತನಾಡುವುದಿಲ್ಲ, ಖರ್ಚಿಗೂ  ತೊಂದರೆ ಇಲ್ಲವೆಂಬ ದೂರದೃಷ್ಟಿಯೂ ಇರಬಹುದು. ಪೊಲೀಸ್‌ ಪ್ರೊಟೆಕ್ಷನ್‌ ಬೇರೆ ಸಿಗುತ್ತೆ ಎಂದು ಹೇಳಬೇಕಾಗಿಲ್ಲ.

Advertisement

ಉಪಾಧ್ಯಕ್ಷರುಗಳಾಗಿ ಕೆಲ ಕೊಬ್ಬಿದ ಕೋಳಿಗಳನ್ನು, ಕೋಳಿ ಅಂಕದ ಪ್ರಖ್ಯಾತ ಕೋಳಿಗಳನ್ನು ಸೂಚಿಸಿದಾಗ ಅನುಮೋದನೆ ದೊರಕಿತು. ಎಲ್ಲ ಜಾತಿ-ಲಿಂಗ-ಬಲ-ಹಣದ ಲೆಕ್ಕಾಚಾರ ಮಾಡುವಾಗ ಉಪಾಧ್ಯಕ್ಷರುಗಳ ಸಂಖ್ಯೆ ಇಪ್ಪತ್ತೆಂಟು ದಾಟಿತ್ತು. ಆದರೂ, ಆಯ್ಕೆ ಪ್ರಕ್ರಿಯೆಯಲ್ಲಿ ಕೆಲ ಮರಿ, ಮುದಿ ಕೋಳಿಗಳಿಗೆ ತರಚು ಗಾಯಗಳಾಗಿದ್ದವು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೋಳಿ ಅಲ್ಲಿ ಇತ್ತಾದ್ದರಿಂದ ಪೊಲೀಸರೂ ಇದ್ದರು. ಪರಿಸ್ಥಿತಿಯ ತೀವ್ರತೆಯನ್ನರಿತು ಅವರೂ ಸಕಾಲದಲ್ಲಿ ಸ್ಪಂದಿಸಿದ್ದರಿಂದ ಪರಿಸ್ಥಿತಿ ಕೈ ಮೀರಲಿಲ್ಲ, ನಿರಾತಂಕವಾಯಿತು. ಗಲಾಟೆ ಮಾಡಲೇ ಬಂದಂತಿದ್ದ ಕೆಲ ತರುಣ ಕೋಳಿಗಳಿಗೆ ನಾಲ್ಕು ತಪರಾಕಿ ಹಾಕಲಾಯಿತು ಮತ್ತು ಸ್ಟೇಷನ್ನಿಗೆ ಕೊಂಡೊಯ್ಯಲಾಯಿತು. ಸಮ್ಮೇಳನ ಉತ್ಸಾಹದಲ್ಲಿ ಆ ಕೋಳಿಗಳ ಗತಿ ಏನಾಯೆ¤ಂದು ಇಂದಿಗೂ ಯಾರಿಗೂ 

ಗೊತ್ತಿಲ್ಲದ ವಿಷಯ. ಎಲ್ಲ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಗೊತ್ತಾದ ಕೋಳಿಗಳು ವಹಿಸುವುದೆಂದು ತೀರ್ಮಾನವಾಗಿ ಅಂದಿನ ಸಭೆ ಮುಕ್ತಾಯವಾಯಿತು. ಬಂದ ಎಲ್ಲರಿಗೂ ಎಸ್‌ಕೆಸಿ (ಸ್ವೀಟ್‌- ಖಾರ- ಕಾಫಿ) ಇತ್ತು. ಎಲ್ಲ ಕೋಳಿಗಳು ಅವರವರ ಮನೆದಾರಿ ಹಿಡಿದವು. 
ನಿಗದಿಪಡಿಸಿದ ದಿನದಂದು ಸರಿಯಾದ ಸಮಯಕ್ಕೇ ಇದ್ದವುಗಳಲ್ಲಿಯೇ ಸಪೂರವಾದ ಕೋಳಿಯೊಂದರ ಪ್ರಾರ್ಥನೆಯೊಂ ದಿಗೆ ಸಮ್ಮೇಳನ ಪ್ರಾರಂಭವಾಯಿತು. ಮೊಬೈಲ್‌ನಲ್ಲಿ ಪೋಟೋ ತೆಗೆಯುವವರು ಜಾಸ್ತಿ ಇದ್ದುದರಿಂದ ಉದ್ಘಾಟನೆಯನ್ನು ದೀಪ ಹೊತ್ತಿಸಿ ಯಾರು ಮಾಡಿದರು ಅಂತ ಪ್ರಸ್‌ನವರಿಗೂ ಗೊತ್ತಾಗಲಿಲ್ಲ !
ಫಾರ್ಮಾಲಿಟಿ ಪ್ರಕಾರ ಸಮ್ಮೇಳನದಲ್ಲಿ ಕೆಳಕಂಡ 10 ನಿರ್ಣಯಗಳನ್ನು ಕೈಗೊಳ್ಳಲಾಯಿತು.

1ಮನುಷ್ಯರಲ್ಲಿ ನಡೆವ ಸಣ್ಣ ಜಗಳಗಳಿಗೆ “ಕೋಳಿಜಗಳ’ ಎಂದು ಕರೆಯುವುದಾಗಲಿ ಹಾಗಂತ ಪತ್ರಿಕೆಗಳಲ್ಲಿ ಮುದ್ರಿಸುವುದಾಗಲಿ ಸಲ್ಲದು. ಇದು ಕೋಳಿಗಳಿಗೆ ಅಪಮಾನ.

2ಕೋಳಿಗಳನ್ನು ಹೊಟ್ಟೆಯೊಳಗಿಳಿಸಿ, ಗಿಳಿಗಳನ್ನು ಮಾತ್ರ ಪಂಜರದಲ್ಲಿಟ್ಟು ಸಾಕುವ ವರ್ಣಭೇದ ನೀತಿ ಸಲ್ಲದು.

3ಫಾರ್ಮ್ನಲ್ಲಿ ಸಾಕುವ ಕೋಳಿಗಳಿಗೆ ಸಿಗುವ ಬೋರ್ಡಿಂಗ್‌- ಲಾಡಿjಂಗ್‌ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲೂ ಮಾಡುವಂತೆ ತಮ್ಮ ದನಿಗಳಲ್ಲಿ ಒತ್ತಾಯ ಮಾಡುವುದು.

4ಆಮ್ಲೆಟ್‌ ತಯಾರಿಯ ಸಂಪೂರ್ಣ ನಿರ್ಮೂಲನಕ್ಕೆ ಆಂದೋಲನ ಆಯೋಜಿಸುವುದು. ತನ್ಮೂಲಕ ಭೂಮಿಯ ಬೆಳಕನ್ನು ಕಾಣುವ ಮೊದಲೇ ಜನರಿಗೆ ಆಹಾರವಾಗುವ ಪೈಶಾಚಿಕ ಕೃತ್ಯಕ್ಕೆ ತಡೆ ಹಾಕುವುದು.

5ಬಾರ್‌ಗಳಲ್ಲಿ , ಡಿನ್ನರ್‌ ಪಾರ್ಟಿಗಳಲ್ಲಿ , ಮನೆಗಳಲ್ಲಿ , ಸಸ್ಯಾಹಾರ ಉಪಯೋಗದ ಬಗ್ಗೆ  ಪ್ರಚಾರ ಮಾಡಲು ತಂಡಗಳ ಆಯ್ಕೆ. 

6ಕೋಳಿ ಅಂಕಗಳಲ್ಲಿ ಕತ್ತಿ ತಾಗಿದರೆ ಕೂಡಲೇ ಚಿಕಿತ್ಸೆ ವ್ಯವಸ್ಥೆ ಮಾಡುವುದು. ಕೋಳಿ ಅಂಕದ ಬಳಿ ಸದಾ ಸನ್ನದ್ಧವಾದ 108 ಇರಿಸುವುದು. ಕೋಳಿಗಳಿಗೆ ವಿಮಾ ಸುರಕ್ಷೆ ಮತ್ತು ವಿಟಮಿನ್‌ಯುಕ್ತ ಆಹಾರ ನೀಡುವಂತೆ ಯಜಮಾನರಲ್ಲಿ ಒತ್ತಾಯಿಸುವುದು.

7ಕೋಳಿಯನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ- ಇತ್ಯಾದಿ ಭಯಾನಕ ಗೂಡಾರ್ಥವಿರುವ ವಾಕ್ಯಗಳನ್ನು ಎಲ್ಲಿಯೂ ಬಳಸದಂತೆ ಒತ್ತಾಯಿಸುವುದು. ಈ ವಿಷಯದಲ್ಲಿ ಸಾಹಿತಿ, ಸಿನೆಮಾ ಕಲಾವಿದರ ನೆರವನ್ನು ಪಡೆಯುವುದು.

8ಈಗ ಜನರು ಮೊಬೈಲ್‌ ಅಲಾರಮ್‌ ಬಳಸುವುದರಿಂದ ಸಾಂಪ್ರದಾಯಿಕ ಅಲಾರಮ್‌ಗಳಾದ ಕೋಳಿಗಳ ಮೇಲೆ ಆಗುವ ಮಾನಸಿಕ ವೇದನೆ ಬಗ್ಗೆ ಅಲ್ಲಲ್ಲಿ ಸೆಮಿನಾರ್‌ಗಳನ್ನು ಏರ್ಪಡಿಸುವುದು. ಈ ದಿಸೆಯಲ್ಲಿ ಕೆಲವು ಕ್ಷುಲ್ಲಕ ವಿಷಯಗಳಲ್ಲಿ ಸಂಪ್ರದಾಯದ ಛಾಪು ಒತ್ತಿ ವಿವಾದ ಉಂಟುಮಾಡಿ ಆನಂದಿಸುವ ಕೆಲ ಬುದ್ಧಿಜೀವಿಗಳನ್ನು ಭಾಷಣಕ್ಕೆ ಆಹ್ವಾನಿಸುವುದು.

9ದೇಶ ರಕ್ಷಣೆಯಾಂತಹ ವಿಶೇಷ ಸಂದರ್ಭದಲ್ಲಿ ವೀರಯೋಧರಿಗೆ ಆಹಾರವಾದರೂ ಪರವಾಗಿಲ್ಲ ಮನೆಗೊಂದು ಕೋಳಿಯಂತೆ ಆತ್ಮ ಸಮರ್ಪಣೆ ಮಾಡಲು ತಯಾರಿರಬೇಕೆಂದು ಎಲ್ಲ ಕೋಳಿಗಳಲ್ಲಿ ವಿನಂತಿ ಮಾಡುವುದು.

10ಒಂದು ವೇಳೆ ಭಾರತ/ಪಾಕ್‌ ಯುದ್ಧ ನಡೆದರೆ ಭಾರತ ವಿಜಯಿಯಾಗುವುದು ಖಂಡಿತ. ಹಾಗಾದಲ್ಲಿ ಪಾಕಿನ ಮುಜಾಹಿದ್ದಿನ್‌ ಕೋಳಿಗಳ ವಂಶ ನಿರ್ನಾಮವಾಗುವವರೆಗೆ ಅವುಗಳನ್ನು ಕಡ್ಡಾಯ ಆಹಾರವಾಗಿ ಉಪಯೋಗಿಸುವಂತೆ ಸೋತ ಪಾಕ್‌ ಸೈನಿಕರಿಗೆ ತಾಕೀತು ಮಾಡುವುದು.

ಮನೋರಂಜನಾ ಕಾರ್ಯಕ್ರಮವಾಗಿ ಊರ ಕೋಳಿಗಳ ಫ್ಯಾಷನ್‌ ಶೋ ಏರ್ಪಡಿಸಲಾಗಿತ್ತು. ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯ ಕತೆಯಾದ “ಅತಿ ಆಸೆ ಗತಿ ಕೇಡು’ ಇದರ ನೃತ್ಯ ರೂಪಕವೂ ಇತ್ತು. ಈ ಕತೆಯನ್ನು ಬರೆದ ಮಹಾನುಭಾವರ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡಲಾಯಿತು.

ಸಮಾರಂಭದ ಕೊನೆಯ ಅಂಗವಾಗಿ ಅಧ್ಯಕ್ಷರ ಭಾಷಣ ಆರಂಭವಾಯಿತು. “”ಕೋಳಿಗಳೇ, ಹುಂಜಗಳೇ ಈಗ ಈ ಭರತ ಖಂಡದಲ್ಲಿ ನಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮವರ ಮೇಲೆ ದಬ್ಟಾಳಿಕೆ ಜಾಸ್ತಿ ಆಗಿದೆ. ಊರಿಗೆ ಹತ್ತರಂತೆ ಆಮ್ಲೆಟ್‌ ಅಂಗಡಿಗಳು ತಲೆಎತ್ತಿವೆ. ಪ್ರತಿ 18 ಜನರಿಗೆ 1 ಆಮ್ಲೆಟ್‌ ಅಂಗಡಿ ಭಾರತದಲ್ಲಿ ಇದೆ ಎಂದು ಮಿಚಿಗನ್‌ ವಿಶ್ವವಿದ್ಯಾನಿಲಯದವರು ನಡೆಸಿದ ಸಂಶೋಧನೆ ತಿಳಿಸುತ್ತದೆ. ಮಲ್ಟಿನೇಶನಲ್‌ ಕಂಪೆ‌ನಿಗಳು ತಯಾರಿಸುವ ಶಾಂಪೂಗಳಲ್ಲಿ ಹೇರಳ ಮೊಟ್ಟೆಯ ಅಂಶ ಇರುವುದು ನಗ್ನ ಸತ್ಯ. ಮಾಡಬಾರದ್ದನ್ನು ಮಾಡುವ ಪುಢಾರಿ ನಾಯಕರ ಮೇಲೆ ಮೊಟ್ಟೆಗಳನ್ನು ಎಸೆಯುತ್ತಾರೆ. ಆದರೆ, ಮೊಟ್ಟೆ ಏಟಿಗೆ ಹೆದರಿ ಸರಿಯಾದ ಕೆಲಸ ಮಾಡಿದ ನಾಯಕರ ನಿದರ್ಶನ ಎಲ್ಲಿಯೂ ಇಲ್ಲ. ಕೋಳಿಯನ್ನು ಕೊಂದು ತಿನ್ನುವವರ ಸಂಖ್ಯೆ ಜಾಸ್ತಿಯಾಗಿದೆ. ಇಂತಹ ಅನ್ಯಾಯವನ್ನು ಸಹಿಸುತ್ತ ಕೂರುವ ಸಮಯ ಇದಲ್ಲ. ನಾವೆಲ್ಲ ಎಚ್ಚೆತ್ತು ಈ ದಿಸೆಯಲ್ಲಿ ಹೋರಾಟ ನಡೆಸಲೇಬೇಕು. ಎಲ್ಲರೂ ಒಂದಾಗಬೇಕು. ಕೋಳಿಯನ್ನು ಕೊಳ್ಳುವವರಿಗೆ ಮೇಳ್ಳುವವರಿಗೆ ಕೋಳ ತೊಡಿಸಿ ಕಾಳಿಮಂದಿರದಲ್ಲಿ ಪಾಳಿಯಂತೆ ಬಳಿ ಕೊಡಬೇಕು. ಎಂದು ಒಂದೇ ಉಸಿರಿನಲ್ಲಿ ಮಾತನಾಡಿತು” (ಆ ಕೋಳಿಗೆ ವಾರ್ತೆ ಓದುವವರ ತರ ಉಚ್ಚಾರ ದೋಷವಿತ್ತು) ನಂತರ ಅದು ಎದುರಿಗಿದ್ದ ಮೇಜಿನ ಮೇಲೆ ಒಮ್ಮೆ ಹಾರಿ “ಕ್ಕೊ….ಕ್ಕೊ’ ಎಂದಿತು. ನೆರೆದವರೆಲ್ಲ ಚಪ್ಪಾಳೆ ತಟ್ಟುತ್ತಿದ್ದರು.

ಅಷ್ಟರಲ್ಲಿಯೇ ಸಭಿಕರ ಮಧ್ಯೆ ಗುಸುಗುಸು ಆರಂಭವಾಯಿತು. ಕೆಲ ಕೋಳಿಗಳು “ಅಯ್ಯೋ ಅಮ್ಮೊà… ಕ್ಯಾ… ಕ್ಕೋ… ಕ್ಕೋ…’ ಎಂಬಿತ್ಯಾದಿ ವಿಚಿತ್ರ ಸ್ವರದಲ್ಲಿ ಕೂಗಲಾರಂಭಿಸಿದವು. ಕೆಲ ಬಲಾಡ್ಯ ಕೋಳಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಅತ್ತಿಂದಿತ್ತ ಹಾರುತ್ತಿದ್ದವು. ಭಾರಿ ಗಲಾಟೆ ಆರಂಭವಾಯಿತು. ಮಂತ್ರಿಯೋರ್ವರ ಮಗನ ಮದುವೆಯಾದುದರ ಬಗ್ಗೆ ಅಂದು ಅದೇ ಸ್ಥಳದಲ್ಲಿ ರಾತ್ರಿ ಪಾರ್ಟಿ ಏರ್ಪಾಡಾಗಿತ್ತು. ಒಂದೇ ಸ್ಥಳದಲ್ಲಿ ಸೇರಿದ್ದ ಸಾವಿರಾರು ಕೋಳಿಗಳನ್ನು ನೋಡಿ ಅಂದು ಅಡುಗೆ ಕಾಂಟ್ರಾಕ್ಟ್ ವಹಿಸಿಕೊಂಡಿದ್ದವನಿಗೆ ಭಾರಿ ಖುಷಿ ಆಗಿತ್ತು. ಎಲ್ಲ ಕೋಳಿಗಳನ್ನು ಬಂಧಿಸಲು ವ್ಯವಸ್ಥೆ ಮಾಡಿದ್ದ. ಕೋಳಿಗಳಿಗೆ ವಿಷಯ ಗೊತ್ತಾಗುವುದರೊಳಗೆ ಅವೆಲ್ಲ ಬಂಧಿಯಾಗಿದ್ದವು. ಅಡುಗೆಯವರು ಒಂದೊಂದೇ ಕೋಳಿಯನ್ನು ಕೊಲ್ಲ ತೊಡಗಿದರು. ಸಮ್ಮೇಳನದ ಐಡಿಯಾ ತಂದ ಕೋಳಿಯ ಸರದಿ ಬಂತು. ಕತ್ತಿಯಿಂದ ಕತ್ತಿನ ಮೇಲೊಂದು ಪೆಟ್ಟು ಬಿತ್ತು ಅಷ್ಟೇ!
“ಕ್ಕೊ…. ಕ್ಕೊ…. ಕ್ಕೊ…’ ಎಂದು ಕೂಗುತ್ತ ಆ ಹುಂಜ ತನ್ನ ಗೂಡಿನ ಮೇಲಿನ ಹಲಗೆಯಿಂದ ಕೆಳಗೆ ಬಿತ್ತು! 

ಶಂಕರ್‌ ಎನ್‌. ತಾಮನ್‌ಕರ್‌

Advertisement

Udayavani is now on Telegram. Click here to join our channel and stay updated with the latest news.

Next