ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿ ಕೇಂದ್ರೀಯ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಈಗಲೂ ಸಚಿವರಾಗಿ ಮುಂದುವರಿದಿರುವ ವಿ. ಸೆಂಥಿಲ್ ಬಾಲಾಜಿ ಅವರನ್ನು ಗುರುವಾರದಂದು ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಅವರು ಕೇಂದ್ರ ಗೃಹ ಸಚಿವಾಲಯದ ಮಧ್ಯಪ್ರವೇಶದ ಬಳಿಕ ತಮ್ಮ ಆದೇಶವನ್ನು ರಾತ್ರಿಯೇ ವಾಪಸ್ ಪಡೆದುಕೊಂಡಿದ್ದರು. ಇಡೀ ಬೆಳವಣಿಗೆ ರಾಜಕೀಯವಾಗಿ ಮಾತ್ರ ವಲ್ಲದೆ ಸಾಂವಿಧಾನಿಕವಾಗಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯಪಾಲರ ಈ ಏಕಪಕ್ಷೀಯ ವರ್ತನೆ ರಾಜ್ಯದ ಆಡಳಿತಾರೂಢ ಡಿಎಂಕೆಯ ಆಕ್ರೋಶಕ್ಕೆ ಗುರಿಯಾಗಿತ್ತಲ್ಲದೆ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವ ಎಚ್ಚರಿಕೆಯನ್ನು ನೀಡಿತ್ತು. ರಾಜ್ಯ ಸಚಿವ ಸಂಪುಟದ ಯಾವುದೇ ಶಿಫಾರಸು ಇಲ್ಲದೇ ರಾಜ್ಯಪಾಲರು ಏಕಪಕ್ಷೀಯವಾಗಿ ಸಚಿವರನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡುದುದು ವಿವಾದವಾಗಿ ಮಾರ್ಪಟ್ಟಿತ್ತು. ಅಷ್ಟು ಮಾತ್ರವಲ್ಲದೆ ರಾಜ್ಯಪಾಲರ ಈ ದಿಢೀರ್ ನಿರ್ಧಾರ ಸಂವಿಧಾನ ಮತ್ತು ಕಾನೂನು ತಜ್ಞರ ಟೀಕೆಗೂ ಗುರಿಯಾಗಿತ್ತು.
ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ರಾಜ್ಯ ಸರಕಾರ ಅಂಕಿತಕ್ಕಾಗಿ ಕಳುಹಿಸಿದ ಮಸೂದೆಗಳನ್ನು ಮತ್ತೆ ಸರಕಾರಕ್ಕೆ ವಾಪಸ್ ಕಳುಹಿಸುವ ಮೂಲಕ ರಾಜ್ಯ ಸರಕಾರದೊಡನೆ ಗುದ್ದಾಟ ನಡೆಸುತ್ತಲೇ ಬಂದಿರುವ ರಾಜ್ಯಪಾಲರ ಕಾರ್ಯವೈಖರಿಯ ಬಗೆಗೆ ಮುಖ್ಯಮಂತ್ರಿ ಸ್ಟಾಲಿನ್ ಮತ್ತವರ ಪಕ್ಷವಾದ ಡಿಎಂಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಲೇ ಬಂದಿದೆ.
ರಾಜ್ಯಪಾಲ ಹುದ್ದೆಯ ಹೊಣೆಗಾರಿಕೆ ಮತ್ತು ಪಾತ್ರದ ಬಗೆಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆಯಾದರೂ ಈ ಹಿಂದಿನಿಂದಲೂ ಕೇಂದ್ರದಲ್ಲಿರುವ ಆಡಳಿತಾರೂಢ ಸರಕಾರಗಳು ರಾಜ್ಯಗಳಲ್ಲಿನ ವಿಪಕ್ಷಗಳ ನೇತೃತ್ವದ ಸರಕಾರದ ಮೇಲೆ ಸವಾರಿ ನಡೆಸಲು ಈ ಹುದ್ದೆಯನ್ನು ಬಳಸಿಕೊಳ್ಳುತ್ತಲೇ ಬಂದಿವೆ. ವಿವಿಧ ನ್ಯಾಯಾಲಯಗಳ ನಿರಂತರ ವಾಗ್ಧಾಳಿ, ತೀರ್ಪುಗಳ ಬಳಿಕ ಇತ್ತೀಚಿನ ವರ್ಷಗಳಲ್ಲಿ ಇಂತಹ ಬೆಳವಣಿಗೆಗಳು ಒಂದಿಷ್ಟು ಕಡಿಮೆಯಾಗಿವೆ. ಆದರೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಪದೇಪದೆ ಸರಕಾರದೊಡನೆ ಸಂಘರ್ಷಕ್ಕಿಳಿಯುವ ಪ್ರಸಂಗಗಳು ನಡೆಯುತ್ತಲೇ ಇವೆ.
ರಾಜ್ಯಪಾಲ ಹುದ್ದೆ ರಾಜಕೀಯ ರಹಿತವಾಗಿದ್ದು ರಾಜ್ಯಪಾಲರು ಪಕ್ಷ ರಾಜಕೀಯದಲ್ಲಿ ತೊಡಗಿಕೊಳ್ಳದೇ ರಾಜ್ಯ ಸರಕಾರ ಸುಸೂತ್ರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಕಿವಿಮಾತು, ಸಲಹೆ ಸೂಚನೆಗಳನ್ನು ನೀಡಬೇಕೇ ವಿನಾ ಸ್ವತಃ ಹಸ್ತಕ್ಷೇಪ ನಡೆಸುವುದು, ತಮ್ಮ ಕಾರ್ಯವೈಖರಿಗಳಿಂದ ಆ ಹುದ್ದೆಗಿರುವ ಘನತೆ, ಗೌರವಕ್ಕೆ ಚ್ಯುತಿ ತರಬಾರದು. ಇನ್ನು ರಾಜ್ಯಪಾಲರ ಸಲಹೆಗಳು ನ್ಯಾಯಯುತವಾಗಿದ್ದಲ್ಲಿ ಅವುಗಳನ್ನು ಪಾಲಿಸುವುದು ತಮ್ಮ ಹೊಣೆಗಾರಿಕೆ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು. ಇಲ್ಲವಾದಲ್ಲಿ ಆಡಳಿತ ಸೂತ್ರ ಎರಡು ದೋಣಿಗಳಲ್ಲಿ ಕಾಲಿಟ್ಟಂತಾಗುವುದರಲ್ಲಿ ಸಂದೇಹವಿಲ್ಲ.