Advertisement

ಸ್ಲಂ ಶೌಚಾಲಯಗಳ ಸ್ಥಿತಿ ಶೋಚನೀಯ

12:01 PM Aug 21, 2018 | |

ಬೆಂಗಳೂರು: ಮುರಿದ ಬಾಗಿಲು, ಒಡೆದ ನೀರಿನ ಪೈಪುಗಳು, ವಿದ್ಯುತ್‌ ಕಾಣದ ಬಲ್ಬ್ಗಳು, ದೂರದವರೆಗೂ ಹರಡುವ ದುರ್ವಾಸನೆ, ನಸುಕಿನ ನಾಲ್ಕು ಗಂಟೆಗೇ ಸಾಲುಗಟ್ಟಿ ನಿಲ್ಲುವ ಮಹಿಳೆಯರು… ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಕೊಳೆಗೇರಿ ಪ್ರದೇಶಗಳಲ್ಲಿರುವ ಸಮುದಾಯ ಶೌಚಾಲಯಗಳ ಸದ್ಯದ ಸ್ಥಿತಿ ಇದು.

Advertisement

ಇನ್ನು ಇಂತಹ ಶೌಚಾಲಯ ಬಳಸುತ್ತಿರುವ ಮಹಿಳೆಯರು ಮತ್ತು ಮಕ್ಕಳು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರೇತರ ಸಂಘ ಸಂಸ್ಥೆಗಳು (ಎನ್‌ಜಿಒ) ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳಲ್ಲಿ ಪಾಲಿಕೆಯಿಂದ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಹೊಣೆ ವಹಿಸಿಕೊಳ್ಳದಕಾರಣ ಶೌಚಾಲಯಗಳು ಪಾಳುಬಿದ್ದಿವೆ.

ಬಾಗಿಲುಗಳಿಲ್ಲದ ಕಾರಣದಿಂದ ಹಗಲು ಹೊತ್ತು ಮಹಿಳೆಯರು ಶೌಚಾಲಯ ಬಳಸಲು ಸಾಧ್ಯವೇ ಇಲ್ಲ. ಓಕಳಿಪುರ ಬಳಿಯ ಅಂಬೇಡ್ಕರ್‌ ನಗರ ಕೊಳೆಗೇರಿಯಲ್ಲಿ ಸುಮಾರು 250 ಮನೆಗಳಿದ್ದು, ದಿನಗೂಲಿ ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅಲ್ಲಿರುವುದು ಒಂದೇ ಒಂದು ಸಮುದಾಯ ಶೌಚಾಲಯ! ಅದೂ ಸಂಪೂರ್ಣ ಹಾಳಾಗಿದೆ. ನೀರು, ವಿದ್ಯುತ್‌ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ ಜನರಿಗೆ ಬಯಲಲೇ ಶೌಚಾಲಯವಾಗಿದೆ.

ಇದು ಕಾಯಿಲೆಗೆ ಕಾರಣ: ನಿರ್ವಹಣ ಸಮರ್ಪಕವಾಗಿಲ್ಲದೆ ಕಾರಣ ಸಮುದಾಯ ಶೌಚಾಲಯಗಳ ಇಡೀ ಆವರಣ ಅನೈರ್ಮಲ್ಯದಿಂದ ಕೂಡಿರುವುದು ಒಂದೆಡೆಯಾದರೆ, ಸ್ಲಂ ನಿವಾಸಿಗಳು ಸ್ಯಾನಿಟರಿ ನ್ಯಾಪ್‌ಕೀನ್‌ಗಳನ್ನು ಶೌಚಾಲಯಗಳಲ್ಲೇ ಎಸೆಯುತ್ತಾರೆ. ಇಂತಹ ಶೌಚಾಲಯಗಳನ್ನು ಬಳಸುವುದರಿಂದ ಮಹಿಳೆಯರು ಹಾಗೂ ಮಕ್ಕಳು ಚಿಕೂನ್‌ಗುನ್ಯಾ, ಡೆಂಘೀ, ಮಲೇರಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಮೂತ್ರದ ಸೋಂಕು ಹೆಚ್ಚಿನ ಜನರಲ್ಲಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಪಾಲಿಕೆಗೆ ಬೇಕಿರುವುದು ಹಣ ಮಾತ್ರ: ಕರ್ನಾಟಕ ರಾಜ್ಯ ಕೊಳೆಗೇರಿ ಅಭಿವೃದ್ಧಿ ನಿಗದ ಮಾಹಿತಿಯಂತೆ ನಗರದಲ್ಲಿ 597 ಕೊಳೆಗೇರಿಗಳಿವೆ. ಆ ಪೈಕಿ 388 ಅಧಿಕೃತ ಹಾಗೂ 209 ಅನಧಿಕೃತ. ಒಂದೊಂದು ಸ್ಲಂನಲ್ಲೂ ಕನಿಷ್ಠ 100 ಮನೆಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಿಸದ ಕಾರಣ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ. ಪಾಲಿಕೆಯಿಂದ ನಿರ್ಮಿಸಿರುವ ಸಮುದಾಯ ಶೌಚಾಲಯಗಳಲ್ಲಿ ಹಣ ಪಡೆಯುತ್ತಿದ್ದರೂ, ಸ್ವತ್ಛತೆಗೆ ಗಮನಹರಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

Advertisement

ಎನ್‌ಜಿಒಗಳಿಂದ ಸಮೀಕ್ಷೆ: ನಗರದ ಕೊಳೆಗೇರಿಗಳಲ್ಲಿನ ಸಮುದಾಯ ಶೌಚಾಲಯಗಳ ಸ್ಥಿತಿ ತಿಳಿಯುವ ಉದ್ದೇಶದಿಂದ ಸೆಂಟರ್‌ ಫಾರ್‌ ಅಡ್ವೋಕೆಸಿ ಅಂಡ್‌ ರೀಸರ್ಚ್‌, ಸಹಾಯ, ಹಸಿರು ದಳ ಹಾಗೂ ರೇಡಿಯೊ ಅಕ್ಟೀವ್‌ ಸಿಆರ್‌ 90.4 ಎಂಬ ಸರ್ಕಾರೇತರ ಸಂಸ್ಥೆಗಳು ಸುಮಾರು 15ಕ್ಕೂ ಹೆಚ್ಚು ಕೊಳೆಗೇರಿಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿವೆ. ಶೌಚಾಲಯಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವುದು ಈ ವೇಳೆ ಕಂಡುಬಂದಿದೆ. ಅನೈರ್ಮಲ್ಯದಿಂದಾಗಿ ರೋಗಗಳು ಹರಡುತ್ತಿವೆ ಎಂದು ಎನ್‌ಜಿಒಗಳು ತಿಳಿಸಿವೆ.

ಸಮೀಕ್ಷೆ ನಡೆಸಿದ ಕೊಳೆಗೇರಿಗಳು ಮಾಹಿತಿ: ಅಂಬೇಡ್ಕರ್‌ ನಗರ (ಓಕಳಿಪುರ), ಬೆನ್ನಿಗಾನಹಳ್ಳಿ, ಜೆ.ಸಿ.ರಸ್ತೆ 2ನೇ ಅಡ್ಡರಸ್ತೆ, ಕಲಾಸಿಪಾಳ್ಯ, ವಿನೋಬಣನಗರ, ಜೆ.ಸಿ.ರಸ್ತೆ (ಧರ್ಮರಾಜಸ್ವಾಮಿ ದೇವಸ್ಥಾನ ವಾರ್ಡ್‌), ದೊಡ್ಡಮಾವಳ್ಳಿ, ಟ್ಯಾನರಿ ರಸ್ತೆ, ಬೈಯಪ್ಪನಹಳ್ಳಿ, ಕಾರ್ಟ್‌ ರಸ್ತೆ, ಜೋಲಿ ಮಹಲ್‌, ಕಾಡಿರಪ್ಪ ರಸ್ತೆ, ನಾಗಾವಾರ, ಸುಮ್ಮನಹಳ್ಳಿ, ಅಂಜನಪ್ಪ ಗಾರ್ಡನ್‌.

ನಗರದಲ್ಲಿ ಶೌಚಾಲಯಗಳ ಪರಿಸ್ಥಿತಿಯ ಕುರಿತು ಸಮೀಕ್ಷೆ ನಡೆಸಿ ಸ್ವತ್ಛ ಭಾರತ ಅಭಿಯಾನದ ಸಿಇಒಗೆ ವರದಿ ನೀಡಿದ್ದು, ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಮುದಾಯ ಶೌಚಾಲಯಗಳ ನಿರ್ವಹಣೆ ಕುರಿತು ಕೊಳೆಗೇರಿಯ ಸ್ವಯಂ ಸೇವಕರಿಗೆ ತರಬೇತಿ ನೀಡುವ ಅಗತ್ಯವಿದೆ. 
-ಪ್ರಭಾನಂದ ಹೆಗಡೆ, ಸೆಂಟರ್‌ ಫಾರ್‌ ಅಡ್ವೋಕೆಸಿ ಆ್ಯಂಡ್‌ ರಿಸರ್ಚ್‌

ನಮ್ಮಲ್ಲಿ ಅತ್ಯಂತ ಕೆಟ್ಟದಾಗಿರುವ ಶೌಚಾಲಯಗಳಿವೆ. ಇವುಗಳ ಬಳಕೆಯಿಂದ ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿವೆ. ಹಣ ಪಾವತಿಸಿ ಕೆಟ್ಟ ಶೌಚಾಲಯಗಳನ್ನು ಬಳಸಲು ಇಚ್ಛಿಸದ ಹೆಚ್ಚಿನ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ.
-ರಾಧಾ, ಅಂಬೇಡ್ಕರ್‌ ನಗರ ಕೊಳೆಗೇರಿ ನಿವಾಸಿ

ಸಮುದಾಯ ಶೌಚಾಲಯಗಳಿಗೆ ಕೆಲವೊಮ್ಮೆ ದುರ್ವಾಸನೆಯಿಂದ ಕೂಡಿದ ನೀರು ಬರುತ್ತದೆ. ದನ್ನು ತಡೆಯುವ ಜತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಕೋರಿದ್ದೇವೆ. ಆದರೆ, ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
-ಅಲವೇಲಮ್ಮ, ಬೈಯಪ್ಪನಹಳ್ಳಿ ಕೊಳೆಗೇರಿ ನಿವಾಸಿ

ಸಮೀಕ್ಷೆಯ ಪ್ರಮುಖ ಶಿಫಾರಸ್ಸುಗಳು
-ಹಾಲಿ ಇರುವ ಸಮುದಾಯ ಶೌಚಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು.
-ಪಾಲಿಕೆ, ಸರ್ಕಾರದಿಂದ ಸಮುದಾಯ ಹಾಗೂ ವಯಕ್ತಿಕ ಶೌಚಾಲಯ ನಿರ್ಮಿಸಿಕೊಡುವುದು.
-ಅಗತ್ಯ ನೀರು ಪೂರೈಕೆ ಮಾಡುವ ಮೂಲಕ ಅನೈರ್ಮಲಿಕರಣ ತಡೆಯುವುದು.
-ಜಲಮಂಡಳಿ, ಸ್ಲಂ ಬೋರ್ಡ್‌ ಜತೆ ಪಾಲಿಕೆ ಸಮನ್ವಯ ಸಾಧಿಸಿ ಆರೋಗ್ಯ ಸುಧಾರಣೆ ಮುಂದಾಗುವುದು.
-ಸಮುದಾಯ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಕೊಳೆಗೇರಿ ನಿವಾಸಿಗಳಿಗೇ ವಹಿಸುವುದು.

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next