Advertisement

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

01:09 AM Jun 01, 2023 | Team Udayavani |

ಬೆಂಗಳೂರು : ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಗುರುವಾರದ ಸಂಪುಟ ಸಭೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

Advertisement

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಬುಧವಾರ ಜರಗಿದ ಸಚಿವರ ಸಭೆಯಲ್ಲಿ ಷರತ್ತು ಗಳಿಲ್ಲದೆ ಜಾರಿ ಅಸಾಧ್ಯ ಎಂದು ವಿತ್ತ ಇಲಾಖೆ ಅಧಿಕಾರಿಗಳು ಹೇಳಿದ್ದರಿಂದ ಇನ್ನೂ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ. ಅನ್ನ ಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಸಂಚಾರ ಆದ್ಯತೆಯಾಗಲಿ. 200 ಯೂನಿಟ್‌ ಉಚಿತ ವಿದ್ಯುತ್‌, ಮನೆಯೊಡತಿಗೆ ಮಾಸಿಕ 2 ಸಾ. ರೂ. ಸಹಿತ ಉಳಿದ ಗ್ಯಾರಂಟಿಗಳನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

ಉಚಿತ ವಿದ್ಯುತ್‌ ಯೋಜನೆಗೆ ಮೊದಲು ಜನರಿಂದ ಹಣ ಕಟ್ಟಿಸಿಕೊಂಡು ಬಳಿಕ ಜನರ ಖಾತೆಗೆ ಸಬ್ಸಿಡಿ ಹಣ ಜಮೆ ಮಾಡುವ ಬಗ್ಗೆ ಹಾಗೂ ಸಾರಿಗೆ ಗ್ಯಾರಂಟಿ ಜಿಲ್ಲಾ ವ್ಯಾಪ್ತಿಗೆ ಸೀಮಿತಗೊಳಿಸಲು ಸಲಹೆ ಕೇಳಿ ಬಂದಿದೆ.

ಸಾರಿಗೆ, ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವರು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ನಡೆಸಿದ ಅಧಿಕಾರಿಗಳ ಸಭೆ ಹಾಗೂ ಅಲ್ಲಿನ ಪ್ರಸ್ತಾವವಾದ ವಿಚಾರಗಳನ್ನು ಸಭೆಗೆ ತಿಳಿಸಿದರು.

ಸಿಎಂಗೆ ಪರಮಾಧಿಕಾರ
ಅಂತಿಮವಾಗಿ ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿಗೆ ಪರಮಾಧಿಕಾರ ನೀಡಲಾಗಿದೆ. ಗುರುವಾರ ಹಣಕಾಸು ಸಹಿತ ಪ್ರಮುಖ ಇಲಾಖೆ ಅಧಿಕಾರಿಗಳು ಮತ್ತೂಂದು ಸುತ್ತಿನ ಸಭೆ ನಡೆಸಿ, ರೀ ವರ್ಕ್‌ ಔಟ್‌ ಮಾಡಿ ಶುಕ್ರವಾರದ ಸಂಪುಟ ಸಭೆಯಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಂದು ಸಂಪುಟ ಸಭೆಯ ಬಳಿಕ ಮಾರ್ಗಸೂಚಿ ಸಹಿತ ಮುಖ್ಯಮಂತ್ರಿಯವರು ಗ್ಯಾರಂಟಿಗಳ ಅನುಷ್ಠಾನ ಕುರಿತು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.

Advertisement

ಹಣಕಾಸುಹೊಂದಾಣಿಕೆ ಕಷ್ಟ
ಐದು ಗ್ಯಾರಂಟಿ ಯೋಜನೆಗಳಿಗೆ ಬೇಕಾಗುವ ಹಣಕಾಸನ್ನು ಒಮ್ಮೆಲೆ ಹೊಂದಿಸುವುದು ಈಗಿನ ಸ್ಥಿತಿಯಲ್ಲಿ ಕಷ್ಟ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಯಾವ್ಯಾವ ಬಾಬಿ¤ನಡಿ ಗರಿಷ್ಠ ಎಷ್ಟೆಷ್ಟು ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣ ಮಾಡಬಹುದು? ಯಾವ್ಯಾವ ಇಲಾಖೆಯ ಅನುದಾನ ಎಷ್ಟೆಷ್ಟು ಬಳಸಬಹುದು ಎಂಬ ಬಗ್ಗೆ ಮಾಹಿತಿ ನೀಡಿ 15ರಿಂದ 20 ಸಾವಿರ ಕೋಟಿ ರೂ. ವರೆಗೆ ಮಾತ್ರ ಲಭ್ಯವಾಗಬಹುದು ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಪ್ರಸ್ತಾಪವಾದ ಅಂಶಗಳು ಹಾಗೂ ಚರ್ಚೆಯ ವಿವರ ಬಹಿರಂಗಪಡಿಸದಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದೂ ಹೇಳಲಾಗಿದೆ.

ಜಾರಿಗೆ ಬದ್ಧ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ. ಗುರುವಾರದ ಬದಲು ಶುಕ್ರವಾರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಇಲ್ಲಿ ಷರತ್ತಿಗಿಂತ ಮುಖ್ಯವಾಗಿ ಒಂದು ವ್ಯವಸ್ಥೆಯಲ್ಲಿ ಜಾರಿ ಮಾಡುವುದು ಮುಖ್ಯ. ಉಚಿತ ಬಸ್‌ ಪ್ರಯಾಣವು ಯಾರಿಗೆ, ಯಾವ ಬಸ್‌, ಎಂಬ ವ್ಯವಸ್ಥಿತ ರೂಪದಲ್ಲಿ ಯೋಜನೆ ಜಾರಿ ಆಗಬೇಕಿದೆ. ನಿರುದ್ಯೋಗ ಭತ್ತೆ ವಿಚಾರದಲ್ಲಿ ಪದವೀಧರ ಮನೆಯಲ್ಲಿದ್ದಾನಾ? ಅಥವಾ ಖಾಸಗಿ ಕೆಲಸದಲ್ಲಿ ಇದ್ದಾನಾ ಮುಂತಾದ ಬಗ್ಗೆ ಲೆಕ್ಕಾಚಾರ ಮಾಡಬೇಕು. ನಾವು ವಿಪಕ್ಷ ಅಥವಾ ಬೇರೆಯವರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.

ಐದು ಗ್ಯಾರಂಟಿಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರಕಾರ ತೀರ್ಮಾನಿಸಿದೆ. ಜ.2ರ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next