Advertisement

ಪೈಪ್‌ ಕಳ್ಳತನ ಹೇಳಿಕೆಗೆ ಖಂಡನೆ

10:49 AM Jun 12, 2019 | Suhan S |

ಹಾವೇರಿ: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿ ಆವರಣದಲ್ಲಿರುವ ಪೈಪ್‌ ಕಳ್ಳತನವಾಗಿವೆ ಎಂದು ನೀಡಿರುವ ಹೇಳಿಕೆ ಖಂಡಿಸಿ ತಾಲೂಕಿನ ಕನವಳ್ಳಿ ಗ್ರಾಮಸ್ಥರು ಮಂಗಳವಾರ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ತಾವು ಇಲಾಖೆ ಅಧಿಕಾರಿಗಳ ಅನುಮತಿ ಪಡೆದುಕೊಂಡೇ ಪೈಪ್‌ ಒಯ್ದಿದ್ದು ಅಧಿಕಾರಿಗಳು ಈಗ ಪೈಪ್‌ ಕಳ್ಳತನವಾಗಿದೆ ಎಂದು ಹೇಳುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರನ್ನು ಕಳ್ಳರು ಎಂದು ಕರೆದಿರುವ ಜಿಪಂ ಎಂಜಿನಿಯರ್‌ ಕೂಡಲೇ ನಮ್ಮೂರ ಜನರ ಕ್ಷಮೆಯಾಚಿಸಬೇಕು. ಅಧಿಕಾರಿಗಳ ಈ ಹೇಳಿಕೆ ಹಿಂದೆ ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿಯವರ ಕುಮ್ಮಕ್ಕು ಇದ್ದು ಅವರ ಒತ್ತಡಕ್ಕೆ ಮಣಿದು ದೂರು ನೀಡಿದರೆ ಗ್ರಾಮಸ್ಥರೆಲ್ಲರೂ ಜಿಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಪಂ ಮಾಜಿ ಸದಸ್ಯ ಬಸವರಾಜ ಕಳಸೂರ ಮಾತನಾಡಿ, ಕನವಳ್ಳಿ ಗ್ರಾಮದಲ್ಲಿನ ಜನರು ಕುಡಿಯಲು ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ನೆರವಿಗೆ ಧಾವಿಸಿದ ಶಾಸಕ ನೆಹರು ಓಲೇಕಾರ ಅವರು, ಜೂ. 1ರಂದು ಟಾಸ್ಕ್ಪೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚಿಸಿ ಯುಟಿಪಿ ಕಾಲುವೆಯಿಂದ ಕೆರೆಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆ ಪ್ರಕಾರ ಬಿಸಿಲಿಗೆ ಹಾಳಾಗಿ ಹೋಗುತ್ತಿದ್ದ ಪೈಪ್‌ಗ್ಳನ್ನು ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಸಮ್ಮತಿ ನೀಡಿದ್ದರು. ಜೂ. 5ರಂದು ಗ್ರಾಮಸ್ಥರೆಲ್ಲ ಸೇರಿ ಪೈಪ್‌ಗ್ಳನ್ನು ನೀರಿನ ಉದ್ದೇಶಕ್ಕಾಗಿ ನೀರು ನೈರ್ಮಲ್ಯ ಇಲಾಖೆಯ ಸಿಬ್ಬಂದಿಯ ಸಮ್ಮುಖದಲ್ಲಿಯೇ 461 ಪೈಪ್‌ಗ್ಳನ್ನು ಎಣಿಕೆ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದೇವೆ. ಪೊಲೀಸ್‌ ಇಲಾಖೆ ಸಿಬ್ಬಂದಿ ಸಹ ಅಲ್ಲಿಗೆ ಬಂದಿದ್ದರು. ಅನುಮತಿ ಪಡೆದು ಅವರ ಸಮ್ಮುಖದಲ್ಲಿಯೇ ಪೈಪ್‌ ಒಯ್ದಿದ್ದು, ಈಗ ಅಧಿಕಾರಿಗಳು ಕಳ್ಳತನವಾಗಿದೆ, ಕಳ್ಳರು ಒಯ್ದಿದ್ದಾರೆ ಎನ್ನುತ್ತಿರುವುದು ವಿಷಾದನೀಯ ಎಂದರು.

ಪರಮೇಶ ದೊಡ್ಡಜಾಲಿ, ಪದ್ಮರಾಜ ಬಳಿಗಾರ, ಪರಮಯ್ಯ ಮಠದ, ಸುಭಾಸ ಮರಗಾಲ, ಮಹ್ಮದಗೌಸ್‌ ಬೂಶಿ, ಮರ್ಧನಸಾಬ ಅಗಡಿ, ಪ್ರಸನ್ನಕುಮಾರ ಭರಡಿ, ಮಹದೇವಪ್ಪ ಮುದಕಣ್ಣನವರ, ಮಂಜುನಾಥ ಸಿದ್ದುಗೂಳಪ್ಪನವರ, ನಾಗಪ್ಪ ಚೌಡಮ್ಮನವರ, ಆನಂದ ಪೂಜಾರ, ಶಿವು ಸಂಕನಗೌಡ್ರ, ಜಗದೀಶ ಭರಡಿ ಹಾಗೂ ಇತರು ಪ್ರತಿಭಟನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next