Advertisement
ಇದೇನು ಸಂಭ್ರಮ? ಓರ್ವ ಶಿಕ್ಷಕನ ಪರಿಕಲ್ಪನೆಯಿದು. ವಿಟ್ಲ ಸಮೀಪದ ಬೊಳಂತಿಮೊಗರು ಸರಕಾರಿ ಶಾಲೆಯ ಶಿಕ್ಷಕ ವಿಠ್ಠಲ ನಾಯಕ್ ಕೊಕ್ಕಪುಣಿ ಅವರು ಈ ಸಂಭ್ರಮವನ್ನು ಮನೆ ಮನೆಗೆ ಹಂಚುತ್ತಿದ್ದಾರೆ. ಇದು ಒಂದು, ಎರಡು ಅಥವಾ ಮೂರು ಗಂಟೆಗಳ ಕಾಲಾ ವಕಾಶವನ್ನು ಹೊಂದಿ ರುವ ಕಾರ್ಯಕ್ರಮ. ಇಬ್ಬರು ಅಥವಾ ಮೂವರು ಕಲಾ ವಿದರು, ಒಂದು ಹಾರ್ಮೋನಿಯಂ, ತಬಲಾ ಮತ್ತು ತಮ್ಕಿಯಿದೆ. ಮಾತಿನಲ್ಲಿ ವಿಠ್ಠಲ ನಾಯಕ್ ಮಂಟಪ ಕಟ್ಟುತ್ತಾರೆ.
ತಾಳ, ಮೇಳವಿದೆ. ಹಾಡು ಮೈ ನವಿರೇಳಿಸುತ್ತದೆ. ಹುಚ್ಚೆಬ್ಬಿಸುತ್ತದೆ. ಪಾಠ, ಪ್ರವಚನವಿದೆ ಆದರೆ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳಿಗಿಂತ ಹೆಚ್ಚು ಹೆತ್ತವರಿಗೂ ಇದೆ. ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ, ಸಂಪ್ರದಾಯ, ಆಚಾರ, ವಿಚಾರಗಳ ಗುತ್ಛವನ್ನು ಸಂಗ್ರಹಿಸುವುದಕ್ಕೆ ಅವಕಾಶವಿದೆ. ನಗುವಿದೆ, ವ್ಯಂಗ್ಯವಿದೆ. ನವಿರಾದ ಟಾಂಗ್ ಇದೆ. ಟೀಕೆಯಿದೆ. ತಿದ್ದುವುದಕ್ಕೆ ಸೂಕ್ತ ಮಾರ್ಗದರ್ಶನವಿದೆ. ಸಮಾಜದ ಅಂಕುಡೊಂಕುಗಳನ್ನು ವಿಮರ್ಶಿಸಿ, ಪ್ರತಿಯೊಬ್ಬರ ಆತ್ಮ ವಿಮರ್ಶೆ ಮಾಡಿಸುತ್ತದೆ. ಮೈಮರೆಯುವ ಪ್ರೇಕ್ಷಕರು
ಎತ್ತರದ ಸ್ವರ, ಏರಿಳಿತ, ಪದ ಲಾಲಿತ್ಯ, ಸೂಕ್ತ ಹಾಡುಗಳ ಆಯ್ಕೆ, ಅಗತ್ಯ ಸಂಭಾಷಣೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುವ ವಿಠ್ಠಲ ನಾಯಕ್ ಅವರ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಾರೆ. ಹತ್ತು ನಿಮಿಷದಲ್ಲೇ ತಾಳ್ಮೆ ಕಳೆದುಕೊಳ್ಳುವ ಪ್ರೇಕ್ಷಕರನ್ನು, ಇವರು ಒಂದೆರಡು ಗಂಟೆಗಳ ಕಾಲ ಅಲುಗಾಡದೇ ಇರುವಂತೆ ನೋಡಿಕೊಳ್ಳುತ್ತಾರೆ. ಪ್ರೇಕ್ಷಕರನ್ನು ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವುದೇ ಒಂದು ರೀತಿಯ ಸಂಭ್ರಮ. ಮಾತಿನ ಚಾಟಿ ಯೇಟು ನೀಡುವುದು, ತನ್ನನ್ನೇ ಗುರಿಯಿಟ್ಟು ಚುಚ್ಚಿದರೋ ಎನ್ನು ವಂತೆ ಮಾಡುವ ವಿಷಯ ವೈವಿಧ್ಯ ಆಕರ್ಷಣೀಯವಾಗಿದೆ.
Related Articles
ಗೀತಾ ಸಾಹಿತ್ಯ ಸಂಭ್ರಮ ಕಾರ್ಯ ಕ್ರಮವನ್ನು ವಿಠ್ಠಲ ನಾಯಕ್ ಸುಮಾರು 1000 ಕಡೆಗಳಲ್ಲಿ ಆಯೋಜಿಸಿದ್ದಾರೆ. ಏಕವ್ಯಕ್ತಿ ಪ್ರದರ್ಶನವೂ ಇದೆ. ಕಲಾವಿದರಾದ ಸುಹಾಸ್ ಹೆಬ್ಟಾರ್, ರವಿರಾಜ್ ಒಡಿಯೂರು ಮತ್ತು ತೇಜಸ್ ಕಲ್ಲುಗುಂಡಿ ಅವರ ಸಾಥ್‌ನೊಂದಿಗೆ ನೀಡುವ ಪ್ರದರ್ಶನವೂ ಇದೆ. ಇವರ ಗೀತಾ ಸಾಹಿತ್ಯ ಸಂಭ್ರಮ ಕೇಳುಗರಿಗೆ ಹಬ್ಬ. ಆದುದರಿಂದ ಈ ಸಂಭ್ರಮವು ಇವರನ್ನು ಊರೂರಿಗೆ ತಿರುಗಾಟ ಮಾಡಿಸಿದೆ.
Advertisement
ಉದಯಶಂಕರ್ ನೀರ್ಪಾಜೆ