Advertisement

ನಿರಾಲಂಬ ಪೂರ್ಣ ಚಕ್ರಾಸನ: 9ರ ತನುಶ್ರೀ ಗಿನ್ನೆಸ್‌ ವಿಶ್ವ ದಾಖಲೆ

07:00 AM Apr 08, 2018 | |

ಉಡುಪಿ: ಉದ್ಯಾವರ ಪಿತ್ರೋಡಿಯ ಉದಯಕುಮಾರ್‌-ಸಂಧ್ಯಾ ದಂಪತಿ ಪುತ್ರಿ 9ರ ಹರೆಯದ ಬಾಲೆ ತನುಶ್ರೀ ಪಿತ್ರೋಡಿ ಅವರು ಎ. 7ರಂದು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖವನ್ನು ಮುಂದೆ ಮಾಡಿ ಎದೆಭಾಗವನ್ನು ನೆಲದಲ್ಲಿ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು ವರ್ತು ಲಾಕಾರದಲ್ಲಿ ತಿರುಗಿಸುವ ಯೋಗದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡಿರುವ ತನುಶ್ರೀ, ಈ ಹಿಂದಿನ ಪ್ಯಾಲೆಸ್ತೇನ್‌ ದೇಶದ ಹುಡುಗನ ಗಿನ್ನೆಸ್‌ ದಾಖಲೆಯನ್ನು ಮುರಿದಿದ್ದಾರೆ. 2017 ಫೆಬ್ರವರಿಯಲ್ಲಿ ಜೋರ್ಡಾನ್‌ನಲ್ಲಿ ನಡೆದ ಗಿನ್ನೆಸ್‌ ದಾಖಲೆಯಲ್ಲಿ ಪ್ಯಾಲೆಸ್ತೀನ್‌ನ 12 ವರ್ಷದ ಬಾಲಕ ಮಹಮ್ಮದ್‌ ಅಲ್‌ ಶೇಖ್‌ ನಿಮಿಷಕ್ಕೆ 38 ಸುತ್ತು ಯೋಗಭಂಗಿ ಮಾಡಿದ್ದನು. ತನುಶ್ರೀ 42 ಸುತ್ತು ಮಾಡಿ ಗಿನ್ನೆಸ್‌ ಬುಕ್‌ ರೆಕಾರ್ಡ್‌ನಲ್ಲಿ ಹೆಸರು ದಾಖ
ಲಿಸಿಕೊಂಡಿದ್ದಾರೆ.

Advertisement

ಶನಿವಾರ ಪಿತ್ರೋಡಿಯ ವೆಂಕಟರಮಣ ನ್ಪೋರ್ಟ್ಸ್ ಕ್ಲಬ್‌ನವರ ಆಶ್ರಯದಲ್ಲಿ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ ಅಧಿಕಾರಿ ಮುಂಬಯಿಯ ಸ್ವಪ್ನಿಲ್‌ ಡಾಂಗ್ರೀಕರ್‌ ಅವರೆದುರು 1 ನಿಮಿಷದ ಯೋಗಭಂಗಿಯನ್ನು ತನುಶ್ರೀ ಪ್ರದರ್ಶಿಸಿದರು. ಇದನ್ನು ದಾಖಲೀಕರಿಸಿಕೊಂಡು ಪರಿಶೀಲಿಸಿಕೊಂಡು 30 ನಿಮಿಷದ ಆನಂತರ ತನುಶ್ರೀ ಗಿನ್ನೆಸ್‌ ದಾಖಲೆ ಮಾಡಿರುವುದನ್ನು ಅಧಿಕಾರಿ ಘೋಷಿಸಿದರು. ತನುಶ್ರೀಗೆ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ನ ದಾಖಲೆಯನ್ನು ಡಾಂಗ್ರೀಕರ್‌ ಹಸ್ತಾಂತರಿಸಿದರು. ತನುಶ್ರೀ ಕಳೆದ ವರ್ಷ ಯೋಗದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್‌ ಸಾಧನೆ ಮಾಡಿದ್ದರು.

ತನುಶ್ರೀ ಅವರ ತಂದೆ ಉದಯ ಕುಮಾರ್‌, ತಾಯಿ ಸಂಧ್ಯಾ, ಗಣ್ಯರಾದ ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ್‌ ಉದ್ಯಾವರ, ಪ್ರವೀಣ್‌ ಪೂಜಾರಿ, ಸಾಧು ಸಾಲ್ಯಾನ್‌, ವಿನಯ ಕರ್ಕೇರ, ನಿರುಪಮಾ ಪ್ರಸಾದ್‌, ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಎನ್‌.ಟಿ. ಅಮೀನ್‌, ಸುಕುಮಾರ್‌, ನಾಗರಾಜ ರಾವ್‌, ರವಿ, ಶ್ಯಾಮ್‌ ಮಲ್ಪೆ, ದಯಾಕರ್‌, ಉಮೇಶ್‌ ಕರ್ಕೇರ, ನಾರಾಯಣ, ಗಿರೀಶ್‌ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಧನೆ ದೇಶಕ್ಕೆ ಅರ್ಪಣೆ
ಬೆಳಗ್ಗೆ, ಸಂಜೆ, ರಾತ್ರಿ ನಾಲ್ಕು ತಿಂಗಳ ಪರ್ಯಂತ ಪ್ರಯತ್ನದಿಂದ ಈ ಸಾಧನೆ ಮಾಡಿದ್ದೇನೆ. ಈ ಸಾಧನೆಯನ್ನು ನಾನು ದೇಶಕ್ಕೆ ಅರ್ಪಿಸುತ್ತೇನೆ. ತಂದೆ, ತಾಯಿಯೇ ನನಗೆ ಗುರುಗಳು. ಮೊಬೈಲ್‌ ಯೂಟ್ಯೂಬ್‌ ವೀಡಿಯೋ ನೋಡಿ ಯೋಗ ಭಂಗಿಯನ್ನು ಕಲಿಯುತ್ತಿದ್ದೆ. 

ಹಿಂದಿನ ದಾಖಲೆ
ಪ್ಯಾಲೇಸ್ತೇನ್‌ನ 12 ವರ್ಷದ ಬಾಲಕ ಮಹಮ್ಮದ್‌ ಅಲ್‌ ಶೇಖ್‌ – ನಿಮಿಷಕ್ಕೆ 38 ಸುತ್ತು. 
ಈಗಿನ ದಾಖಲೆ 
ಭಾರತದ ಉಡುಪಿ ಜಿಲ್ಲೆ ತನುಶ್ರೀ ಪಿತ್ರೋಡಿ  – ನಿಮಿಷಕ್ಕೆ 42 ಸುತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next