ಬೆಂಗಳೂರು: ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿಯವರನ್ನು ಪದಚ್ಯುತಗೊಳಿಸುವ ನಿರ್ಣಯ ಕೈಗೊಂಡು ಕೈಸುಟ್ಟುಕೊಂಡಿದ್ದ ಆಡಳಿತರೂಢ ಕಾಂಗ್ರೆಸ್ ಪಕ್ಷದ 78 ಮಂದಿ ಶಾಸಕರು ಪ್ರಾಸಿಕ್ಯೂಶನ್ ಎದುರಿಸುವ ಭೀತಿಯಿಂದ ಬಚಾವಾಗಿದ್ದಾರೆ!
ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಅವರನ್ನು ಪದಚ್ಯುತಗೊಳಿಸಲು ನಿರ್ಣಯ ಕೈಗೊಂಡು ನಿರ್ಣಯಕ್ಕೆ ಸಹಿ ಹಾಕಿದ ಶಾಸಕರ ವಿರುದ್ಧ “ಸಾಂವಿಧಾನಿಕ ಹುದ್ದೆಯಲ್ಲಿದ್ದವರಿಗೆ ಸಾರ್ವಜನಿಕ ಜೀವನದಲ್ಲಿ ಮಾನಹಾನಿ ಉಂಟು ಮಾಡಿದ’ ಆರೋಪದ ಮೇಲೆ ಪ್ರಾಸಿಕ್ಯೂಶನ್ ನಡೆಸಲು ಅನುಮತಿ ಹಾಗೂ ಕ್ರಮ ಜರುಗಿಸುವಂತೆ ಕೋರಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಈ ಎರಡೂ ಅರ್ಜಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ವಜಾಗೊಳಿಸಿದ್ದಾರೆ.
ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನಾಧಿಕಾರ ಸಂಘರ್ಷ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಸಲ್ಲಿಸಿದ್ದ ಎರಡು ಪ್ರತ್ಯೇಕ ದೂರುಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ಈ ಬಗ್ಗೆ ಕಾನೂನು ಪ್ರಾಧಿಕಾರದ ಅಭಿಪ್ರಾಯವನ್ನು ಕೇಳಿದ್ದರು. ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಿಗೆ ಮಾನಹಾನಿ ಉಂಟು ಮಾಡಿದವರ ವಿರುದ್ಧ ಖುದ್ದು ಅವರೇ ವಿಚಾರಣೆ ನಡೆಸಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಲೋಕಾಯುಕ್ತ ಕಾಯಿದೆಯಲ್ಲಿ ಅವಕಾಶವಿದೆ. ಹೀಗಾಗಿ ಶಾಸಕರ ವಿರುದ್ಧ ದಾಖಲಾದ ಎರಡೂ ಖಾಸಗಿ ದೂರುಗಳನ್ನು ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಮೆರಿಟ್ ಆಧಾರದ ಮೇಲೆ ದೂರುಗಳನ್ನು ವಜಾಗೊಳಿಸಲಾಗಿದೆ ಎಂದು ಲೋಕಾಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಉಪಲೋಕಾಯುಕ್ತರ ಹುದ್ದೆಗೆ ಮಾನಹಾನಿ ಉಂಟುಮಾಡಿದ್ದ ಶಾಸಕರ ವಿರುದ್ಧದ ದೂರನ್ನು ವಜಾಗೊಳಿಸಿರುವ ಲೋಕಾಯುಕ್ತರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ. ಅಲ್ಲಿ ನ್ಯಾಯ ಸಿಗುವ ಭರವಸೆಯಿದೆ.
ಆದರ್ಶ್ ಅಯ್ಯರ್, ಜನಾಧಿಕಾರ ಸಂಘರ್ಷ ಪರಿಷತ್