ನಟ ಅರ್ಜುನ್ ಸರ್ಜಾ ಮತ್ತು ನಟಿ ಶ್ರುತಿ ಹರಿಹರನ್ ನಡುವಿನ “ಮಿ ಟೂ’ ಪ್ರಕರಣ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ, ಇತ್ಯರ್ಥವಾಗದೆ ಸಂಧಾನ ಮಾತುಕತೆ ಮುರಿದುಬಿದ್ದಿದೆ. ಆದರೆ “ಮಿ ಟೂ’ ಅಭಿಯಾನ ಮತ್ತುಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಮುಂದೆ ಇಂಥ ವಿವಾದಗಳನ್ನು ತಡೆಯಲು, ನಿರ್ಮಾಪಕರ ಹಿತರಕ್ಷಣೆ ಕಾಪಾಡಲು “ಪ್ರೊಡ್ನೂಸರ್ ಪ್ರೊಟೆಕ್ಷನ್ ಕಮಿಟಿ’ (ಪಿಪಿಸಿ) ರಚಿಸಲು ಮುಂದಾಗಿದೆ.
ವಾಣಿಜ್ಯ ಮಂಡಳಿಯ ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ, ಅದನ್ನು ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕು. ಚಿತ್ರರಂಗಕ್ಕೆ ಮುಜುಗರ ಆಗುವಂತಹ ಸನ್ನಿವೇಶಗಳನ್ನು ತಪ್ಪಿಸುವ ಸಲುವಾಗಿ ಚಿತ್ರರಂಗದ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರ ಪ್ರತಿನಿಧಿಗಳನ್ನು ಒಳಗೊಂಡ ಪಿಸಿಸಿ ರಚನೆಗೆ ಚಿಂತನೆ ನಡೆದಿದೆ.
ಈಗಾಗಲೇ ಪಿಪಿಸಿ ರೂಪುರೇಷೆ ಸಿದ್ದಗೊಳ್ಳುತ್ತಿದ್ದು, ಅ. 30ರಂದು ನಡೆಯಲಿರುವ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಲಾಗುವುದು. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವಾರದೊಳಗೆ “ಪ್ರೊಡ್ನೂಸರ್ ಪೊ›ಟೆಕ್ಷನ್ ಕಮಿಟಿ’ (ಪಿಪಿಸಿ) ರಚನೆಯಾಗಲಿದೆ ಎನ್ನಲಾಗುತ್ತಿದೆ.
ಅರ್ಜುನ್ ಪರ ಚಿರು ಅಭಿಯಾನ: ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿರುವ “ಮಿ ಟೂ’ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗುತ್ತಿದೆ. ಈ ವಿವಾದದಲ್ಲಿ ಕೆಲವರು ಅರ್ಜುನ್ ಸರ್ಜಾ ಪರ ನಿಂತರೇ, ಇನ್ನು ಕೆಲವರು ಶ್ರುತಿ ಪರ ಮಾತನಾಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕುಟುಂಬದವರು ಮತ್ತು ಅಭಿಮಾನಿಗಳು ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.”ಮಿ ಟೂ’ ಆರೋಪ ವಿಚಾರವಾಗಿ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ ಅವರ ಬಗ್ಗೆ ತಿಳಿಸುವ ಸಲುವಾಗಿ ನಟ ಚಿರಂಜೀವಿ ಸರ್ಜಾ ಟ್ವೀಟ್ ಕ್ಯಾಂಪೇನ್ ಆರಂಭಿಸಿದ್ದಾರೆ. ತಮ್ಮ ಟ್ಟಿಟ್ಟರ್ ನಲ್ಲಿ ಚಿರಂಜೀವಿ ಸರ್ಜಾ, “ಸ್ನೇಹಿತರೆ ನಾನು ಜೆಂಟಲ್‌ಮ್ಯಾನ್ ಅರ್ಜುನ್ ಸರ್ಜಾ ಅವರಿಗೆ ಬೆಂಬಲ ನೀಡುತ್ತೇನೆ,
ನೀವು ಏನು ಹೇಳುತ್ತೀರಾ..?’ ಎಂದು ಅರ್ಜುನ್ ಸರ್ಜಾ ಅವರ ಫೋಟೋ ಪೋಸ್ಟ್ ಮಾಡಿ, (ಐ ಸ್ಟಾಂಡ್ ವಿತ್ ಜಂಟಲ್ ಮ್ಯಾನ್) ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಸರ್ಜಾ ಪರವಾಗಿ ಅಭಿಯಾನ ಶುರು ಮಾಡಿದ್ದಾರೆ. ಇದೀಗ ಈ ಕ್ಯಾಂಪೇನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಅರ್ಜುನ್ ಸರ್ಜಾ ಪರವಾಗಿ ಬೆಂಬಲಿಸುವವರು ಸರ್ಜಾ ಅವರ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.