ಭದ್ರಾವತಿ: ವಿಐಎಸ್‌ಎಲ್ ಉತ್ಸವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಕಿರುತೆರೆ ನಟ, ರಂಗ ಕಲಾವಿದ ಅಪರಂಜಿ ಶಿವರಾಜ್ ನೇತೃತ್ವದ ತಂಡ ವಿಭಿನ್ನ ಬಗೆಯ ಕಾರ್ಯಕ್ರಮಗಳೊಂದಿಗೆ ಪ್ರೇಕ್ಷಕರ ಗಮನ ಸೆಳೆಯಿತು.
ಮಿಲನ ಸಾಂಸ್ಕೃತಿಕ ವೇದಿಕೆ ಸಹಕಾರದೊಂದಿಗೆ ಅಪರಂಜಿ ಅಭಿನಯ ಶಾಲೆಯ ಕಲಾವಿದರು ಹಾಡು, ನೃತ್ಯ, ಏಕಪಾತ್ರಾಭಿನಯ ಹಾಗೂ ನಾಟಕ ಪ್ರದರ್ಶನಗಳನ್ನು ನಡೆಸಿಕೊಟ್ಟರು.
ಅಪರಂಜಿ ಶಿವರಾಜ್ ನಿರ್ದೇಶನದ ಕುರಿಗಳು ಸಾರ್ ಕುರಿಗಳು ಗ್ರಾಮೀಣ ಸೊಗಡಿನ ಹಾಸ್ಯ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಮಾತುಗಳು, ನಡವಳಿಕೆಗಳು ಹಾಗೂ ಕಾರ್ಯ ಚಟುವಟಿಕೆಗಳು ಮತ್ತು ಮತದಾರರಿಗೆ ನೀಡುವ ಅಮಿಷಗಳ ಕುರಿತು ಕಲಾವಿದರು ತಮ್ಮ ಅಭಿನಯಗಳ ಮೂಲಕ ಜಾಗೃತಿ ಮೂಡಿಸಿದರು.
ಇಂದು ಎರಡು ನಾಟಕ ಪ್ರದರ್ಶನ : ನಗರದ ಶಾಂತಲಾ ಕಲಾ ವೇದಿಕೆ ವತಿಯಿಂದ ಎಂಪಿಎಂ ಲಲಿತ ಕಲಾ ಸಂಘದ ಸಹಕಾರದೊಂದಿಗೆ ಫೆ.11ರಂದು ಸಂಜೆ 6.30ರಿಂದ ವಿಐಎಸ್‌ಎಲ್ ಉತ್ಸವದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಶ್ರೀ ಮುರುಘಾ ಶರಣರು ರಚಿಸಿರುವ ಮೂಢನಂಬಿಕೆಯ ವಿರುದ್ಧ ತಿಳುವಳಿಕೆ ನೀಡುವ ‘ಹೊಯ್ದಾಟ’ ಮತ್ತು ಹಿರಿಯ ನಾಗರಿಕರ ಸಮಸ್ಯ ಮತ್ತು ಅವರು ಅನುಭವಿಸುವ ಯಾತನೆ, ನೋವು-ನಲಿವುಗಳನ್ನು ಬಿಂಬಿಸುವ ‘ಸಂಧ್ಯಾ ಪ್ರವರ್ತತೆ’ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ರಂಗದಾಸೋಹಿ ಎಸ್.ಜಿ. ಶಂಕರಮೂರ್ತಿಯವರು ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ ನೀಡಿದ್ದಾರೆ.