Advertisement

ಬಿಂಕ-ಭಿನ್ನಾಣದ ಕಲರ್‌ಫ‌ುಲ್‌ ಯಾನ

10:03 AM Jul 14, 2019 | Lakshmi GovindaRaj |

ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌ ಹಿಡಿಯುವುದು ಅಥವಾ ಲಾಂಗ್‌ ಡ್ರೈವ್‌ ಹೋಗುವುದನ್ನ ಅನೇಕ ಚಿತ್ರಗಳಲ್ಲಿ ನೋಡಿದ್ದೇವೆ. ಒಂದು ವೇಳೆ ಹುಡುಗಿಯರಿಗೂ ಇಂಥದ್ದೇ ಪರಿಸ್ಥಿತಿ ಬಂದರೆ ಅವರೇನು ಮಾಡಬಹುದು? ಹುಡುಗರಂತೆ, ಹುಡುಗಿಯರಿಗೂ ರೀಫ್ರೆಶ್‌ ಆಗಲು ಲೈಫ್ ರೀಸ್ಟಾರ್ಟ್‌ ಮಾಡಲು ಏನೇನು ದಾರಿಗಳಿರುತ್ತವೆ?

Advertisement

ಕೊನೆಯಾಗುತ್ತದೆ ಎಂದುಕೊಂಡ ಹುಡುಗಿಯರ ಜೀವನ ಹೊಸದಾಗಿ ಹೇಗೆಲ್ಲ ಶುರುವಾಗಬಹುದು? ಇವೆಲ್ಲದರ ಚಿತ್ರಣವೇ “ಯಾನ’ ಚಿತ್ರ. ಹೆಸರೇ ಹೇಳುವಂತೆ “ಯಾನ’ ಮಾಯಾ, ನಂದಿನಿ, ಅಂಜಲಿ ಎನ್ನುವ ಮೂವರು ಹುಡುಗಿಯರ ಜೀವನ “ಯಾನ’ದ ಚಿತ್ರ. ಮೂವರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಹುಡುಗಿಯರು ತಮಗೆ ಎದುರಾಗುವ ಸವಾಲುಗಳನ್ನು ಹೇಗೆ ಸ್ವೀಕರಿಸಿ, ಹೊಸ ಜೀವನಕ್ಕೆ ತೆರೆದುಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

ಇಲ್ಲಿ ಇಂದಿನ ಜನರೇಶನ್‌ ಹುಡುಗ-ಹುಡುಗಿಯರ ಮನಸ್ಥಿತಿ, ಪೋಷಕರಾದವರ ಪರಿಸ್ಥಿತಿ, ಕಥೆ-ವ್ಯಥೆ, ನೋವು-ನಲಿವು ಎಲ್ಲವೂ ಇದೆ. ಹಾಗಂತ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಸರಳವಾದ ಕಥೆಯನ್ನೇ ಕಲರ್‌ಫ‌ುಲ್‌ ಆಗಿ ಕಟ್ಟಿಕೊಟ್ಟಿರುವುದರಿಂದ ಚಿತ್ರದಲ್ಲಿ ಗ್ಲಾಮರ್‌ಗಂತೂ ಕೊರತೆಯಿಲ್ಲ.

ಕೆಲವೆಡೆ ಸ್ವಲ್ಪ ಜರ್ಕ್‌ ತೆಗೆದುಕೊಂಡು “ಯಾನ’ ನಿಧಾನವೆನಿಸಿದರೂ, ಅದರ ಹಿಂದೆಯೇ ಬರುವ ಸಾಂಗ್ಸ್‌, ಡ್ಯಾನ್ಸ್‌, ಕಾಮಿಡಿ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳು ಪ್ರೇಕ್ಷಕರನ್ನು ಮರಳಿ ಟ್ರ್ಯಾಕ್‌ಗೆ ಕರೆದುಕೊಂಡು ಹೋಗುತ್ತದೆ. ಒಟ್ಟಾರೆ “ಅದೇ ದಾರಿ’ಯಲ್ಲಿ ಎಲ್ಲೂ ಬೋರ್‌ ಆಗದೇ ಪ್ರೇಕ್ಷಕರ “ಯಾನ’ ಸುಖಕರವಾಗಿರುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನು ಇಡೀ ಚಿತ್ರದ ಬಹುಭಾಗ ಮೂವರು ಹುಡುಗಿಯರ ಸುತ್ತವೇ ನಡೆಯುವುದರಿಂದ ಚಿತ್ರದ ಮೂವರೂ ನಾಯಕಿಯರು (ವೈಭವಿ,ವೈನಿಧಿ, ವೈಸಿರಿ) ಕೂಡ ಅಭಿನಯ ಮತ್ತು ಅಂದ ಎರಡರಲ್ಲೂ ಗಮನ ಸೆಳೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದ್ರೆ ಚಿತ್ರದುದ್ದಕ್ಕೂ ಮೂವರು ಸುಂದರ ಸೋದರಿಯರೇ ಹೈಲೈಟ್‌!

Advertisement

ಉಳಿದಂತೆ ಅನಂತನಾಗ್‌, ಸುಹಾಸಿನಿ, ರಂಗಾಯಣ ರಘು ಮೊದಲಾದ ಅನುಭವಿ ಕಲಾವಿದರದ್ದು ಅಚ್ಚುಕಟ್ಟು ಅಭಿನಯ. ಸಾಧುಕೋಕಿಲ, ಚಿಕ್ಕಣ್ಣ, ಸಂಜು ಬಸಯ್ಯ ಮೊದಲಾದ ಪಾತ್ರಗಳನ್ನು ಕಾಮಿಡಿಗಾಗಿಯೇ ಬಲವಂತವಾಗಿ ಸೇರಿಸಿದಂತಿದೆ. ನಾಯಕರ ಪಾತ್ರಗಳು ಹೆಸರಿಗಷ್ಟೇ ಇರುವಂತಿದೆ.

ಇನ್ನು ಚಿತ್ರದ ತಾಂತ್ರಿಕ ಗುಣಮಟ್ಟ ಚೆನ್ನಾಗಿದ್ದು, ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯುತ್ತದೆ. ಅದ್ಧೂರಿ ಲೊಕೇಶನ್‌ಗಳು, ಕಾಸ್ಟೂéಮ್‌, ಮೂವರು ಬೆಡಗಿಯರ ಬಿಂಕ-ಭಿನ್ನಾಣ ಎಲ್ಲವೂ ತೆರೆಮೇಲೆ “ಯಾನ’ವನ್ನು ಕಲರ್‌ಫ‌ುಲ್‌ ಆಗಿ ಮಾಡಿದೆ. ಒಟ್ಟಿನಲ್ಲಿ ತೀರಾ ನಿರೀಕ್ಷೆಗಳಿಲ್ಲದೆ ವಾರಾಂತ್ಯದಲ್ಲಿ ಒಮ್ಮೆ “ಯಾನ’ದ ಅನುಭವವನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.

ಚಿತ್ರ: ಯಾನ
ನಿರ್ಮಾಣ: ಹರೀಶ್‌ ಶೇರಿಗಾರ್‌
ನಿರ್ದೇಶನ: ವಿಜಯಲಕ್ಷ್ಮೀ ಸಿಂಗ್‌
ತಾರಾಗಣ: ವೈಭವಿ, ವೈನಿಧಿ, ವೈಸಿರಿ, ಅನಂತನಾಗ್‌, ಸುಹಾಸಿನಿ, ಸುಮುಖ, ಅಭಿಷೇಕ್‌, ರಂಗಾಯಣ ರಘು, ರವಿಶಂಕರ್‌, ಸಾಧುಕೋಕಿಲ, ಚಿಕ್ಕಣ್ಣ ಮತ್ತಿತರರು

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next