Advertisement

ಶಾಲಾ ಮಕ್ಕಳೊಂದಿಗೆ ಕಾಲೇಜು ಮಕ್ಕಳು !

03:45 AM Mar 03, 2017 | |

ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ನಡೆಸುವ ನಿಮಿತ್ತ ನಾವು ಯಾವುದಾದರೂ ಹತ್ತಿರದ ಸರ್ಕಾರಿ ಶಾಲೆಗೆ ಹೋಗಿ ಅಲ್ಲಿಯ ಚಿಕ್ಕಮಕ್ಕಳಿಗೆ ಹಾಡು, ನಾಟಕ, ನೃತ್ಯ, ಪಾಠಗಳನ್ನು ಹೇಳಿಕೊಡಬೇಕು ಎಂದು. ಮೊದಮೊದಲು ಯಾರಿಗೂ ಹೋಗುವ ಮನಸ್ಸಿರಲಿಲ್ಲ. “ಅಯ್ಯೋ! ನಮ್ಮ ಓದು ಬಿಟ್ಟು ನಾವ್ಯಾಕೆ ಹೋಗ್ಬೇಕು’ ಎಂದುಕೊಂಡು ಸುಮ್ಮನಾದೆವು. ಆದರೂ ಅಧ್ಯಾಪಕರ ಒತ್ತಾಯದ ಮೇರೆಗೆ 18 ವಿದ್ಯಾರ್ಥಿನಿಯರ ತಂಡ ಪಕ್ಕದಲ್ಲೇ ಇದ್ದ ಸರ್ಕಾರಿ ಶಾಲೆಗೆ ತೆರಳಿದೆವು. ಯಾವುದೇ ಪೂರ್ವತಯಾರಿ ಇಲ್ಲದೆ ಹೋದುದರಿಂದ ಅಲ್ಲಿ ಸ್ವಲ್ಪ ಹೊತ್ತು ಕಳವಳಗೊಂಡದ್ದಂತೂ ಹೌದು. ತದ ನಂತರ ಅಲ್ಲೇ ಇದ್ದ ದೊಡªದಾದ ರೂಮೊಂದಕ್ಕೆ ಹೋದೆವು. 

Advertisement

ಅಲ್ಲಿಗೆ ಬಂದ ಮಕ್ಕಳು ತಮ್ಮ ಮುಗ್ಧ ನಗುವಿನೊಂದಿಗೆ ಬಂದು, “ಹಾಯ್‌ ಅಕ್ಕ ಹೇಗಿದ್ದೀರ?’ ಕೇಳಿದಾಗ ಬಹಳ ಸಂತೋಷವಾಗಿತ್ತು. ನಂತರ ನಮಲ್ಲಿ ಒಬ್ಟಾಕೆ ಒಂದು ಅಭಿನಯ ಗೀತೆ ಹೇಳಿಕೊಟ್ಟಾಗ ಅದನ್ನು ಕೂಡಲೇ ಬಾಯಿಪಾಠ ಮಾಡಿ ಅಷ್ಟೆ ಸುಂದರವಾಗಿ ಚೆನ್ನಾಗಿ ಹಾಡಿ ತೋರಿಸಿದರು. ನಂತರ ನಾವು ಅವರಿಗೆ ಪಾಠಗಳನ್ನು ಹೇಳಿಕೊಡಲು ಶುರು ಮಾಡಿದೆವು. ಆಗ ನಾವು ಜೋಡಿಗಳಾಗಿ ನಮನ್ನು ವಿಂಗಡಿಸಿಕೊಂಡು ಇಬ್ಬಿಬ್ಬರು ಮಕ್ಕಳಿಗೆ ಹೇಳಿಕೊಡಲು ಶುರು ಮಾಡಿದೆವು. ಅವರು ಕೂತುಕೊಂಡಾಕ್ಷಣ, “ಅಕ್ಕ ನಮ್ಗೆ ಗಣಿತ ಹೇಳ್ಕೊಡಿ, ಬೇರೆ ಯಾವುದೂ ಬೇಡ’ ಅಂದರು. ನಮಗೆ ಗಣಿತ ಅಷ್ಟಕಷ್ಟೆ. ಜೊತೆಗೆ ಬೋರ್ಡು, ಬುಕ್ಕೂ ಏನೂ ಇರಲಿಲ್ಲ. ಆದರೆ, ಆ ಮಕ್ಕಳು, “ಪರ್ವಾಗಿಲ್ಲಕ್ಕ ಬಾಯಲ್ಲೇ ಹೇಳ್ಕೊಡಿ’ ಎಂದರು. 

ಅಲ್ಲಿ ಹೆಚ್ಚಾಗಿ ಧಾರವಾಡ, ಮೈಸೂರು, ಬಾಗಲಕೋಟೆ ಮೂಲದ ಮಕ್ಕಳೇ ಇದ್ದರು. ಅದರಲ್ಲಿ ನಮ್ಮೊಂದಿಗೆ ಇದ್ದದ್ದು ಬಾಗಲಕೋಟೆ ಮೂಲದ ಮಣಿಕಂಠ ಮತ್ತು ಭೀಮರಾಜ…. ಅವರಿಬ್ಬರು ಗಣಿತದಲ್ಲಿ ಬಹಳ ಮುಂದಿದ್ದರು. ಯಾವುದೇ ಪ್ರಶ್ನೆ ಕೊಟ್ಟರೂ ಕಣ್ಣಲ್ಲೇ ಲೆಕ್ಕ ಪಟ ಪಟ ಅಂತ ಉತ್ತರ ಕೊಡುತ್ತಿದ್ದರು. ನಂತರ, “ಇಂಗ್ಲಿಷ್‌ ಹೇಳಿಕೊಡುತ್ತೇವೆ’ ಎಂದರೆ “ಬೇಡ’ ಅಂದರು. ಅವರಿಗೆ ಇಂಗ್ಲಿಷ್‌ ಬಹಳ ಕಷ್ಟದ ಪಾಠ ಎಂದು ತಿಳಿಯಿತು. ಆದರೂ ಕೈಲಾದ ಮಟ್ಟಿಗೆ ಹೇಳಿಕೊಟ್ಟದನ್ನ ಬಹಳ ಚೆನ್ನಾಗಿ ಅರ್ಥಮಾಡಿಕೊಂಡರು. ಆಗಲೇ ಅಲ್ಲಿ ಬಂದ ನನ್ನ ಗೆಳತಿಯೊಬ್ಬಳು ಆಂಗ್ಲ ಭಾಷೆಯಲ್ಲಿ ಮುಂದಿನ ಸಲ ಬರುವಾಗ ಅವರಲ್ಲಿ ಬ್ಯಾಗು ಬುಕ್ಕು ತೆಗೆದುಕೊಂಡು ಬರಲು ಹೇಳು ಎಂದಳು. ಅದನ್ನು ಆ ಮಕ್ಕಳಿಗೆ ಹೇಳಿದರೆ, ಆ ಮಕ್ಕಳು, “ಬ್ಯಾಗು ಬುಕ್ಕು ತಬೇಕ್ರಿ ?’ “ಸರಿ ತರ್ತೀವ್ರಿ ಅಕ್ಕ’ ಅಂದರು. ಆಗ ನಮಗೆ ಅರ್ಥ ಆಯ್ತು ಆ ಮಕ್ಕಳಿಗೆ ಇಂಗ್ಲಿಷ್‌ ಚೆನ್ನಾಗಿ ಅರ್ಥ ಆಗುತ್ತೆ, ಆದರೆ ಓದಲು ಮನಸ್ಸಿಲ್ಲ ಎಂದು. ಅವರಲ್ಲಿ “ಇಂಗ್ಲಿಷ್‌ ಸುಲಭ, ಕಷ್ಟವೇನೂ ಇಲ್ಲ’ ಎಂದು ಹೇಳುತ್ತ ಇದ್ದೆವು. ಅಷ್ಟೊತ್ತಿಗಾಗಲೇ ಸಮಯವಾಗಿತ್ತು. ನಾವಿನ್ನು ಹೊರಡುತ್ತೇವೆ ಎಂದಾಗ, “ಬೇಡ ಅಕ್ಕ ಇನ್ನೂ ಸ್ವಲ್ಪ ಹೊತ್ತು ಇರಿ’ ಎಂದಾಗ ನಮಗೆ ಕಣ್ಣು ತುಂಬಿ ಬಂತು. “ಮುಂದಿನ ವಾರ ಖಂಡಿತ ಬಂದೇ ಬರುತ್ತೇವೆ’ ಎಂದು ಮಾತು ಕೊಟ್ಟು ಅಲ್ಲಿಂದ ನಾವು ಹೊರಟೆವು. ಆದರೆ ಒಂದಂತೂ ನಿಜ. ಅವರನ್ನು ಸರಕಾರಿ ಶಾಲೆ ಮಕ್ಕಳು ಎಂದು ಕಡೆಗಣಿಸುವಂತಿಲ್ಲ. ಆ ಮಕ್ಕಳು ಇನ್ನಿತರ ಮಕ್ಕಳಿಗಿಂತಲೂ ಚುರುಕು, ಜಾಣರು ಮತ್ತು ಬುದ್ಧಿವಂತರು. ಎಲ್ಲರೊಂದಿಗೆ ಬಹಳ ಬೇಗ ಹೊಂದಿಕೊಂಡು ಎಲ್ಲರನ್ನು ಬೇಗ ಅರ್ಥಮಾಡಿಕೊಳ್ಳುವಷ್ಟು ಚಾತುರ್ಯ ಆ ಮಕ್ಕಳಲ್ಲಿತ್ತು. 

ಇಂತಹ ಮಕ್ಕಳಿಗೆ ನಮ್ಮಂಥ ಯುವ ಪೀಳಿಗೆ ಸಹಕರಿಸಿ ಅವರನ್ನು ಇನ್ನಷ್ಟು ಮೇಲೆ ತರುವಂಥ ಕೆಲಸ ಖಂಡಿತವಾಗಿಯೂ ಮಾಡಬೇಕಿದೆ. ಒಟ್ಟಿನಲ್ಲಿ ನಮ್ಮನ್ನು ನಮ್ಮ ಅಧ್ಯಾಪಕರು ಒತ್ತಾಯ ಮಾಡಿ ಕಳಿಸಿದ್ದರೂ ಆ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕಿತ್ತು ಎಂದು ಸಂತೋಷವಾಗಿತ್ತು.

– ಪಿನಾಕಿನಿ ಪಿ ಶೆಟ್ಟಿ
ತೃತೀಯ ಬಿಕಾಂ  
ಸಂತ ಆಗ್ನೇಸ್‌ ಕಾಲೇಜು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next