Advertisement

ಕಾಲೇಜು ಕ್ಯಾಂಪಸ್‌ ಎಂಬ ಪವಿತ್ರ ತಾಣ

07:22 PM Aug 08, 2019 | mahesh |

ಕಾಲೇಜು ಕ್ಯಾಂಪಸ್‌ ಅಂದಕೂಡಲೆ ನೆನಪಾಗುವಂಥಾದ್ದು ವಿದ್ಯಾರ್ಥಿ ಜೀವನ. ಆ ವಿದ್ಯಾರ್ಥಿಗಳಿಗೆ ಸುಂದರ ರೂಪ, ಆಕೃತಿಯನ್ನು ನೀಡಿ ಬೆಳೆಸಿ, ಬೆಳಗಿಸುವ ಸುಂದರ ಕಲ್ಪನೆಯ ತಾಣ. ಮಾತ್ರವಲ್ಲ , ಒಂದಿಷ್ಟು ಖುಷಿ-ತಮಾಷೆ, ಮೋಜು-ಹರಟೆ, ಆಟ-ಪಾಠ, ನೋವು-ನಲಿವುಗಳಿಗೆ ಜೀವಕಳೆಯನ್ನು ತುಂಬುವ ತಾಣ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ನೈತಿಕತೆಯೊಂದಿಗೆ, ಶಿಸ್ತುಬದ್ಧ, ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಡುವ ಮಾರ್ಗದರ್ಶಿಯೂ ಹೌದು.

Advertisement

ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಜೀವನವು ಹೂವಿನಂತೆ ಅರಳಿ ಎಂದೂ ಬಾಡದೆ ಪ್ರತಿಭಾನ್ವಿತರಾಗಿ ಸದಾ ಮುಗುಳ್ನಗುತ್ತ ಅದರ ಪರಿಮಳವು ಸದಾ ಪಸರಿಸಿ ಸಮಾಜಕ್ಕೆ ಕೀರ್ತಿಯನ್ನು ತರುವಂತಿರಬೇಕು. ಯಾಕೆಂದರೆ, ವಿದ್ಯಾರ್ಥಿ ಜೀವನವೆಂಬುದು ನಮ್ಮ ಮಹತ್ತರವಾದ ಭವಿಷ್ಯವನ್ನು ನಿರ್ಧರಿಸುವಂತಹ ಸುಸಮಯ. ಆ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳು, ಅನುಸರಿಸುವ ನೀತಿ-ನಿಯಮಗಳು, ಮಾಡುವಂತಹ ಕಾರ್ಯಗಳು ಮುಂದಿನ ಜೀವನದಲ್ಲಿ ಮುಂದೆ ನಾವು ಏನು ಎಂಬುದನ್ನು ಸಮಾಜಕ್ಕೆ ತಿಳಿಯಪಡಿಸಿ, ಸಮಾಜವು ಮುಂದೆ ನೀಡಲಾಗುವ ಸ್ಥಾನಮಾನ ಏನು ಎಂಬುದನ್ನು ಕೂಡ ತೀರ್ಮಾನಿಸುವ ಸುಸಂದರ್ಭ ಒದಗುವಂಥಾದ್ದು ಈ ಕಾಲೇಜು ಕ್ಯಾಂಪಸ್‌ಗಳಲ್ಲಿ.

ಇಂತಹ ಅತೀವ ಉನ್ನತಿಯ, ಕಲ್ಪನೆಯ ಈ ನಮ್ಮ ಕ್ಯಾಂಪಸ್‌ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಡೆ ಬದಲಾಗುತ್ತಿರುವುದು ಹಾಗೂ ಕ್ಯಾಂಪಸ್‌ಗೊಂದು ಕಳಂಕ ತರುವಂಥ ಕೆಲಸ ನಡೆಯುತ್ತಿರುವುದು ನಮ್ಮ ದುರಂತ. ಪ್ರಸ್ತುತ ದಿನಗಳಲ್ಲಿ ಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳು ತನ್ನ ಜವಾಬ್ದಾರಿಯನ್ನು ಮರೆತು ಕೆಟ್ಟ ಚಟಗಳಲ್ಲಿ ತೊಡಗಿಸಿಕೊಂಡು ಮಹಾವ್ಯಸನಕ್ಕೆ ಬಲಿಯಾಗುತ್ತಿರುವುದು ಬಹಳ ದುಃಖ ಹಾಗೂ ಆತಂಕದ ಸಂಗತಿ. ಅದಕ್ಕಿಂತಲೂ ಹೆಚ್ಚಾಗಿ, 16 ರಿಂದ 25 ವರ್ಷದ ಒಳಗಿನ ಯುವಜನರು ಮಾದಕಸೇವನೆ ಚಟಕ್ಕೆ ಒಳಗಾಗಿದ್ದಾರೆ. ಈ ಮಾದಕ ವ್ಯಸನಗಳಿಂದ ನಮ್ಮ ದೇಹಕ್ಕೆ ಕೆಡುಕೇ ಹೊರತು ಯಾವುದೇ ಒಳಿತು ಇಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯವನ್ನೇ ನಶಿಸಿ ಹಾಕುತ್ತದೆ. ಮಾದಕ ವ್ಯಸನಗಳು ಕೇವಲ ವ್ಯಕ್ತಿಯನ್ನು ಮಾತ್ರ ಹಾಳು ಮಾಡುವುದಲ್ಲ ಹೊರತಾಗಿ ತನ್ನ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ.

ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಇತರರಿಗೂ ಜಾಗೃತಿ ಮೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ, ಜೀವನದಲ್ಲಿ ಯಾವುದೇ ಕಾರಣಕ್ಕೂ ಮಾದಕವಸ್ತು ಸೇವನೆ ಮಾಡುವುದಿಲ್ಲವೆಂದು ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ದೃಢವಾದ ಸಂಕಲ್ಪ ಮಾಡಬೇಕಾಗಿದೆ.

ಜಹಫ‌ರ್‌ ಸಾಧಿಕ್‌ ತೃತೀಯ ಬಿ.ಕಾಂ.,
ಎಲ್‌.ಸಿ.ಆರ್‌. ಕಾಲೇಜು, ಕಕ್ಯಪದವು

Advertisement
Advertisement

Udayavani is now on Telegram. Click here to join our channel and stay updated with the latest news.

Next