Advertisement

ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿತ

11:53 PM Sep 28, 2019 | Lakshmi GovindaRaju |

ಬೆಂಗಳೂರು: ರಾಜಕಾರಣಿಗಳಿಗೆ ಎರಡು ಮುಖಗಳಿದ್ದು, ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿದಿದೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಭಾರತ ಯಾತ್ರಾ ಕೇಂದ್ರ ಮತ್ತು ಬಯಲು ಪರಿಷತ್‌ ಶನಿವಾರ ಗಾಂಧಿಭವನದಲ್ಲಿ ಏರ್ಪಡಿಸಿದ್ದ ರಾಜ್ಯಸಭೆ ಉಪಸಭಾಪತಿ ಹರಿವಂಶರಾಯ್‌ ಮತ್ತು ರವಿದತ್ತ ವಾಜಪೇಯಿ ಅವರು ಬರೆದಿರುವ “ಚಂದ್ರಶೇಖರ್‌ ದಿ ಲಾಸ್ಟ್‌ ಐಕಾನ್‌ ಆಫ್ ದಿ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಾದರೆ ಜನರಿಗೆ ನ್ಯಾಯ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನಾನು ಈ ರೀತಿ ಮಾತನಾಡುತ್ತಿರುವುದಕ್ಕೆ ಪಕ್ಷ ನನ್ನ ವಿರುದ್ಧ ಕ್ರಮಕೈಗೊಳ್ಳಲಿ. ಎಲ್ಲದಕ್ಕೂ ಸಿದ್ಧ ಎಂದ ಅವರು, ಪರ್ಯಾಯ ರಾಜಕೀಯ ವ್ಯವಸ್ಥೆ ತರಲು ಜನರು ತಯಾರಿದ್ದಾರೆ. ಆದರೆ, ಪಕ್ಷಗಳು ಅದಕ್ಕೆ ಸಿದ್ಧವಿಲ್ಲ ಎಂದು ದೂರಿದರು. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದ್ದು, ಒಂದು ಡಾಲರ್‌ಗೆ 73 ರೂ. ನೀಡಬೇಕಾಗಿದೆ. ಫಾರಿನ್‌ ಡೈರೆಕ್ಟ್ ಇನ್ವೆಸ್ಟ್ಮೆಂಟ್‌ ಜಾರಿಗೆ ತಂದರೆ ದೇಶಿಯ ಕೈಗಾರಿಕೊದ್ಯಮಿಗಳು ನಾಶವಾಗಲಿದ್ದಾರೆ.

ರಾಜಕಾರಣಿಗಳಿಗೆ ಸಿದ್ಧಾಂತ ಮುಖ್ಯ. ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇರುವವನು ಎಂದಿಗೂ ಪಕ್ಷ ಬದಲಿಸುವುದಿಲ್ಲ. ತಾನು ನಂಬಿರುವ ಸಿದ್ಧಾಂತದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ನೀತಿ, ಸಿದ್ಧಾಂತಗಳು ವರ್ತಮಾನ, ಭವಿಷ್ಯದ ರಾಜಕೀಯ ಬಿಕ್ಕಟ್ಟುಗಳಿಗೆ ಪರಿಹಾರ ಮಾರ್ಗಗಳಾಗಿವೆ. ಅವರು ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.

ರಾಜ್ಯಸಭೆ ಉಪಸಭಾಪತಿ ಹರಿವಂಶರಾಯ್‌ ಮಾತನಾಡಿ, ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದ ಚಂದ್ರಶೇಖರ್‌ ಅವರು, ಸ್ವಂತ ಸಾಮರ್ಥ್ಯದ ಮೇಲೆ ಬೆಳೆದು ದೇಶದ ಅತ್ಯುನ್ನತ ಸ್ಥಾನ ಏರಿದರು. ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನೇ ಇಬ್ಭಾಗ ಮಾಡುತ್ತೇನೆ ಎಂದು ಹೇಳುವ ಮೂಲಕ ಚಂದ್ರಶೇಖರ್‌ ಅವರು ದಿಟ್ಟತನ ಮೆರೆದಿದ್ದರು.

Advertisement

ಕಾರ್ಯಕ್ರಮದಲ್ಲಿ ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಸುಧೀಂದ್ರ ಬದೂರಿಯಾ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಡಿ.ವೈ.ಪಾಟೀಲ್‌, ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌, ಬಯಲು ಪರಿಷತ್‌ನ ಅಧ್ಯಕ್ಷ ವೈ.ಎಸ್‌.ದತ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನಲ್ಲಿ ಮಾತ್ರ ಭ್ರಷ್ಟರಿದ್ದಾರಾ?: ಕಾಂಗ್ರೆಸ್‌ನಲ್ಲಿ ಮಾತ್ರ ಭ್ರಷ್ಟರಿದ್ದಾರಾ? ಇದ್ದರೆ ಎಲ್ಲರನ್ನೂ ಜೈಲಿಗೆ ಹಾಕಿ. ನಿಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ. ಭ್ರಷ್ಟಾಚಾರದಲ್ಲಿ ನನ್ನ ಪಾತ್ರವಿದ್ದರೆ ನಾನು ಜೈಲಿಗೆ ಹೋಗಲು ತಯಾರಿದ್ದೇನೆ. ಇದೆಲ್ಲದಕ್ಕಿಂತ ಮೊದಲು ದೇಶದಲ್ಲಿ ಸಾವಿರಾರು ಕೋಟಿ ಮೋಸ ಮಾಡಿದವರ ಪಟ್ಟಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಲಿ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಸವಾಲು ಹಾಕಿದರು.

ಮಾಜಿ ಪ್ರಧಾನಿ ಚಂದ್ರಶೇಖರ್‌ ಅಧಿಕಾರಕ್ಕಾಗಿ ಹಾತೊರೆದವರೂ ಅಲ್ಲ. ಆದರೂ ದೇಶದ ರಾಜಕಾರಣದಲ್ಲಿ ದೊಡ್ಡ ಶಕ್ತಿಯಾಗಿದ್ದರು. ತಾವು ನಂಬಿದ ಸಿದ್ಧಾಂತ-ನೀತಿಗಳನ್ನು ಅನುಷ್ಠಾನಗೊಳಿಸಲು ಅವರಿಗೆ ದೊಡ್ಡ ಸಂಘಟನೆಯ ಬಲ ಸಿಗಲಿಲ್ಲ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಹಲವು ನಾಯಕರು ಸೈಕಲ್‌ನಲ್ಲಿ ಸುತ್ತಿ ಕಾಂಗ್ರೆಸ್‌ ಕಟ್ಟಿದ್ದಾರೆ. ಆದರೆ ಇಂದು ಪಕ್ಷ ಪತನದ ಅಂಚಿನಲ್ಲಿದ್ದು, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ಪತನವಾಗಿದೆ. ನಾಯಕರು ಮತದಾರರ ಅಭಿಪ್ರಾಯ ತಿಳಿಯದೆ ಮರ್ಸಿಡಿಸ್‌ ಕಾರಿನಲ್ಲಿ ಓಡಾಡುತ್ತಿರುವುದೇ ಈ ಸ್ಥಿತಿಗೆ ಕಾರಣ.
-ಹರಿವಂಶರಾಯ್‌, ರಾಜ್ಯಸಭೆ ಉಪಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next