ಬಂಟ್ವಾಳ: ಮುಂದಿನ 30 ತಿಂಗಳುಗಳಲ್ಲಿ ಕಡೇಶಿವಾಲಯ- ಅಜಿಲಮೊಗರು ಸಂಪರ್ಕದ ನೇತ್ರಾವತಿ ನದಿ ಸೌಹಾರ್ದ ಸೇತುವೆ ನಿಗದಿತ ಅವಧಿಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಸೋಮವಾರ ಸೌಹಾರ್ದ ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 19.84 ಕೋಟಿ ರೂ. ವೆಚ್ಚದ ಈ ಸೇತುವೆ ನದಿ ತಳಮಟ್ಟದಿಂದ 8. 50 ಮೀ. ಎತ್ತರ, 312 ಮೀ. ಉದ್ದ, 10.5 ಮೀ. ಅಗಲದ ವಿನ್ಯಾಸ, 13 ಪಿಲ್ಲರ್‌ಗಳನ್ನು ಹೊಂದಿರುವುದು. ಮಳೆಗಾಲಕ್ಕೆ ಮೊದಲು ಪಿಲ್ಲರ್ ಕಾಮಗಾರಿ ಮುಕ್ತಾಯ ಉದ್ದೇಶವನ್ನು ಗುತ್ತಿಗೆದಾರರು ಹೊಂದಿದ್ದಾರೆ ಎಂದು ರೈ ತಿಳಿಸಿದರು.
ಸೌಹಾರ್ದದ ಉದ್ದೇಶ
ನದಿ ಇಕ್ಕೆಲದ ಕಡೇಶಿವಾಲಯ ಗ್ರಾಮ ದಿಂದ ಮಣಿನಾಲ್ಕೂರು ಗ್ರಾಮ ಸಂಪರ್ಕದ ಎರಡು ಧರ್ಮಗಳ ಆಸ್ತಿಯಾಗಿ ಜಿಲ್ಲೆಯ ಸೌಹಾರ್ದದ ಉದ್ದೇಶದಿಂದ ಈ ಸೇತುವೆ ನಿರ್ಮಾಣಕ್ಕೆ 2016 ರಲ್ಲಿ ಘೋಷಣೆ ಮಾಡಿದ್ದು, 2017ರಲ್ಲಿ ಮಂಜೂರಾತಿ ಸಿಕ್ಕಿದೆ. 2018ರಲ್ಲಿ ಟೆಂಡರ್ ಆಗಿದ್ದು, ಕಾಮಗಾರಿ ನಡೆಸಲು ಸ್ವಲ್ಪ ಮಟ್ಟಿಗೆ ತಾಂತ್ರಿಕ ತೊಂದರೆಯಾಗಿತ್ತು. 2019 ರ ಮೇ ತಿಂಗಳಿನಿಂದ ಕಾಮಗಾರಿ ನಡೆಸ ಲಾಗುತ್ತಿದ್ದು, ಅವಧಿಯೊಳಗೆ ಕಾಮಗಾರಿ ಮುಗಿಸಿ ಜನರ ಸೌಲಭ್ಯಕ್ಕೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಮಳೆಗಾಲದ ಎರಡು ತಿಂಗಳು ಬಿಟ್ಟು ಮಳೆ ಕಡಿಮೆಯಾದ ಬಳಿಕ ಕೆಲಸ ಮುಂದುವರಿಸಲಾಗುತ್ತದೆ. ಪುತ್ತೂರು, ಮಾಣಿ, ವಿಟ್ಲ ಪ್ರದೇಶದವರಿಗೆ, ಅಜಿಲ ಮೊಗರು, ಮಡಂತ್ಯಾರ್, ಬೆಳ್ತಂಗಡಿ, ಧರ್ಮಸ್ಥಳ ಊರುಗಳಿಗೆ ಸಂಪರ್ಕಿಸಲು ಸುಮಾರು 20 ಕಿ.ಮೀ. ದೂರವನ್ನು ಈ ಸೇತುವೆ ನಿರ್ಮಾಣದಿಂದ ಕಡಿಮೆ ಮಾಡಿದಂತಾಗುವುದು.
ಅಜಿಲಮೊಗರು ಉರೂಸ್ ಸಂದರ್ಭದಲ್ಲಿ ಅಲ್ಲಿನ ಜನರು ಈ ಸೇತುವೆಯ ಬಗ್ಗೆ ಮನವಿ ಸಲ್ಲಿಸುತ್ತಿದ್ದರು. ಲೋಕೋಪಯೋಗಿ ಸಚಿವರಲ್ಲಿ ಮಾತುಕತೆ ನಡೆಸಿ ಅಂತಿಮವಾದ ಅನಂತರ ಇದರ ಬಗ್ಗೆ ಘೋಷಣೆ ಮಾಡಿದ್ದೆ ಎಂದು ಇದೇ ಸಂದರ್ಭ ಅವರು ಪ್ರಸ್ತಾವಿಸಿದರು.
ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ಮಣಿನಾಲ್ಕೂರು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಆಲಿ, ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಪ್ರಶಾಂತ್ ಕುಲಾಲ್, ಈಶ್ವರ ಪೂಜಾರಿ ಹಿರ್ತಡ್ಕ, ಚೆನ್ನೈಎಸ್‌ವಿಎಲ್ ಕನ್ಸ್‌ಸ್ಟ್ರಕ್ಷನ್ ಗುತ್ತಿಗೆ ಕಂಪೆನಿಯ ರಾಘವನ್, ಎಂಜಿನಿಯರ್ ಮಂಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಗಳ ಕಡೆಗೆ ಹೆಚ್ಚಿನ ಗಮನ
ನಾನು ಶಾಸಕ, ಸಚಿವನಾಗಿ ಪ್ರಸ್ತಾವಿಸಿ, ಮಂಜೂರಾದ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಿ ಜನರ ಉಪಯೋಗಕ್ಕೆ ದೊರೆಯುವ ತನಕ ಅದರ ಕೆಲಸ ಮಾಡುತ್ತೇನೆ. ನನ್ನ ಕನಸಿನ ಯೋಜನೆಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು, ಪಶ್ಚಿಮವಾಹಿನಿ ಯೋಜನೆ ಅಂತಿಮ ಹಂತಕ್ಕೆ ಬರಬೇಕಾಗಿದೆ.
-ಬಿ. ರಮಾನಾಥ ರೈ, ಮಾಜಿ ಸಚಿವರು