Advertisement

ಕ್ವಾನ್ವಾಸ್‌ಗಳಲ್ಲಿ ಅರಳಿದ ಕರಾವಳಿಯ ಸಂಸ್ಕೃತಿ 

06:00 AM Apr 13, 2018 | |

ಕರುನಾಡಿನ ನೆಲ ಮತ್ತು ಸಂಸ್ಕೃತಿಯ ಸೊಬಗಿಗೆ ಸೊಡರು ಕಟ್ಟಿ ಬಣ್ಣದ ಸೊಗಸು ಚೆಲ್ಲಿ ಕೃತಿಗಳ ತೋರಣ ಕಟ್ಟಿದವರು ಮಂಗಳೂರಿನ ಚಿತ್ರಕಲಾ ಚಾವಡಿಯ ಕಲಾವಿದರು. ಕರುನಾಡಿನ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಣ್ಣಗಳಲ್ಲಿ ಬರೆದು ಅದರೊಳಗಿನ ಹೊನ್ನಿನ ಬೆಳಕನ್ನು ಅರಸಿ ಹೊಂಬೆಳಕು ಎಂಬ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ಪ್ರದರ್ಶಿಸಿದರು.ರಾಜ್ಯದ ಸಂಸ್ಕೃತಿ ಬಗ್ಗೆ ಕಲಾಕೃತಿಗಳಿದ್ದರೂ ಕರಾವಳಿಯ ವಸ್ತು ವಿಚಾರಗಳೇ ಹೆಚ್ಚಿನ ಕೃತಿಗಳಿಗೆ ವಸ್ತುವಾಗಿತ್ತು. 

Advertisement

 ಕರಾವಳಿಯ ಹಿನ್ನಲೆಯು ವಿಶೇಷವಾಗಿರುವುದರಿಂದ ಇಲ್ಲಿನ ಧಾರ್ಮಿಕ ಹಾಗೂ ಪ್ರಾಕೃತಿಕ ವಸ್ತು ವಿಷಯಗಳು ಕಲಾಕೃತಿಗೆ ಹೆಚ್ಚು ಪೂರಕವಾಗಿದ್ದುದರಿಂದ ಅವುಗಳೇ ಈ ಪ್ರದರ್ಶನದಲ್ಲಿ ಒಪ್ಪ ಓರಣವಾದ ತೋರಣವಾಗಿತ್ತು. 23 ಕಲಾವಿದರು ಬಣ್ಣದ ಬೆಳಕನ್ನು ಪಸರಿಸಿ ನಾಡಿನ ಸಂಸ್ಕೃತಿಯ ಬೆಡಗನ್ನು ಚಿತ್ರಿಸಿ ಹೊಂಬೆಳಕಿನ ಯಶಸ್ಸಿನ ಪಾತ್ರಧಾರಿಗಳಾಗಿದ್ದು ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವಕ್ಕೆ ಸಾರ್ಥಕರಾಗಿದ್ದರು. ಶುಭ ಸಮಾರಂಭಗಳಿಗೆ ಆರಂಭದಲ್ಲಿ ಗಣಪತಿ ಶ್ಲೋಕವೊಂದು ಇರುವ ಪದ್ಧತಿಯಂತೆ ಪೆರ್ಮುದೆ ಮೋಹನ್‌ ಕುಮಾರ್‌ರವರ ಗಣಪತಿ ಮತ್ತು ಜಾಗಟೆಯಿಂದ ಈ ಕಲಾಪ್ರರ್ಶನ ಆರಂಭವಾಗುತ್ತದೆ. ಮುಂದೆ ವಿಷ್ಣು ಶೇವಗೂರ್‌ರವರು ಮತ್ತು ಸುಧೀರ್‌ ಕಾವೂರ್‌ರವರು ವೀಕ್ಷಕರನ್ನು ನಾಗಬನದ ಒಳ ಹೊಕ್ಕಿಸುತ್ತಾರೆ. ಇನ್ನೂ ಮುಂದುವರಿದಾಗ ಗಣೇಶ್‌ ಸೋಮಯಾಜಿಯವರು ಕಂಬಳವನ್ನು ತೋರಿಸುತ್ತಾರೆ. ಕಮಾಲ್‌ರವರು ತುಳುನಾಡಿನ ಕೋಳಿ ಅಂಕವನ್ನು ಪ್ರದರ್ಶಿಸಿದರೆ ರಚನಾ ಸೂರಜ್‌, ನವೀನ್‌ ಬಂಗೇರ, ಈರಣ್ಣ ತಿಪ್ಪಣ್ಣನವರು ಯಕ್ಷಗಾನದ ಮೆರುಗನ್ನು ತಿಳಿಸುತ್ತಾರೆ. ಮುರಳೀಧರ್‌ರವರು ಭೂತಾರಾಧನೆಯನ್ನು, ಸಪ್ನಾ ನೊರೋನ್ಹರವರು ಬಾಹುಬಲಿಯನ್ನು, ತಾರಾನಾಥ ಕೈರಂಗಳರವರು ಜಲಪಾತವನ್ನು, ಅನಂತ ಪದ್ಮನಾಭ ಮತ್ತು ಶರತ್‌ ಹೊಳ್ಳ ಮೀನುಗಾರ ಮಹಿಳೆಯರನ್ನು, ಸತೀಶ್‌ ರಾವ್‌, ಸುಲ್ತಾನ್‌ ಬತ್ತೇರಿಯನ್ನು, ಜಯಶ್ರೀಯವರು ಬತ್ತ ಕುಟ್ಟುವ ಮಹಿಳೆಯರನ್ನು, ಪಾಂಡುರಂಗ ರಾವ್‌ ಚೆಂಡೆವಾದನವನ್ನು, ಜಾನ್‌ ಚಂದ್ರನ್‌ರವರು ದೃಷ್ಟಿ ಸೂಚಕ ಸಂಪ್ರದಾಯವನ್ನು, ಪುನೀತ್‌ ಶೆಟ್ಟಿಯವರು ಕೃಷ್ಣನನ್ನು, ಸಂತೋಷ್‌ ಅಂದ್ರಾದೆಯವರು ತುಳುನಾಡಿನ ಸಾಂಪ್ರದಾಯಿಕ ಗುತ್ತಿನ ಮನೆಯನ್ನು, ಪೂರ್ಣೇಶ್‌ರವರು ತುಳುನಾಡಿನ ದೈವದ ಗಗ್ಗರವನ್ನು ಪ್ರದರ್ಶಿಸಿ ಈ ಹೊಂಬೆಳಕಿನ ತಳುಕಿನಲ್ಲಿ ಇಡೀ ತುಳುನಾಡಿನ ಸಾರ್ವಕಾಲಿಕ ಸಂಸ್ಕೃತಿಯನ್ನು ಬಣ್ಣಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಒಟ್ಟಾರೆ ಈ ಕಲಾಕೃತಿಗಳ ವರ್ಣ ಪಥದಲ್ಲೇ ಸಾಗಿದಾಗ ಕರಾವಳಿ-ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಏತ್‌ ಪೊರ್ಲುದ ತುಳುನಾಡು? ಎಂಬ ಮಾತನ್ನು ಬರಿಸುವುದರೊಂದಿಗೆ ಚಾವಡಿಯ ಕಲಾವಿದರು ಸಮರ್ಥರಾಗಿದ್ದರು. ಈ ಹೊಂಬೆಳಕಿಗೆ ವಿಶೇಷ ಪ್ರಖರತೆಯ ಶೋಭೆಯನ್ನು ನೀಡಿದವರು ದ್ಘಾಟನೆ ನೆರವೇರಿಸಿದ ಮಂಗಳೂರಿನ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್‌ರವರು. 
 
ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next