Advertisement

ಕರಾವಳಿಗೆ ಬಂದಿವೆ 900 ಕೆ.ಜಿ. ತೂಕದ ಎತ್ತುಗಳು!

10:33 AM Oct 26, 2017 | |

ಮಂಗಳೂರು: ಒಂಬತ್ತು ಕ್ವಿಂಟಾಲ್‌ ತೂಕ; ಒಂಬತ್ತು ಅಡಿಯಷ್ಟು ಎತ್ತರ; ಊಹಿಸುವುದಕ್ಕೂ ಅಸಾಧ್ಯವಾದ ಉದ್ದದ ಕೊಂಬು! ಇದು ಆನೆಯ ವರ್ಣನೆಯಲ್ಲ. ಬದಲಿಗೆ ಸದ್ಯ ಮಂಗಳೂರು ನಗರದ ಕುಡುಪು ಬಳಿಯಿರುವ ಇಸ್ಕಾನ್‌ ಮಂದಿರದಲ್ಲಿ  ಬೀಡು ಬಿಟ್ಟಿರುವ ಗುಜರಾತ್‌, ರಾಜಸ್ಥಾನ ದಲ್ಲಿ ಕಾಣ ಸಿಗುವ ಗಜ ಗಾತ್ರದ ಎತ್ತುಗಳು. ಈ ಬೃಹತ್‌ ಗಾತ್ರದ  ಐದು ಎತ್ತುಗಳನ್ನು ನೋಡಲು, ಅವುಗಳೊಂದಿಗೆ ಸೆಲ್ಫಿ ತೆಗೆಸಿ ಕೊಂಡು ಖುಷಿಪಡುವುದಕ್ಕೆ ಸ್ಥಳೀಯರು ಮುಗಿ ಬೀಳುತ್ತಿದ್ದಾರೆ.

Advertisement

ಇಸ್ಕಾನ್‌ನವರು ತಮ್ಮ ಪಾದಯಾತ್ರೆ ಕಾರ್ಯಕ್ರಮದಡಿ ಕಾಂಕ್ರೇಜ್‌ ತಳಿಯ ಭಾರೀ ಗಾತ್ರದ ಎತ್ತುಗಳನ್ನು ಕರೆತಂದಿದ್ದು, ಪ್ರತಿಯೊಂದು 800ಕ್ಕೂ ಹೆಚ್ಚು ಕೇಜಿ ಭಾರವಿದೆ. ದೊಡ್ಡ ಗಾತ್ರ ಹಾಗೂ ಅಷ್ಟೇ ದಷ್ಟ- ಪುಷ್ಟವಾದ ದೇಹ ಹೊಂದಿರುವುದರಿಂದ ಜನಾಕರ್ಷಣೆಯ ಕೇಂದ್ರವಾಗಿದೆ.  ನವೆಂಬರ್‌ 8ರ ವರೆಗೆ ಅವು ಮಂದಿರದಲ್ಲಿ ಸಾರ್ವಜನಿಕರಿಗೆ ನೋಡುವುದಕ್ಕೆ ಸಿಗಲಿವೆ.

ರಾಷ್ಟ್ರವ್ಯಾಪಿ ಪಾದಯಾತ್ರೆ
ಮುಂಬಯಿನ ಇಸ್ಕಾನ್‌ ಸಂಸ್ಥೆಯು ತನ್ನ ಧರ್ಮ ಪ್ರಚಾರ, ಹರಿನಾಮದ ಮಹತ್ವ ಸಾರಲೆಂದು ಲೋಕ ನಾಥ್‌ ಮಹಾರಾಜ್‌ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪಾದ ಯಾತ್ರೆಯನ್ನು ಹಲವು ವರ್ಷಗಳಿಂದ ಕೈಗೊಂಡಿದೆ. ಈ ವೇಳೆ ಮಹಾರಾಜ್‌ ಅವರೊಡನೆ ಎತ್ತುಗಳು ಕೂಡ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸುತ್ತುತ್ತಿರುತ್ತ¤ವೆ. ವಿಶೇಷ ಅಂದರೆ ಗಜಗಾತ್ರದ ಎತ್ತುಗಳ ಈ ದೇಶ ಪರ್ಯಟನೆ ಒಂದು ಸ್ಥಳದಿಂದ ಪ್ರಾರಂಭಗೊಂಡು ಮತ್ತೆ ಅದೇ ಸ್ಥಳಕ್ಕೆ ತಲುಪುವುದಕ್ಕೆ ಬರೋಬ್ಬರಿ ಹತ್ತು ವರ್ಷ ತೆಗೆದುಕೊಳ್ಳುತ್ತದೆ. ಅದರಂತೆ ಈ ರೀತಿಯ  ಮತ್ತೂಂದು ದೇಶ ಪರ್ಯಟನೆಯು ಗುಜರಾತ್‌ ರಾಜ್ಯದಿಂದ ಪ್ರಾರಂಭಗೊಂಡು, ಕೇರಳ ಮೂಲಕ ಇದೀಗ ಮಂಗಳೂರು ನಗರಕ್ಕೆ ಬಂದು ನಿಂತಿದೆ. ಸಾಮಾನ್ಯವಾಗಿ ಈ ಪಾದಯಾತ್ರೆಯ ಎತ್ತುಗಳು ಒಂದು ಊರಿನಲ್ಲಿ ಕನಿಷ್ಠ ಒಂದೇ ದಿನವಿದ್ದು, ಮುಂದೆ ಸಾಗುತ್ತಿರುತ್ತವೆ. ಆದರೆ ಸದ್ಯ ಕಾರ್ತಿಕ ಮಾಸವಾದ್ದರಿಂದ ಲೋಕನಾಥ್‌ ಮಹಾರಾಜ್‌ ಅವರು ಮಥುರಾಕ್ಕೆ ಪಾದಯಾತ್ರೆಗೆಂದು ತೆರಳಿದ್ದಾರೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಎತ್ತುಗಳು ಮಂಗಳೂರಿನ ಬಳಿಯ ಕುಡುಪುವಿನ ಇಸ್ಕಾನ್‌ ಮಂದಿರದ ಆವರಣದಲ್ಲೇ ಬೀಡುಬಿಟ್ಟಿದ್ದು, ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುತ್ತಿದೆ.

32 ವರ್ಷದಿಂದ ಪಾದಯಾತ್ರೆ
ಇಸ್ಕಾನ್‌ ವತಿಯಿಂದ ಹಮ್ಮಿಕೊಂಡಂತಹ ಪಾದ ಯಾತ್ರೆಗೆ 32 ವರ್ಷ ತುಂಬಿದೆ. ಅಂದಿನ ಮಹಾರಾಜ ಪ್ರಭುಪಾಲ್‌ ಅವರು ದೇಹತ್ಯಾಗ ಮಾಡುವ ವೇಳೆಯಲ್ಲಿ ಭಕ್ತಿ ಹರಿನಾಮ, ಭಗವದ್ಗೀತೆಯ ಸಾರ ಸೇರಿದಂತೆ ಇಡೀ ದೇಶಾದ್ಯಂತ ಸಾರಿ ಧರ್ಮ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದ್ದರು. ಅವರ ಆಶಯದಂತೆ ಲೋಕನಾಥ್‌ ಮಹಾರಾಜ್‌ ಅವರು ದೇಶಾದ್ಯಂತ ಪಾದಯಾತ್ರೆಯ ಮೂಲಕ ಸಂದೇಶ ಸಾರುತ್ತಿದ್ದಾರೆ. ಯಾತ್ರೆ ಪ್ರಾರಂಭವಾದ ಸ್ಥಳ ದಿಂದ ಇಡೀ ಭಾರತ ಸುತ್ತಲು 10 ವರ್ಷ ತಗಲುತ್ತದೆ. ಈ ವೇಳೆ ಎತ್ತುಗಳಿಗೆ ಕೆಲ ಮಠ, ಮಂದಿರಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ.

ಮುಂದಿನ ಪಯಣ ಉಡುಪಿಯತ್ತ
ಈ ಐದೂ ಎತ್ತುಗಳು ನ. 8ರಿಂದ ಮಂಗಳೂರಿನಿಂದ ಉಡುಪಿಯತ್ತ ಪಾದಯಾತ್ರೆ ಬೆಳೆಸಲಿವೆ. ಉಡುಪಿಯಲ್ಲಿ ಕೇವಲ ಒಂದು ದಿನ ವಿರಮಿಸಿ, ಕುಂದಾಪುರ, ಮೈಸೂರು ಅನಂತರ ಬೆಂಗಳೂರಿಗೆ ತೆರಳಲಿವೆ. ಈ ವೇಳೆಗಾಗಲೇ ಕರ್ನಾಟಕದಲ್ಲಿ ಪಾದಯಾತ್ರೆ ಪೂರ್ಣಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಪಾದಯಾತ್ರೆ ನಡೆಸಲಿವೆ. ಕರಾವಳಿಗೆ ಈ ಎತ್ತುಗಳು ಆಗಮಿಸುತ್ತಿರುವುದು ಇದೇ ಮೊದಲ ಬಾರಿ. ಕಳೆದ 10 ವರ್ಷಗಳ ಹಿಂದೆ ಕರ್ನಾಟಕ ಪಾದಯಾತ್ರೆ ಸಮಯದಲ್ಲಿ ಬೆಂಗಳೂರು ಮಾರ್ಗವಾಗಿ ಬೇರೆ ರಾಜ್ಯಕ್ಕೆ ತೆರಳಿತ್ತು.

Advertisement

ಎತ್ತುಗಳ ತೂಕ ಕೇಳಿದ್ರೆ ಶಾಕ್‌ ಆಗ್ತಿರ!
ಈ ಐದೂ ಎತ್ತು ಗಳ ತೂಕ ಕೇಳಿದರೆ ಶಾಕ್‌ ಆಗು ವುದು ಖಂಡಿತ. ಏಕೆಂದರೆ, ನಂದ ಕಿಶೋರ್‌ ಎನ್ನುವ 8 ವರ್ಷದ ಎತ್ತು ಬರೋಬ್ಬರಿ  900 ಕೆ.ಜಿ. ತೂಕ ಹೊಂದಿದ್ದು, ನರಸಿಂಹ ಎನ್ನುವ 12 ವರ್ಷದ ಇನ್ನೊಂದು ಎತ್ತು ಕೂಡ 800 ಕೆ.ಜಿ.ಯಿದೆ. ಕಾಲಿಯಾ ಮತ್ತು ಜಯ್‌ಹೆಸರಿನ 7 ವರ್ಷದ ಎರಡು ಎತ್ತುಗಳು ಕೂಡ ಕ್ರಮವಾಗಿ 700 ಕೆ.ಜಿ. ಯಷ್ಟು ತೂಕ ವಿದೆ. ಅಲ್ಲದೆ ಕೊನೆಯ ಕೃಷ್ಣ ಎನ್ನುವ 4 ವರ್ಷದ ಎತ್ತು ಕೂಡ 500 ಕೆ.ಜಿ. ತೂಕವನ್ನು ಹೊಂದಿದೆ ಎನ್ನು ವುದೇ ಆಶ್ಚರ್ಯದ ಸಂಗತಿ. 

ಈ ಎತ್ತುಗಳ ಆರೈಕೆಗೆ ಪ್ರತ್ಯೇಕ ಪರಿಚಾರಕರಿದ್ದು, ದಿನದಲ್ಲಿ ಮಿತವಾಗಿ ಆಹಾರ ನೀಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 7 ಗಂಟೆ, 10 ಗಂಟೆ ಮತ್ತು ಮಧ್ಯಾಹ್ನ 12 ಗಂಟೆಗೆ ಒಂದೊಂದು ಎತ್ತಿಗೂ 6 ಕೆ.ಜಿ. ಹುಲ್ಲು ನೀಡಲಾಗುತ್ತದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ 6 ಕೆ.ಜಿ. ಬೂಸ ಎತ್ತುಗಳ ದಿನನಿತ್ಯದ ಆಹಾರವಾಗಿ ನೀಡಲಾಗುತ್ತಿದೆ. 

ಈ ಐದು ಎತ್ತುಗಳ ಜತೆಗೆ ಪಾದಯಾತ್ರೆ ಮೂಲಕ ದೇಶ ಪರ್ಯಟನೆಯೊಂದಿಗೆ ಧರ್ಮ ಜಾಗೃತಿ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ವಿಶೇಷ ಹಾಗೂ ಅಪರೂಪದ ಎತ್ತುಗಳು ನ. 8ರ ವರೆಗೆ ಬೀಡುಬಿಟ್ಟಿದ್ದು, ಆ ನಂತರ, ಪಾದಯಾತ್ರೆ ರಥವು ಉಡುಪಿಗೆ ತೆರಳಿ ಅಲ್ಲಿಂದ ಕರಾವಳಿ ಹಾಗೂ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಮುಂದೆ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಲಿದೆ. ಪ್ರತಿದಿನ ಕೂಡ ಈ ಎತ್ತುಗಳು ಕನಿಷ್ಠ ಸುಮಾರು 10 ಕಿ.ಮೀ. ದೂರವನ್ನು ನಡಿಗೆಯಲ್ಲಿ ಕ್ರಮಿಸುತ್ತವೆ. ರಾತ್ರಿ ವಿಶ್ರಾಂತಿ ಪಡೆದು ಮರುದಿನ ಪಾದಯಾತ್ರೆ ಮುಂದುವರಿಸುತ್ತವೆ.
ಸ್ಮಿತಾ ಕೃಷ್ಣದಾಸ್‌, ಉಪಾಧ್ಯಕ್ಷ, ಇಸ್ಕಾನ್‌ ಕುಡುಪು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next