ಹುಬ್ಬಳ್ಳಿ: ಕರ್ನಾಟಕ ಸಮ್ಮಿಶ್ರ ಸರ್ಕಾರದ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೇಗೌಡರ ನಿರ್ಣಯದ ಮೇಲಿದೆ. ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ ರಾಜಕೀಯ ಪ್ರೇರಿತ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದರು.
ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಮೇಶ ಜಾರಕಿಹೊಳಿ ಈಗಲೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರು ನಮ್ಮ ಪಕ್ಷದಲ್ಲೇ ಇರ್ತಾರೆ ಬೇರೆ ಎಲ್ಲಿಯೂ ಹೋಗಲ್ಲ. ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಬಿಕೆ, ಮೋದಿ ಕೈಗೊಂಡ ಯೋಜನೆಗಳೆಲ್ಲ ಫೇಕ್ ಆಗಿವೆ. ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ವೇಳೆ ಮೋಡದ ವಿಜ್ಞಾನಿ ಆಗಿದ್ದರು. ಮೇ 23ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇರೆಯದ್ದೇ ಹೆಸರು ಬರಲಿದೆ ಎಂದು ಹೇಳಿದರು.
ಐಟಿ, ಸಿಬಿಐನಂತಹ ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಎನ್ ಡಿಎ ಆಗಿದೆ. ಐಟಿ ಮತ್ತು ಇಡಿಯನ್ನು ಕೇಂದ್ರವು ರಾಜಕೀಯ ದಾಳಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಇರುವ ಹೋಟೆಲ್‌ಗಳ ಮೇಲೆ ದಾಳಿ ಮಾಡಿಸುತ್ತಿದೆ. ಈ ದುರುಪಯೋಗಗಳ ಕುರಿತು ಮೇ 23ರ ನಂತರ ಪಕ್ಷದಿಂದ ತನಿಖೆ ನಡೆಸಲಾಗುವುದು ಎಂದರು.