Advertisement

ಸಮ್ಮಿಶ್ರ ಸರಕಾರ ಸ್ಥಿರ: ಪರಮೇಶ್ವರ್‌

06:00 AM Sep 23, 2018 | |

ಕಾರವಾರ: ಪ್ರಸಿದ್ಧ ಶಕ್ತಿದೇವತೆ ಸಾತೇರಿ ದೇವಿ ದರ್ಶನಕ್ಕೆ ಬಂದಿದ್ದೇನೆ. ಸರ್ಕಾರ ಉಳಿಸಿ ಎಂದು ಪ್ರಾರ್ಥಿಸಲು ಅಲ್ಲ. ಸರ್ಕಾರ ಸ್ಥಿರವಾಗಿದೆ. ಇದು ನನ್ನ ಖಾಸಗಿ ಭೇಟಿ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದರು.

Advertisement

ಕಾರವಾರ ತಾಲೂಕಿನ ಹಣಕೋಣ ಸಮೀಪದ ಸಾತೇರಿ ದೇವಿ ದರ್ಶನಕ್ಕೆ ತೆರಳುವ ಮುನ್ನ ಕಾರವಾರ-ಗೋವಾ ಗಡಿಯಲ್ಲಿ ಮಾಜಾಳಿ ಚೆಕ್‌ಪೋಸ್ಟ್‌ ಬಳಿ ಸುದ್ದಿಗಾರರ ಜತೆ ಮಾತನಾಡಿ, ಸಾತೇರಿ ದೇವಿ ಶಕ್ತಿ ದೇವತೆ ಎಂದು ನಮ್ಮ ಪಕ್ಷದವರು ಹೇಳುತ್ತಿದ್ದರು. ಅದಕ್ಕಾಗಿ ಆಶೀರ್ವಾದ ಪಡೆಯಲು ಬಂದಿರುವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಶೃಂಗೇರಿ ಹೋದದ್ದಕ್ಕೂ, ನಾನು ಇಲ್ಲಿ ಬಂದದ್ದಕ್ಕೂ ಸಂಬಂಧವಿಲ್ಲ. ಸರ್ಕಾರದ ಸ್ಥಿರತೆಗೆ ಹರಕೆ ಮಾಡಿಕೊಳ್ಳಲು ಬಂದಿಲ್ಲ. ಸಾತೇರಿಯಲ್ಲಿ ಪ್ರಾರ್ಥಿಸಲು ಬಂದಿರುವೆ ಎಂದರು.

ನಮ್ಮ ಪಕ್ಷದ ಶಾಸಕರು, ಜೆಡಿಎಸ್‌ ಶಾಸಕರು ಸ್ಥಿರವಾಗಿದ್ದಾರೆ. ಅವರು ಮುಂಬೈಗೆ ಹೋಗಿದ್ದರೆ ಅದು ಸ್ವಂತ ಕೆಲಸದ ಮೇಲೆ. ಎಲ್ಲದಕ್ಕೂ ಕತೆ ಕಟ್ಟುವುದು ಸರಿಯಲ್ಲ. ಸರ್ಕಾರವನ್ನು ಯಡಿಯೂರಪ್ಪ ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅದರಲ್ಲಿ ಅವರು ಯಶಸ್ಸು ಪಡೆಯುವುದಿಲ್ಲ. ಶಾಸಕರಿಗೆ ಆಮಿಷ ಒಡ್ಡುವ ಮಟ್ಟಕ್ಕೆ ಬಿಜೆಪಿ ಇಳಿದಿದೆ ಎಂದು ಆರೋಪಿಸಿದರು.ನಿರಂತರವಾಗಿ ಬಿಜೆಪಿ ನಮ್ಮ ಸರ್ಕಾರಕ್ಕೆ ಕಿರುಕುಳ ಕೊಡುತ್ತಿದೆ. 

ಕುಮಾರಸ್ವಾಮಿಯನ್ನು ಅಸ್ಥಿರ ಮಾಡಲು ಯತ್ನಿಸುತ್ತಿದೆ. ಆ ಸಿಟ್ಟಿನಲ್ಲಿ ಜನ ದಂಗೆ ಏಳುತ್ತಾರೆ ಎಂದಿದ್ದಾರೆ. ಎಲ್ಲವನ್ನೂ ಅಕ್ಷರಶಃ ಅರ್ಥೈಸಬಾರದು. ಭಾವೋದ್ವೇಗದಲ್ಲಿ ಹೇಳಿದ ಮಾತಿಗೆ ಏನೇನೋ ಕಲ್ಪಿಸಿಕೊಳ್ಳುವುದು ಸರಿಯಲ್ಲ. ದೇಶಪಾಂಡೆ ಹಿರಿಯರು, ಸಚಿವರಾಗಿದ್ದಾರೆ. ಹಾಗೆಯೇ ಶಿವರಾಮ ಹೆಬ್ಟಾರ ಸರದಿ ಬರಲಿದೆ. ಅವರು ಕಾಯಬೇಕು. ಕಾಂಗ್ರೆಸ್‌ನಲ್ಲಿ ಮಾತ್ರ ಎಲ್ಲರಿಗೂ ಅವಕಾಶ ಸಿಗಲು ಸಾಧ್ಯ. ಎಲ್ಲರಿಗೂ ಸಮಾನ ಅವಕಾಶ ಕಾಂಗ್ರೆಸ್‌ ಪಕ್ಷದಲ್ಲಿದೆ ಎಂದರು.

ಮೂಗುತಿ ಪಡೆದ ಪರಮೇಶ್ವರ
ಹಣಕೋಣದ ಸಾತೇರಿ ದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಅವರು ದೇವರಿಗೆ ಬಂದ ಕಾಣಿಕೆಗಳ ಹರಕೆಯ ಸಂಪ್ರದಾಯದಲ್ಲಿ ಭಾಗಿಯಾದರು. ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ಸಂಪ್ರದಾಯದ ಸಾತೇರಿ ದೇವಿಯ ಜಾತ್ರೆಯಲ್ಲಿ ದೇವಿಗೆ ಹರಕೆ ರೂಪದಲ್ಲಿ ಬಂದ ಬಂಗಾರದ ಆಭರಣ ಮತ್ತು ಸೀರೆಯನ್ನು ಭಕ್ತರಿಗೆ ಹರಾಜು ಹಾಕುವ ಪದ್ಧತಿ ಇದೆ. ಹರಾಜು ಕ್ರಿಯೆಯನ್ನು ಗಮನಿಸಿದ ಉಪ ಮುಖ್ಯಮಂತ್ರಿಗಳು ತಾವೂ ದೇವಿಗೆ ಹರಕೆ ರೂಪದಲ್ಲಿ ಬಂದಿದ್ದ ಮೂಗುತಿ ಖರೀದಿಸಿದರು. 15,101 ರೂ.ಗಳಿಗೆ ಮೂಗುತಿ ಪರಮೇಶ್ವರ ಕೈಗೆ ಬಂತು. ಅದನ್ನು ಅವರು ಭಕ್ತಿಯಿಂದ ಸ್ವೀಕರಿಸಿದರು.

Advertisement

ಸಾತೇರಿ ದೇವಿಗೆ ಇದೇ ವೇಳೆ ಅವರು ಹರಕೆ ಹೊತ್ತಿದ್ದು, ಆ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ. ಸರ್ಕಾರದ ರಕ್ಷಣೆಯ ಬೇಡಿಕೆಯನ್ನು ಸಾತೇರಿ ದೇವಿಯಲ್ಲಿ ಕೋರಲಾಗಿದೆ. ದೇವಿಯಲ್ಲಿ ಹೊತ್ತ ಹರಕೆ ಇದುವರೆಗೆ ಸುಳ್ಳಾಗಿಲ್ಲ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ಸರ್ಕಾರದ ರಕ್ಷಣೆಗಾಗಿಯೇ ಡಿಸಿಎಂ ಅವರನ್ನು ಸಾತೇರಿ ದೇವಿಯ ದರ್ಶನಕ್ಕೆ ಕರೆಸಿದ್ದೆವು ಎಂದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next