ಬಾಗಲಕೋಟೆ/ಹುಬ್ಬಳ್ಳಿ: ಯೂರೋಪ್‌ನಿಂದ ನಾನು ಮರಳುವುದರೊಳಗೆ ರಾಜ್ಯ ಸಮ್ಮಿಶ್ರ ಸರಕಾರ ಬದಲಾಗುತ್ತದೆ ಎಂಬುದು ಬಿಜೆಪಿಯ ಗುಲ್ಲು. ಸರಕಾರ ಸುಭದ್ರವಾಗಿದ್ದು, ಬಿಜೆಪಿಯವರು ಅಧಿಕಾರದ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನ ಆಶೀರ್ವಾದ ಮಾಡಿದರೆ ಮುಂದೆ ನಾನು ಸಿಎಂ ಆಗುತ್ತೇನೆಂದು ಹೇಳಿದ್ದೇನೆಯೇ ಹೊರತು, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲಾದರೂ ಹೇಳಿದ್ದೇನಾ? ಹೊಳೆನರಸಿಪುರದಲ್ಲಿನ ಕಾರ್ಯಕ್ರಮದಲ್ಲಿ ಜನರು ಮನವಿ ಸಲ್ಲಿಸಿ, ಇವನ್ನೆಲ್ಲ ಈಡೇರಿಸಬೇಕೆಂದು ಹೇಳಿದಾಗ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಮಾಡುವೆ ಎಂದಿದ್ದೆ. ಅವರು ನೀವೇ ಅವನ್ನೆಲ್ಲ ಮಾಡಬೇಕೆಂದು ಕೋರಿದಾಗ ಜನ ಆಶೀರ್ವಾದ ಮಾಡಬೇಕೆಂದು ಹೇಳಿದ್ದೆ. ಅದನ್ನೇ ಕೆಲವರು ಅಪಾರ್ಥ ಮಾಡಿಕೊಂಡು ನಾನೇ ಸಿಎಂ ಆಗುತ್ತೇನೆಂದು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರಕಾರದ ಸಾಧನೆಯ ಕೀರ್ತಿ ಎರಡೂ ಪಕ್ಷಗಳಿಗೆ ಸಲ್ಲುತ್ತದೆ. ಕಾಂಗ್ರೆಸ್‌ನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಈ ಸರಕಾರದಲ್ಲಿ ಕಾಂಗ್ರೆಸ್‌ನ ಸಚಿವರಿದ್ದಾರೆ. ಕಾಂಗ್ರೆಸ್‌ನವರು ಆಡಳಿತ ನಡೆಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ ಎಂಬುದು ಸುಳ್ಳು. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆಂಬುದೂ ಶುದ್ಧ ಸುಳ್ಳು ಎಂದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಸಂಸ್ಕೃತಿ, ಸಂಸ್ಕಾರ ಇಲ್ಲ. ಅವರಿಗೆ ಮನುಷ್ಯತ್ವ ಎಂಬುದೂ ಇಲ್ಲ. ಇಂತಹವರನ್ನು ಸಂಪುಟದಲ್ಲಿ ಇಟ್ಟುಕೊಂಡ ಮೋದಿಗೂ ಮಾನ, ಮರ್ಯಾದೆ ಇಲ್ಲ. ಹೆಗಡೆ ಒಬ್ಬ ಮಾನಸಿಕ ಅಸ್ವಸ್ಥ. ಅವರು ನನ್ನ ಪ್ರಕಾರ ಮನುಷ್ಯನೇ ಅಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ