Advertisement

ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಾಗಲು ಬಿಡಲ್ಲ

06:55 AM Sep 24, 2018 | Team Udayavani |

ಹಾಸನ: ಸಮ್ಮಿಶ್ರ ಸರ್ಕಾರ ಉಳಿಸುವ ಜವಾಬ್ದಾರಿ ನನಗೂ ಹಾಗೂ ಸಿದ್ದರಾಮಯ್ಯ ಅವರಿಗೂ ಇದೆ. ಆದ್ದರಿಂದ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಿಲ್ಲ. ಅಪಾಯ ಎದುರಾಗಲು ಬಿಡುವುದೂ ಇಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ನಗರದ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ನಾನು ಒಂದು ಕಾಲದ ಸ್ನೇಹಿತರು. ನಮಗಿಬ್ಬರಿಗೂ ಜವಾಬ್ದಾರಿಯಿದೆ. ಉಸಿರಿರುವವರೆಗೂ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇನ್ನಾದರೂ ರಾಜಕೀಯ ಅಸ್ಥಿರತೆ ಸೃಷ್ಟಿಸುವುದು ಬೇಡ ಎಂದು ಬಿಜೆಪಿ ಮುಖಂಡರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವುದು ಅಷ್ಟು ಸುಲಭವಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರೂ ಕುಮಾರಸ್ವಾಮಿ ನೇತೃತ್ವದ  ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಆ ಸರ್ಕಾರದ ಜತೆ ಕೈಜೋಡಿಸಿ 5 ವರ್ಷ ಆಡಳಿತ ನಡೆದುಕೊಂಡು ಹೋಗಲು ಸಹಕರಿಸುವೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಯವರು ಮತ್ತು ಮಾಧ್ಯಮಗಳು ಅರ್ಥಮಾಡಿಕೊಂಡು ರಾಜಕೀಯ ಅನಿಶ್ಚಿತತೆ ಸೃಷ್ಟಿಸುವ ಪ್ರಯತ್ನ ಬಿಡಲಿ ಎಂದರು.

ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಮೇಲೆ ಏನೋ ಸಿಟ್ಟಿದೆ. 104 ಶಾಸಕರನ್ನಿಟ್ಟುಕೊಂಡು ಆತುರಾತುರವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವನಚ ಸ್ವೀಕರಿಸಿದರು. ಆನಂತರ ಬಹುಮತ ಸಾಬೀತುಪಡಿಸಲಾಗದೆ ರಾಜೀನಾಮೆ ನೀಡಿದರು. ಅಟಲ್‌ ಬಿಹಾರಿ ವಾಜಪೇಯಿ ಅವರೂ 13 ದಿನ ಪ್ರಧಾನಿಯಾಗಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಸರ್ಕಾರ ಬಿದ್ದು ಹೋಯಿತು. ಆನಂತರ ನಾನು ಪ್ರಧಾನಿಯಾದೆ. ನಾನು ಪ್ರಧಾನಿಯಾದ 11 ತಿಂಗಳಲ್ಲಿ ಒಂದು ದಿನವೂ ವಾಜಪೇಯಿ ಅವರು ಸದನ ಒಳಗೆ, ಹೊರಗೆ ತೊಂದರೆ ಕೊಡಲಿಲ್ಲ. ಅಂತಹ ಮಹಾಪುರುಷರ ಪಕ್ಷದ ರಾಜ್ಯ ನಾಯಕರಾಗಿರುವ ಯಡಿಯೂರಪ್ಪ, ವಾಜಪೇಯಿ ಅವರ ನಡವಳಿಕೆಯನ್ನು ಅಳವಡಿಸಕೊಳ್ಳಲಿ ಎಂದೂ ದೇವೇಗೌಡರು ಸಲಹೆ ನೀಡಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಖಾಸಗಿ ಸಾಲಗಾರರ ಕಿರುಕುಳ ತಪ್ಪಿಸಲು ಋಣಮುಕ್ತ ಕಾಯ್ದೆ ಜಾರಿಗೆ ತರಲು ರಾಷ್ಟ್ರಪತಿಯವರ ಅಂಕಿತಕ್ಕೆ ಮಸೂದೆ ಕಳುಹಿಸಿದ್ದಾರೆ. ಪೆಟ್ರೋಲ್‌, ಡೀಸೆಲ್‌ ದರವನ್ನು 2 ರೂ. ಕಡಿಮೆ ಮಾಡಿದ್ದಾರೆ. ಇದರಿಂದ ದೇಶದಲ್ಲಿಯೇ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಅತ್ಯಂತ ಕಡಿಮೆ ಇರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ ಎಂದು ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಜುಲೈ ಒಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸುಸ್ಥಿ ಸಾಲವನ್ನು 2 ಲಕ್ಷ ರೂ.ವರೆಗೂ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಮಾಡಿದ್ದೇನೆ. ಮುಂದಿನ ಜುಲೈ ಅಂತ್ಯದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಚಾಲ್ತಿ ಸಾಲ 10,340 ಕೋಟಿ ರೂ. ಮನ್ನಾ ಮಾಡಿದ್ದು, ಈಗಾಗಲೇ ಮನ್ನಾ ಮಾಡಿದ ಮೊತ್ತವನ್ನು ಹಂತ, ಹಂತವಾಗಿ ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ತುಂಬಿಕೊಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲದ ವಿವರವನ್ನು ಕೊಡಿ ಎಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next