ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಎರಡು ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲು ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕ್ಷಾಮ ಕಾಣಿಸಿಕೊಂಡಿದ್ದು, ರಾಜ್ಯಾದ್ಯಂತ ವಿದ್ಯುತ್ ಕಡಿತದಿಂದ ಜನ ಪರದಾಡುವಂತಾಗಿದೆ. ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ಸ್ಥಾವರಗಳಿಗೆ ನಿತ್ಯ 9 ರೈಲ್ವೆ ಲೋಡ್‌ನಷ್ಟು ಕಲ್ಲಿದ್ದಲು ಅಗತ್ಯ ವಿದ್ದು, ನಾಲ್ಕು ರೈಲ್ವೆ ಲೋಡ್‌ನಷ್ಟು ಮಾತ್ರ ಪೂರೈಕೆಯಾಗುತ್ತಿದೆ.
ಒಂದು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರುವ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮನವಿ ಮೇರೆಗೆ ಹೈದರಾಬಾದ್‌ನ ಸಿಂಗರೇಣಿ ಕೊಲೈರೀಸ್ ಕಂಪನಿಯು ಶುಕ್ರವಾರದಿಂದ ಹೆಚ್ಚುವರಿಯಾಗಿ ಒಂದು ರೈಲ್ವೆ ಲೋಡ್ ನಷ್ಟು ಕಲ್ಲಿದ್ದಲು ಪೂರೈಸಲು ಒಪ್ಪಿದೆ. ಇದರಿಂದ ಪರಿಸ್ಥಿತಿ ತುಸು ಸುಧಾರಿಸುವ ಸಾಧ್ಯತೆಯಿದೆ.
ಡಿಸೆಂಬರ್‌ನಿಂದ ಇನ್ನೊಂದು ರೈಲ್ವೆ ಲೋಡ್ ಕಲ್ಲಿದ್ದಲು ಪೂರೈಸುವ ಭರವಸೆ ನೀಡಿದೆ. ಅಲ್ಲಿಯವರೆಗೆ ಇದೇ ಪರಿಸ್ಥಿತಿ ಮುಂದುವರಿಯಲ್ಲಿದ್ದು, ವಿದ್ಯುತ್ ಕಡಿತದ ಆತಂಕ ಮೂಡಿದೆ. ಸರ್ಕಾರಿ ಸ್ವಾಮ್ಯದ ರಾಯಚೂರಿನ ಆರ್ ಟಿಪಿಎಸ್ (1720 ಮೆ.ವ್ಯಾ.ಗರಿಷ್ಠ ಉತ್ಪಾದನೆ) ಹಾಗೂ ಬಳ್ಳಾರಿಯ ಬಿಟಿಪಿಎಸ್ (1700 ಮೆ.ವ್ಯಾ. ಗರಿಷ್ಠ ಉತ್ಪಾದನೆ) ಸ್ಥಾವರಕ್ಕೆ ಕ್ರಮವಾಗಿ 28,000 ಟನ್ ಹಾಗೂ 25,000 ಟನ್ ಕಲ್ಲಿದ್ದಲು ಅಗತ್ಯವಿದೆ. ಸದ್ಯ 30,000 ಟನ್‌ನಷ್ಟು ಕಲ್ಲಿದ್ದಲು ಪೂರೈಕೆ ಯಾಗುತ್ತಿರುವುದರಿಂದ ಶೇ.50ರಷ್ಟು ವಿದ್ಯುತ್ ಉತ್ಪಾದನೆ ಖೋತಾ ಉಂಟಾಗಿ ಕೊರತೆ ತಲೆದೋರಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್ ಅವರು ಕೇಂದ್ರ ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಉತ್ಪಾದನಾ ಸಂಸ್ಥೆಯಾದ ಸಿಂಗರೇಣಿ ಕೊಲೈರೀಸ್ ಕಂಪನಿಯ (ಎಸ್‌ಸಿಸಿಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಹೈದರಾಬಾದ್‌ನಲ್ಲಿ ಗುರುವಾರ ಭೇಟಿ ಮಾಡಿದ ಕುಮಾರ್ ನಾಯಕ್, ರಾಜ್ಯದಲ್ಲಿನ ಸ್ಥಿತಿಗತಿಯನ್ನು ವಿವರಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಕಂಪನಿಯು ಶುಕ್ರವಾರದಿಂದ ಒಂದು ಹೆಚ್ಚುವರಿ ರೈಲ್ವೆ ಲೋಡ್ ಹಾಗೂ ಡಿಸೆಂಬರ್‌ಗೆ ಮತ್ತೂಂದು ರೈಲು ಲೋಡ್‌ನಷ್ಟು ಕಲ್ಲಿದ್ದಲು ಪೂರೈಸುವುದಾಗಿ ಭರವಸೆ ನೀಡಿದ್ದು, ಕೆಪಿಸಿಎಲ್ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾ
ಗಿದೆ. ಕಲ್ಲಿದ್ದಲು ಸ್ಥಿತಿಗತಿ ಕುರಿತಂತೆ ಕೆಪಿಸಿಎಲ್ ಬಿಡುಗಡೆ ಮಾಡಿರುವ ಪ್ರಕಟಣೆಯ ವಿವರ ಹೀಗಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಕಲ್ಲಿದ್ದಲು ಉತ್ಪಾದನಾ ಸಂಸ್ಥೆಗಳಾದ ಎಸ್‌ಸಿಸಿಎಲ್, ವೆಸ್ಟರ್ನ್ಕೋ ಲ್ ಫಿಲ್ಡ್ (ಡಬ್ಲೂಸಿಎಲ್), ಮಹಾನದಿ ಕೋಲ್ ಫಿಲ್ಡ್ (ಎಂಸಿಎಲ್) ಕಂಪನಿಗಳೊಂದಿಗೆ ಕೆಪಿಸಿಎಲ್ ಒಡಂಬಡಿಕೆ ಮಾಡಿಕೊಂಡಿದ್ದು, ವಾರ್ಷಿಕ 80 ಲಕ್ಷ ಟನ್ ಕಲ್ಲಿದ್ದಲನ್ನು ಆರ್‌ಟಿಪಿಎಸ್ ಗೆ ಪೂರೈಸಬೇಕಿದೆ. ಆದರೆ, ಏಳು ತಿಂಗಳಲ್ಲಿ ಡಬ್ಲೂಸಿಎಲ್ ಗಣಿಗಳಿಂದ ಪೂರೈಕೆಯಾದ ಕಲ್ಲಿದ್ದಲು ನಿಗದಿತ ಪ್ರಮಾಣಕ್ಕಿಂತಲೂ ಶೇ.50ರಷ್ಟು ಕಡಿಮೆ ಇದೆ. ಇದರಿಂದ ರಾಯಚೂರಿನಲ್ಲಿ ಕಲ್ಲಿದ್ದಲು ದಾಸ್ತಾನು ಪ್ರಮಾಣ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇನ್ನು ಎಸ್‌ಸಿಸಿಎಲ್ ಮತ್ತು ಎಂಸಿಎಲ್ ಜತೆಗೆ 92 ಲಕ್ಷ ಟನ್ ಕಲ್ಲಿದ್ದಲು ಪೂರೈಕೆಗೆ ಒಡಂಬಡಿಕೆಯಾಗಿದ್ದರೂ ಕಳೆದ ಅಕ್ಟೋಬರ್‌ವರೆಗೆ ಶೇ.21ರಷ್ಟು ಕಲ್ಲಿದ್ದಲು ಮಾತ್ರ ಪೂರೈಕೆಯಾಗಿದ್ದು, ಕಲ್ಲಿದ್ದಲು ದಾಸ್ತಾನು ಪ್ರಮಾಣ ಕುಸಿದಿದೆ.
ಬಿಟಿಎಪಿಎಸ್‌ಗೆ ಕಲ್ಲಿದ್ದಲು ಮೂಲವೇ ಇಲ್ಲ: ಈ ಎಲ್ಲ ಬೆಳವಣಿಗೆಯಿಂದಾಗಿ ಬಳ್ಳಾರಿಯ ಬಿಟಿಪಿಎಸ್‌ಗೆ ಕಲ್ಲಿದ್ದಲು ಮೂಲವೇ ಇಲ್ಲದಂತಾ ಗಿದ್ದು, ಸಂಕಷ್ಟದಲ್ಲಿದೆ. ಸದ್ಯಕ್ಕೆ ರಾಯಚೂರಿನ ಸ್ಥಾವರಕ್ಕೆ ಪೂರೈಕೆಯಾಗುವ ಕಲ್ಲಿದ್ದಲನ್ನೇ ಬಳಸಿ 500 ಟನ್ ಮೆಗಾವ್ಯಾಟ್ ಉತ್ಪಾದಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ, ಇಂಧನ ಸಚಿವರು ಅಕ್ಟೋಬರ್ 12ರಂದು ಕೇಂದ್ರ ಕಲ್ಲಿದ್ದಲು ಸಚಿವರನ್ನು ಭೇಟಿ ಮನವಿ ಮಾಡಿದ ನಂತರವೂ ಕಲ್ಲಿದ್ದಲು ಪೂರೈಕೆಯಲ್ಲಿ ಏರಿಕೆ ಕಂಡುಬಂದಿಲ್ಲ. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕೆಪಿಸಿಎಲ್ ನೆರವಿಗೆ ಧಾವಿಸಿ ಕಲ್ಲಿದ್ದಲು ದಾಸ್ತಾನು ಹೆಚ್ಚಳಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದೆ.