Advertisement
ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ಸೋಮವಾರ ರಾಜಕೀಯ ಚಟುವಟಿಕೆಯ ಕೇಂದ್ರವಾಗಿತ್ತು. ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿರುವ ಬಿಜೆಪಿ ಶಾಸಕರಾದ ನಾರಾಯಣ ಗೌಡ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ, ಹಾವೇರಿ ಶಾಸಕ ನೆಹರು ಓಲೇಕಾರ್ ಕೂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದರು.
Related Articles
Advertisement
ಬಿಎಸ್‌ವೈ ಮೇಲೆ ನಂಬಿಕೆ ಇದೆ: ಎಂ.ಟಿ.ಬಿ.: ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಕೂಡ ಇದೇ ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಹೇಳಿದ್ದಾರೆ. ಏನಾದರೂ ಅಧಿಕಾರ ನೀಡೋಣ ಎಂದಿದ್ದಾರೆ. ಅವರ ಮೇಲೆ ನಂಬಿಕೆ ಇದೆ. ವಿಶ್ವನಾಥ್ ಅವರು ಹತಾಶರಾಗುವ ಅಗತ್ಯವಿಲ್ಲ. ನಾಳೆಯೇ ಅಧಿಕಾರ ಬೇಕು ಎಂದರೆ ಆಗದು. ತಾಳ್ಮೆಯಿಂದ ಕಾಯೋಣ ಎಂದು ಎಂ.ಟಿ.ಬಿ. ನಾಗರಾಜ್ ಹೇಳಿದರು. ಒಟ್ಟಾರೆ ಇಬ್ಬರ ಮಾತಿನಲ್ಲೂ ಸಮಾಧಾನ ಹಾಗೂ ಮುಂದೆ ಸ್ಥಾನಮಾನ ಸಿಗುವ ವಿಶ್ವಾಸವಿರುವುದು ಕಾಣುತ್ತಿದೆ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ಮನವೊಲಿಕೆ ತಂತ್ರ ಫಲಿಸಿದಂತಿದೆ.
ಅಧಿಕಾರ ಅನುಭವಿಸಿದವರು ತ್ಯಾಗ ಮಾಡಲಿ: ಯತ್ನಾಳವಿಜಯಪುರ: ಸಚಿವ ಸಂಪುಟ ವಿಸ್ತರಣೆ ವೇಳೆ ರಾಜ್ಯದಲ್ಲಿ ಸುಸ್ಥಿರ ಸರ್ಕಾರ ಹಾಗೂ ಪಕ್ಷದ ಹಿತಕ್ಕಾಗಿ ಈಗಾಗಲೇ ಎಲ್ಲ ಅಧಿಕಾರ ಪಡೆದ ಕೆಲವು ಸಚಿವರು ತ್ಯಾಗ ಮಾಡಬೇಕು. ಜತೆಗೆ ಈಗಿರುವ ಸಚಿವರ ಮೌಲ್ಯಮಾಪನ ಆಗಬೇಕೆಂದು ವಿಜಯಪುರ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಸೋಮವಾರ ಪತ್ರಕರ್ತರ ಜತೆ ಮಾತನಾಡಿ, ನಾನು ಸಚಿವನಾಗಲು ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲನ್ನೂ ಕಾಯುವುದಿಲ್ಲ, ಅಟಲ್‌ಜೀ, ಅಡ್ವಾಣಿಜೀ ಹಾಗೂ ಅನಂತಕುಮಾರ ಕರೆದು ಕೇಂದ್ರ ಮಂತ್ರಿ ಮಾಡಿದರು. ಈ ಹಿಂದೆ ಲಾಬಿ ಮಾಡದೇ ವಾಜಪೇಯಿ ಅವರ ಕೃಪೆಯಿಂದ ಕೇಂದ್ರ ಸಚಿವನಾಗಿದ್ದೆ. ಈಗಲೂ ಸಾಮರ್ಥ್ಯ ನೋಡಿ ಅಧಿಕಾರ ನೀಡಬೇಕೇ ಹೊರತು ನಾನಾಗಿ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲು ಕಾಯುವುದಿಲ್ಲ ಎಂದರು. ಸಚಿವರ ಮೌಲ್ಯಮಾಪನ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕೆಲ ಸಚಿವರು ವಿಧಾನಸೌಧ ಹಾಗೂ ವಿಕಾಸ ಸೌಧದತ್ತ ಸುಳಿಯುವುದಿಲ್ಲ. ಸಚಿವರು ಸಿಗುವುದಿರಲಿ, ಸಚಿವರ ಪಿಎಗಳೂ ಸಿಗುವುದಿಲ್ಲ. ಪಕ್ಷದಲ್ಲಿ ಮೂಲ, ವಲಸಿಗ ಎನ್ನುವುದು ಕ್ಯಾನ್ಸರ್ ಇದ್ದಂತೆ. ಇದು ಎಲ್ಲ ಪಕ್ಷಗಳಲ್ಲಿಯೂ ಇದದ್ದೇ ಎಂದರು. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ
ಚಿಕ್ಕಬಳ್ಳಾಪುರ: ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವುದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಎಲ್ಲ ಖಾತೆಗಳೂ ಪ್ರಬಲವೇ, ಆದರೆ, ಮಂತ್ರಿಯಾದವನು ಪ್ರಬಲನಾಗಿರಬೇಕು ಎಂದು ಪ್ರತಿಪಾದಿಸಿದರು. “ಪ್ರತಿಯೊಬ್ಬರಿಗೂ ತಮಗೆ ಇಂತಹುದೇ ಖಾತೆ ಸಿಗಬೇಕು ಎನ್ನುವುದು ಇರುತ್ತದೆ. ಆದರೆ, ನನಗೆ ಮಾತ್ರ ಯಾವ ಖಾತೆ ಕೊಟ್ಟರೂ ನಿರ್ವಹಿಸಬಲ್ಲೆ ಎಂಬ ವಿಶ್ವಾಸವಿದೆ. ಯಾರಿಗೆ ಯಾವ ಖಾತೆ ಕೊಡಬೇಕು. ಯಾರು ಯಾವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂಬ ನಂಬಿಕೆ ತಂಡದ ನಾಯಕರಿಗೆ ಇರಬೇಕು. ಬಿಎಸ್‌ವೈ ನಮ್ಮ ತಂಡದ ನಾಯಕರು. ನಾವೆಲ್ಲಾ ಅವರ ತಂಡದ ಸದಸ್ಯರು. ನಾಯಕರಿಗೆ ಅನಿಸಿದವರನ್ನು ತಂಡದೊಳಗೆ ಸೇರಿಸಿಕೊಳ್ಳುತ್ತಾರೆ. ಯಾರಿಗೆ, ಯಾವ ಕ್ರಮಾಂಕ ಕೊಡಬೇಕು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯಾರನ್ನು ಇಳಿಸಬೇಕು. ನಂತರ ಯಾರನ್ನು ಇಳಿಸಬೇಕು ಎಂಬುದು ಅವರಿಗೆ ಗೊತ್ತಿರುವ ವಿಚಾರ’ ಎಂದರು. ಸಂಪುಟ ವಿಸ್ತರಣೆ ವಿಚಾರದಲ್ಲಿ ಏನನ್ನೂ ಮಾತನಾಡುವುದಿಲ್ಲ. ಆದರೆ, ಸೋತ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಜೊತೆಗೆ ನಾನು ರಾಜಕಾರಣದಲ್ಲಿ ಇರುವವರೆಗೂ ಮಾನಸಿಕವಾಗಿ, ನೈತಿಕವಾಗಿ, ರಾಜಕೀಯವಾಗಿ ಇರುತ್ತೇನೆ. ಅವರಿಗೆ ಮುಂದೆ ಒಳ್ಳೆಯದಾಗುತ್ತದೆ. ರಾಜ್ಯದ ರಾಜಕಾರಣದಲ್ಲಿ ಯಾರಾದರೂ ನುಡಿದಂತೆ ನಡೆಯುತ್ತಾರೆ ಅಂದರೆ ಅದು ಸಿಎಂ ಯಡಿಯೂರಪ್ಪ ಮಾತ್ರ ಎಂಬುದು ಸಾಬೀತಾಗಿದೆ. ಅವರು ನಮಗೆ ಏನು ಮಾತು ಕೊಟ್ಟಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ಅವರಿಗೆ ಎಷ್ಟೇ ಸಮಸ್ಯೆ, ರಾಜಕೀಯ ಒತ್ತಡಗಳು ಇದ್ದರೂ ಮಾತಿಗೆ ಬದ್ಧರಾಗಿದ್ದಾರೆ ಎಂದರು. ಕುಮಟಳ್ಳಿಗೂ ಸೂಕ್ತ ಸ್ಥಾನಮಾನ
ಚಿಕ್ಕೋಡಿ: ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸುಗಮವಾಗಿ ನಡೆಯುತ್ತದೆ. ಎಲ್ಲ ಅರ್ಹ ಶಾಸಕರಿಗೆ ಸೂಕ್ತ ನ್ಯಾಯ ಒದಗಿಸಲು ಸಿಎಂ ಯಡಿಯೂರಪ್ಪ ಮತ್ತು ಹೈಕಮಾಂಡ್ ಪ್ರಯತ್ನ ನಡೆಸಿದೆ. ಸಚಿವ ಸ್ಥಾನ ತೊರೆಯುವ ಪ್ರಸಂಗ ಬರುವುದಿಲ್ಲ ಎಂಬ ವಿಶ್ವಾಸ ಹೆಚ್ಚಿದೆ. ಒಂದು ವೇಳೆ ಅಂತಹ ಪ್ರಸಂಗ ಬಂದರೆ ನಾನು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ವಿಧಾನ ಪರಿಷತ್ ಸದಸ್ಯರಾಗಿ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದರು. ಕಳಪೆ ಸಾಧನೆ ಮಾಡಿದ ಸಚಿವರನ್ನು ಕೈ ಬಿಟ್ಟು ಸಂಪುಟ ವಿಸ್ತರಣೆ ವೇಳೆ ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನೂ ಬಂಡಾಯ ಏಳುವುದಿಲ್ಲ. ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗಲ್ಲ.
ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ