Advertisement

ಕೊಡಗಿನಲ್ಲಿ ಪುನರ್ವಸತಿ ಕಾರ್ಯ ಚುರುಕಿಗೆ ಸಿಎಂ ಸೂಚನೆ

06:20 AM Mar 06, 2019 | |

ಬೆಂಗಳೂರು: ಕೊಡಗಿನಲ್ಲಿ ಬಡಾವಣೆಗಳಿಗೆ ಸಂಪರ್ಕ ರಸ್ತೆ, ಬಡಾವಣೆ ನಿರ್ಮಾಣ, ಜಿಲ್ಲಾ ಕ್ರೀಡಾಂಗಣ ಹಾಗೂ ಸರ್ಕಾರಿ ಕಿರಿಯ ಕಾಲೇಜು ದುರಸ್ತಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿಗಳು ಬಳಿಕ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ಇದಕ್ಕೂ ಮೊದಲು ಅಧಿಕಾರಿಗಳು, ಜಿಲ್ಲೆಯಲ್ಲಿ 32,312 ರೈತರ 75,201.68 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ಪರಿಹಾರಕ್ಕಾಗಿ ಸುಮಾರು 100.51 ಕೋಟಿ ರೂ. ಅಗತ್ಯವಿದೆ. ಈವರೆಗೆ 18,033 ರೈತರ 14,609.44 ಹೆಕ್ಟೇರ್‌ ಪ್ರದೇಶದ ಸುಧಾರಣೆಗಾಗಿ 14.39 ಕೋಟಿ ರೂ. ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಹಾಗೆಯೇ 1909 ರೈತರಿಗೆ ಸೇರಿದ 614.43 ಹೆಕ್ಟೇರ್‌ ಪ್ರದೇಶ ಭೂಕುಸಿತಕ್ಕೆ ಒಳಗಾಗಿದ್ದು, 2.51 ಕೋಟಿ ರೂ. ಅಗತ್ಯವಿದೆ. ಈವರೆಗೆ 579 ರೈತರನ್ನು ಪರಿಹಾರಕ್ಕಾಗಿ ಗುರುತಿಸಿ ಸಂಬಂಧಪಟ್ಟ 240.37 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಹೂಳೆತ್ತುವ ಕಾರ್ಯವನ್ನು ರೂಪಿಸಲಾಗಿದೆ.

ವಸತಿರಹಿತರ ಪುನರ್ವಸತಿಗಾಗಿ 1162 ಮನೆಗಳ ನಿರ್ಮಾಣಕ್ಕಾಗಿ 114.55 ಕೋಟಿ ರೂ. ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿ ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ, ಕೊಡಗು ಜಿಲ್ಲಾಧಿಕಾರಿ ಅನ್ನೀಸ್‌ ಕಣ್ಮಣಿ ಜಾಯ್‌, ಯೋಜನಾ ಆಯುಕ್ತರಾದ ವಂದಿತಾ ಶರ್ಮಾ, ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕ ಡಾ.ಮಹೇಶ್ವರ ರಾವ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next