ಮೈಸೂರು: ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳಿಗೆ ತೆರೆ ಎಳೆದು ಕ್ಷೇತ್ರ ಗಟ್ಟಿ ಮಾಡಿಕೊಳ್ಳಲು ಮೈಸೂರಿಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಬೇಕಾದ ರಣತಂತ್ರ ರೂಪಿಸಿದ್ದಾರೆ.
ಇತ್ತೀಚೆಗೆ ನಾಲ್ಕು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದ 70ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಮತ್ತೂಮ್ಮೆ ಚುನಾವಣಾ ಪ್ರಚಾರಕ್ಕೆ ಬರಲು ಸಾಧ್ಯವಾಗದಿರಬಹುದು. ನೀವೇ ಸಿದ್ದರಾಮಯ್ಯ ಅಂದುಕೊಂಡು ನನ್ನ ಪರವಾಗಿ ಮತ ನೀಡಿ ಗೆಲ್ಲಿಸಿ ಎಂದು ಹೇಳಿ ತೆರಳಿದ್ದ ಸಿದ್ದರಾಮಯ್ಯ ಅವರು ಎರಡೇ ದಿನಗಳಲ್ಲಿ ಮೈಸೂರಿಗೆ ಹಿಂತಿರುಗಿದ್ದಾರೆ.
ಗುರುವಾರ ರಾತ್ರಿಯೇ ಮೈಸೂರಿಗೆ ಆಗಮಿಸಿದ ಅವರು, ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತ ಉಮೇಶ್ ಅವರ ಮನೆಯಲ್ಲಿ ಉಪಾಹಾರ ಸೇವಿಸಿ, ನಂತರ ಪುತ್ರ ಡಾ.ಯತೀಂದ್ರ ಜತೆಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತೆರಳಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿ, ಆಶೀರ್ವಾದಪಡೆದು ಬಂದರು.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಲಭ್ಯವಿಲ್ಲದ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಠಕ್ಕೆ ಭೇಟಿ ನೀಡಿ ಹೋದ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ದಿಢೀರ್ ಭೇಟಿ ಕೊಟ್ಟಿರುವುದು ಕುತೂಹಲ ಕೆರಳಿಸಿದೆ.
ಸುತ್ತೂರು ಮಠದ ಭೇಟಿ ನಂತರ ನಿವೇದಿತಾ ನಗರದ ಶ್ರೀರಂಗ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಒಕ್ಕಲಿಗ ಸಮುದಾಯದ ಮುಖಂಡರ ಸಮಾವೇಶದಲ್ಲಿ ಪಾಲ್ಗೊಂಡು, ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡದೆ ಚುನಾವಣೆಯಲ್ಲಿ ಎಂದಿನಂತೆ ಬೆಂಬಲಿಸುವಂತೆ ಕೋರಿದರು.
ಬಳಿಕ ಕ್ಷೇತ್ರ ವ್ಯಾಪ್ತಿಯ ಕೋಟೆಹುಂಡಿ, ಹುಯಿಲಾಳು, ಸಿಂಧುವಳ್ಳಿ ಗ್ರಾಮಗಳಿಗೆ ತೆರಳಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.