Advertisement

ಸಾಲ ಮನ್ನಾಕ್ಕೆ ಹಣ ಹೊಂದಿಸಲು ಸಿಎಂ ಹರಸಾಹಸ

06:00 AM Aug 19, 2018 | Team Udayavani |

ಬೆಂಗಳೂರು: ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಯಾಗಿಟ್ಟಿರುವ ಮೊತ್ತದ ಮಾಹಿತಿ  ಸಂಗ್ರಹಕ್ಕೆ ಮುಂದಾಗಿದ್ದಾರೆ.

Advertisement

ಮುಜರಾಯಿ, ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಎಂಎಸ್‌ಐಎಲ್‌ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳು ಹಾಗೂ ಪ್ರಮುಖ ನಿಗಮ-ಮಂಡಳಿಗಳು ಹತ್ತು ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದು  ಆ ಪೈಕಿ ಐದು ಸಾವಿರ ಕೋಟಿ ರೂ.ನಷ್ಟು ಹಣ ಅಪೆಕ್ಸ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿಸಿ  ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ  ಕೃಷಿ ಮಾರುಕಟ್ಟೆ ಇಲಾಖೆ (ಎಪಿಎಂಪಿ)ಯಲ್ಲಿದ್ದ 520 ಕೋಟಿ ರೂ. ಪೈಕಿ 300 ಕೋಟಿ ರೂ. ಅಪೆಕ್ಸ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಲಾಗಿದೆ. ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ರೈತರ ಉತ್ಪನ್ನಗಳು ಬೆಂಬಲ ಬೆಲೆಯಡಿ ಖರೀದಿಸಿದ ಬಾಬಿ¤ನಲ್ಲಿ ಕೇಂದ್ರ ಸರ್ಕಾರದಿಂದ 900 ಕೋಟಿ ರೂ. ಬರಲಿದ್ದು ಆ ಹಣವನ್ನೂ ಅಪೆಕ್ಸ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿ ಸಾಲ ಮನ್ನಾಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಇದಲ್ಲದೆ ವಿವಿಧ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ  ಎಷ್ಟು ಮೊತ್ತ ಠೇವಣಿ ಇಟ್ಟಿದೆ. ಎಷ್ಟು ವರ್ಷದಿಂದ ಠೇವಣಿ ಇಡಲಾಗಿದೆ. ಠೇವಣಿಗೆ ಬರುತ್ತಿರುವ ಬಡ್ಡಿ ಮತ್ತಿತರ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಗೆ ನೀಡುತ್ತಿರುವುದು ಶೇ.6 ರಿಂದ 7 ರಷ್ಟು ವಾರ್ಷಿಕ ಬಡ್ಡಿ. ಆ ಬಡ್ಡಿಯನ್ನು ಅಪೆಕ್ಸ್‌ ಬ್ಯಾಂಕ್‌ ಇಲಾಖೆಗಳಿಗೆ ನೀಡಲಿದೆ.

ಸರ್ಕಾರದ  ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಆ ಹಣ ದುರುಪಯೋಗವಾದ ಪ್ರಕರಣಗಳು ನಡೆದಿರುವುದರಿಂದ  ಒಂದೆಡೆ ದುರುಪಯೋಗ ತಡೆಗಟ್ಟುವುದು. ಮತ್ತೂಂದೆಡೆ ರೈತರ ಸಾಲ ಮನ್ನಾಗೆ ಅಗತ್ಯವಾದ ಹಣ ಹೊಂದಿಸುವುದು ಇದರ ಉದ್ದೇಶವಾಗಿದೆ.

Advertisement

ಕಟ್ಟುನಿಟ್ಟಿನ ಸೂಚನೆ
ಈ ಮಧ್ಯೆ, ಕೆಲವು ಸಹಕಾರ ಸಂಘಗಳಲ್ಲಿ ಬೇನಾಮಿ ಖಾತೆಗಳು ಸೃಷ್ಟಿಯಾಗಿ ಸಂಘಗಳ ಕಾರ್ಯದರ್ಶಿ ಹಾಗೂ ಸಿಬ್ಬಂದಿ ರೈತರ ಹೆಸರಿನಲ್ಲಿ ಸಾಲ ಪಡೆಯುತ್ತಿರುವುದು ಪತ್ತೆಯಾಗಿರುವುದರಿಂದ ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಎಚ್ಚರ ವಹಿಸುವಂತೆ ಸಹಕಾರ ಇಲಾಖೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬೇನಾಮಿ ಖಾತೆ ಅಥವಾ ರೈತರ ಹೆಸರಿನಲ್ಲಿ ಕಾರ್ಯದರ್ಶಿ ಅಥವಾ ಸಿಬ್ಬಂದಿ ಸಾಲ ಪಡೆಯುವುದು ಪತ್ತೆಯಾದರೆ ಕೆಲಸದಿಂದ ವಜಾಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.  ಸಾಲ ಮನ್ನಾ ಸಂಪೂರ್ಣವಾಗಿ ರೈತರಿಗೆ ತಲುಪಬೇಕು. ದೂರುಗಳು ಬಂದರೆ ಆಯಾ ಜಿಲ್ಲಾ ಸಹಕಾರಿ ಬ್ಯಾಂಕ್‌ ಅಥವಾ ಸಂಘಗಗಳನ್ನೇ ಹೊಣೆ ಮಾಡಲಾಗುವುದು ಎಂದು ಮೌಖೀಕವಾಗಿ ತಿಳಿಸಲಾಗಿದೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಬೇನಾಮಿ ಖಾತೆಗಳು ಇರುವ ದೂರುಗಳು ಬಂದಿದ್ದು ಆ ಪೈಕಿ  ಈಗಾಗಲೇ ಆರು ಸಾವಿರ ಖಾತೆಗಳನ್ನು ಪತ್ತೆಹಚ್ಚಲಾಗಿದೆ.  ರೈತರ ಜಮೀನಿನ ಸರ್ವೆ ಸಂಖ್ಯೆಯ ಮಾಹಿತಿ ಪಡೆದು ಪಹಣಿ ಪಡೆದುಕೊಂಡು ಐದಾರು ವರ್ಷಗಳಿಂದ ನೂರಾರು ಕೋಟಿ ರೂ.  ಸಾಲ ಪಡೆದು ನವೀಕರಣ ಸಹ ಮಾಡುತ್ತಿರುವ ಪ್ರಕರಣಗಳು ಇವೆ. ಆದರೆ, ಜಮೀನಿನ ಮಾಲೀಕರಿಗೆ ಇದು ಗೊತ್ತೇ ಇಲ್ಲ. ಹೀಗಾಗಿ,  ಹಿಂದಿನ ಸರ್ಕಾರ ಘೋಷಿಸಿದ್ದ 50 ಸಾವಿರ ರೂ. ಸಾಲ ಮನ್ನಾ,  ಈಗಿನ ಸಮ್ಮಿಶ್ರ ಸರ್ಕಾರ ಘೋಷಿಸಿರುವ 1 ಲಕ್ಷ ರೂ.ಚಾಲ್ತಿ ಸಾಲದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೂ ನಿರ್ದೇಶಿಸಲಾಗಿದೆ.

ಸರ್ಕಾರದ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇಟ್ಟಿರುವ ಮೊತ್ತವನ್ನು ಅಪೆಕ್ಸ್‌ ಬ್ಯಾಂಕ್‌ಗೆ ವರ್ಗಾಯಿಸಿಕೊಂಡು ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ಚಿಂತನೆ ನಡೆಸಲಾಗಿದೆ. ಒಮ್ಮೆಲೆ ಎಲ್ಲ ಠೇವಣಿ ವರ್ಗಾವಣೆ ಮಾಡಿಕೊಳ್ಳುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಮಾಡಿಕೊಳ್ಳುತ್ತೇವೆ. 9448.61 ಕೋಟಿ ರೂ. ಸಾಲ ಮನ್ನಾ ಮಾಡಿರುವುದರಿಂದ ಅದನ್ನು ಹೊಂದಿಸಲು ಕೆಲವು ಕ್ರಮ ಕೈಗೊಳ್ಳಬೇಕಾಗಿದೆ.
– ಬಂಡೆಪ್ಪ ಕಾಶಂಪೂರ್‌, ಸಹಕಾರ ಸಚಿವ

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next