Advertisement

ಸೋತವರಿಗೂ ಮುಖ್ಯಮಂತ್ರಿ ಅಭಯ

11:42 PM Dec 10, 2019 | Team Udayavani |

ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಚ್‌.ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ಗೆ ಮತದಾರ ಸೋಲಿನ ರುಚಿ ತೋರಿದ್ದಾನೆ. ಉಪಚುನಾವಣೆಯಲ್ಲಿ ಗೆದ್ದು, ಸಚಿವರಾಗುವ ನಿರೀಕ್ಷೆಯಲ್ಲಿದ್ದ ಈ ಇಬ್ಬರೂ ನಾಯಕರು ಸೋಲಿನ ಆಘಾತದಿಂದ ಹೊರಬಂದಿಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ “ತ್ಯಾಗ’ವನ್ನೇ ಮಾಡಿದವರಿಗೆ ಚುನಾವಣೆಯಲ್ಲಿ ಸೋತರೂ ಅವರ ಕೈ ಬಿಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಅಭಯ ನೀಡುವ ಮೂಲಕ ಅವರ ಬೆನ್ನಿಗೆ ನಿಂತಿದ್ದಾರೆ.

Advertisement

“ಧೃತಿಗೆಡಬೇಡಿ, ಪಕ್ಷ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ’
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಸಂಜೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷದ ಪರಾಜಿತ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ಅವರನ್ನು ಭೇಟಿ ಮಾಡಿ, ಪಕ್ಷವು ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ.

ನಗರದ ಗರುಡಾಚಾರ್‌ ಪಾಳ್ಯದಲ್ಲಿ ಇರುವ ಎಂ.ಟಿ.ಬಿ. ನಾಗರಾಜ್‌ ಅವರ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರು ನಾಗರಾಜ್‌ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ. ಪಕ್ಷದಿಂದ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ, ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಸೋಲಿಗೆ ಕಾರಣ ಏನು ಎಂಬುದನ್ನು ಪಕ್ಷದ ರಾಷ್ಟ್ರೀಯ ವರಿಷ್ಠರು ಬಲ್ಲವರಾಗಿದ್ದಾರೆ.

ನಾನೂ ಸೂಕ್ಷ್ಮವಾಗಿ ಈ ವಿಚಾರವನ್ನು ರಾಷ್ಟ್ರಾಧ್ಯಕ್ಷರ ಗಮನಕ್ಕೆ ತರುತ್ತೇನೆಂದು ಹೇಳಿದ್ದಾರೆ. ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಬಿಜೆಪಿ ಅಭ್ಯರ್ಥಿಗಳು 12 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಆದರೆ, ಎಂಟಿಬಿ ನಾಗರಾಜ್‌ ಸೋತಿರುವುದರಿಂದ ಯಾವುದೇ ರೀತಿಯಲ್ಲೂ ನಮಗೆ ಸಮಾಧಾನವಿಲ್ಲ. ಒಳ್ಳೆಯವರಿಗೆ ಬೆಲೆ ಇಲ್ಲದಂತಾಗಿದೆ. ಐದಾರು ದಿನದಲ್ಲಿ ದೆಹಲಿಗೆ ಹೋಗಲಿದ್ದೇನೆ.

ಎಂಟಿಬಿಯವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಜತೆ ಬಂದಿರುವವರನ್ನು ಮಂತ್ರಿ ಮಾಡುತ್ತೇವೆ. ವಿಶ್ವಾಸ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಕೆಲವೇ ದಿನದಲ್ಲಿ ಗೆದ್ದವರನ್ನು ಸಚಿವರನ್ನಾಗಿ ಮಾಡಲಿದ್ದೇವೆ ಎಂದರು.

Advertisement

ವಿಶ್ವನಾಥ್‌ ಭೇಟಿಯಾದ ಎಸ್‌.ಟಿ. ಸೋಮಶೇಖರ್‌
ಮೈಸೂರು: “ಎಚ್‌.ವಿಶ್ವನಾಥ್‌ ಅವರು ನಮ್ಮ ಗುಂಪಿನ ಗುರು. ಅವರು ಸೋತಿದ್ದಾರೆ. ಹಾಗಂತ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ನೂತನ ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದರು. ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಅವರ ಮೈಸೂರಿನಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿದರು. ವಿಶ್ವನಾಥ್‌ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನಲ್ಲಿ 17 ಜನ ಶಾಸಕರೂ ಸಭೆ ಸೇರಿ, ಮುಂದಿನ ನಡೆಯ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ. ಬಳಿಕ ಸಿಎಂ ಯಡಿಯೂರಪ್ಪ ಜೊತೆಯಲ್ಲಿ ಸಮಾಲೋಚನೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.

ಮುಂದೆಯೂ ಒಗ್ಗಟ್ಟಾಗಿರಲು ಹೊಸ ಶಾಸಕರ ನಿರ್ಧಾರ
ಬೆಂಗಳೂರು: ಉಪಚುನಾವಣೆಯಲ್ಲಿ ಜಯ ಗಳಿಸಿರುವ ಬಿಜೆಪಿಯ ಹಲವು ಶಾಸಕರು, ಮಂಗಳವಾರ ರಾತ್ರಿ ನಗರದಲ್ಲಿ ಸಭೆ ಸೇರಿ ಚರ್ಚಿಸಿ ಒಗ್ಗಟ್ಟಾಗಿಯೇ ಮುಂದು ವರಿಯುವ ನಿರ್ಧಾರವನ್ನು ಪುನರು ಚ್ಚರಿಸಿದರು. ಪರಾಜಿತ ಅಭ್ಯರ್ಥಿ ಎಚ್‌.ವಿಶ್ವನಾಥ್‌, ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪಗೌಡ ಪಾಟೀಲ್‌, ಆರ್‌.ಶಂಕರ್‌ ಸೇರಿ ಹಲವು ಶಾಸಕರು ಪಾಲ್ಗೊಂಡು ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ಗೆ ರಾಜೀನಾಮೆ ಸಲ್ಲಿಸಿ ಬಳಿಕ ಕಾನೂನು ಹೋರಾಟ ನಡೆಸಿ ಉಪಚುನಾವಣೆಯಲ್ಲಿ ಬಹುತೇಕರು ಗೆದ್ದ ಬಳಿಕ ನಡೆದ ಸಭೆಯಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಯಾಯಿತು. ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪುವ ಆತಂಕ ಯಾವ ಶಾಸಕರಿಗೂ ಇದ್ದಂತಿಲ್ಲ.

ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಈ ನಡುವೆ ಮಸ್ಕಿ, ರಾಜರಾಜೇಶ್ವರಿ ನಗರ ಕ್ಷೇತ್ರದ ಫ‌ಲಿತಾಂಶಕ್ಕೆ ಸಂಬಂಧಪಟ್ಟಂತೆ ಕಾನೂನಾತ್ಮಕ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿಕೊಳ್ಳುವುದು. ಈ ಹಿಂದೆ ಭರವಸೆ ನೀಡಿದಂತೆ ಖಾತೆ ಹಂಚಿಕೆ ಮಾಡುವಂತೆ ಮನವಿ ಮಾಡುವುದು. ಉಪ ಚುನಾವಣೆಯಲ್ಲಿ ಪರಾಭವಗೊಂಡವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂಬ ಬಗ್ಗೆಯೂ ಸಂಘಟಿತವಾಗಿ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿ ಸಲಾಯಿತು ಎಂದು ಹೇಳಲಾಗಿದೆ.

ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್‌, ಶ್ರೀಮಂತ ಪಾಟೀಲ್‌, ಆನಂದ್‌ಸಿಂಗ್‌, ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಇತರರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ. ಬಿಎಸ್‌ಪಿ ಉಚ್ಛಾಟಿತ ಶಾಸಕ ಎನ್‌.ಮಹೇಶ್‌ ಸಭೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ನಾನು ಸೋತೆ ಎಂಬ ನೋವಿಲ್ಲ. ಬದಲಿಗೆ ಸರ್ಕಾರ ಸುಭದ್ರವಾಗಿದೆ ಎಂಬ ಖುಷಿಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಕ್ಷಣದಲ್ಲೂ ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆಯಿದೆ. ಅವರು ನಮ್ಮ ಜೊತೆ ಇರೋದಲ್ಲ, ನಾವೇ ಅವರ ಜೊತೆ ಇದ್ದೇವೆ.
-ಎಚ್‌.ವಿಶ್ವನಾಥ್‌, ಮಾಜಿ ಶಾಸಕ

ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಿಎಂ ಭೇಟಿಗೆ ವಿಶೇಷ ಅರ್ಥಕಲ್ಪಿಸುವ ಅಗತ್ಯವಿಲ್ಲ. ನಮ್ಮ ಸೋಲಿಗೆ ಶರತ್‌ ಬಚ್ಚೇಗೌಡ ಅವರೇ ಕಾರಣ. ನಮ್ಮ ಬೆಂಬಲಿಗರು ಮತ್ತು ಮೂಲ ಬಿಜೆಪಿಗರು ಒಟ್ಟಿಗೆ ಇದ್ದಿದ್ದರೆ 50 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸುತ್ತಿದ್ದೆವು. ಸಾಮೂಹಿಕವಾಗಿ ಚುನಾವಣೆ ಎದುರಿಸಲು ಕೆಲವೊಂದು ತೊಡಕಾಗಿದೆ. ಇದಕ್ಕೆ ಪಕ್ಷ ಸೂಕ್ತ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದೆ.
-ಎಂಟಿಬಿ ನಾಗರಾಜ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next