ಬೆಂಗಳೂರು: ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಹಾಗೂ ಸಂತೋಷ್ ಎಸ್.ಲಾಡ್ ಅವರನ್ನು ರಾಜ್ಯ ಸರಕಾರದ ವಕ್ತಾರರನ್ನಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಇವರಿಗೆ ಸರಕಾರದ ಸಾಧನೆಗಳು, ದಾಖಲೆಗಳು ಮತ್ತು ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಿಎಂ ಸೂಚಿಸಿದ್ದಾರೆ.
ಇದಕ್ಕೆ ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ವ್ಯಂಗ್ಯವಾಡಿದ್ದು, ಸಂಪುಟದ 34 ಸಚಿವರ ಪೈಕಿ ಐವರು ಮಾತ್ರ ಸರಕಾರದ ಅಧಿಕೃತ ವಕ್ತಾರರಾದರೆ ಉಳಿದ ಸಚಿವರು ಸರಕಾರವನ್ನು ಪ್ರತಿನಿಧಿಸಲು ಅಸಮರ್ಥರು ಎಂದು ಸಿಎಂ ಅವರ ಅಭಿಪ್ರಾಯವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿಯಲ್ಲಿ ಅಶೋಕ್ ಅವರೊಬ್ಬರನ್ನೇ ವಿಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಹಾಗಿದ್ದರೆ, ಉಳಿದ 65 ಶಾಸಕರು ಅಸಮರ್ಥರೇ? ಎಲ್ಲರೂ ವಕ್ತಾರರಾಗಲೂ ಸಾಧ್ಯವಿಲ್ಲ. ಎಷ್ಟು ಅವಕಾಶ ಇದೆಯೋ ಅಷ್ಟೇ ಮಾಡಲು ಸಾಧ್ಯ ಎಂದಿದ್ದಾರೆ.