ಬೆಂಗಳೂರು: ಕೋವಿಡ್- 19 ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಒಂದು ವರ್ಷ ಶಾಸಕರ ವೇತನ ಹಾಗೂ ಭತ್ತೆಯಲ್ಲಿ ಶೇ. 30ರಷ್ಟು ಕಡಿತ ಸಂಬಂಧ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಶಾಸಕರು ಪ್ರತಿ ತಿಂಗಳು ವೇತನವಾಗಿ 25 ಸಾವಿರ ರೂ. ಪಡೆಯಲಿದ್ದು, ವಿವಿಧ ಭತ್ತೆ ಸಹಿತ 1.50 ಲಕ್ಷ ರೂ. ಪಡೆಯುತ್ತಾರೆ. ಹೀಗಾಗಿ 25 ಸಾವಿರ ರೂ.ನಲ್ಲಿ ಕಡಿತ ಮಾಡಬೇಕೋ, 1.50 ಲಕ್ಷ ರೂ.ನಲ್ಲಿ ಕಡಿತ ಮಾಡಬೇಕೋ ಎನ್ನುವ ಜಿಜ್ಞಾಸೆ ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ಇತ್ತು. ಹೀಗಾಗಿ ಕಾನೂನು ಇಲಾಖೆ ಸಲಹೆ ಕೇಳಲಾಗಿತ್ತು. ಸಲಹೆ ಅನಂತರ ವೇತನ ಸಹಿತ ಭತ್ತೆಯ 1.50 ಲಕ್ಷ ರೂ. ಮೊತ್ತದಲ್ಲಿ ಶೇ. 30ರಷ್ಟು ಕಡಿತ ಮಾಡಲು ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿ, ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಡೆಯುವ ವೇತನ, ಭತ್ತೆಯಲ್ಲಿ ಶೇ. 30ರಷ್ಟು ಎ. 1ರಿಂದ ಅನ್ವಯವಾಗುವಂತೆ ಕಡಿತವಾಗಲಿದೆ.
ಮೊದಲಿಗೆ ಶಾಸಕರ 25 ಸಾವಿರ ರೂ. ವೇತನದಲ್ಲಿ ಶೇ. 30 ಅಂದರೆ 7,500 ರೂ. ಕಡಿತವಾಗುತ್ತಿತ್ತು. ಪರಿಷ್ಕೃತ ಆದೇಶದಂತೆ ವೇತನ ಭತ್ತೆಯ ಮೊತ್ತ 1.50 ಲಕ್ಷ ರೂ.ನಲ್ಲಿ ಶೇ. 30 ಕಡಿತ ಎಂದರೆ ಮಾಸಿಕ 45 ಸಾವಿರ ರೂ. ಕಡಿತವಾಗಲಿದೆ.
ಶಾಸಕರ ವೇತನ ಕಡಿತ ಕುರಿತು ಎಪ್ರಿಲ್ ಮೊದಲ ವಾರದಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾಯ್ದೆ ತಿದ್ದುಪಡಿ ಮಾಡಿ ಅಧ್ಯಾದೇಶದ ಮೂಲಕ ಜಾರಿ ಮಾಡಲು ತೀರ್ಮಾನಿಸಲಾಗಿತ್ತು.