ಅರಂತೋಡು: ಅರಂತೋಡು ತೊಡಿಕಾನ ರಸ್ತೆ ಬದಿಯಲ್ಲಿ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದ ಬೃಹದಾಕರದ ಮರವೊಂದನ್ನು ತೆರವುಗೊಳಿಲಾಗಿದೆ. ಮರ ಬಿದ್ದರೆ ಅಪಾಯ ಉಂಟಾಗಬಹುದು ಎಂದು ‘ಉದಯವಾಣಿ’ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸ್ಥಳೀಯರ ಸಹಕಾರದಿಂದ ಒಣಗಿದ ಅಪಾಯಕಾರಿ ಮರವನ್ನು ಕಡಿದು ತೆರವುಗೊಳಿಸಿದೆ.
ಮಾಣಿ-ಮೈಸೂರು ರಸ್ತೆಯಿಂದ ಸುಮಾರು 100 ಮೀಟರ್ ದೂರದ ಅರಂತೋಡು-ತೊಡಿಕಾನ ರಸ್ತೆ ಬದಿಯಲ್ಲಿ ಈ ಒಣ ಮರ ಇದ್ದು, ಅಪಾಯ ಎದುರಾಗಿತ್ತು.
ಅರಂತೋಡು-ತೊಡಿಕಾನ ರಸ್ತೆ ಮುಖ್ಯವಾಗಿ ಸುಳ್ಯದ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಸಂಪರ್ಕ ರಸ್ತೆಯಾಗಿದೆ. ದಿನ ನಿತ್ಯ ದೇವಾಲಯಕ್ಕೆ ನೂರಾರು ಭಕ್ತರು ದೇವಾಲಯಕ್ಕೆ ಪ್ರಯಾಣ ಬೆಳೆಸುತ್ತಾರೆ. ಉತ್ಸವಾದಿ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದಾರಿಯಾಗಿ ತೆರಳುತ್ತಿರುತ್ತಾರೆ. ಅಲ್ಲದೆ ಅನೇಕ ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು ಈ ರಸ್ತೆಯಲ್ಲಿ ಸಾಗುತ್ತಾರೆ. ಬೆಳಗ್ಗೆ 6-45ರಿಂದ ಸಂಜೆ 8 ಗಂಟೆ ತನಕ ಈ ರಸ್ತೆಯಲ್ಲಿ ಪ್ರತಿ ಗಂಟೆಗೊಮ್ಮೆ ಖಾಸಗಿ ಬಸ್ಸುಗಳ ಓಡಾಟವೂ ಇದೆ. ಮಾತ್ರವಲ್ಲದೆ ಖಾಸಗಿ ವಾಹನಗಳ ಸಂಚಾರ ಕೂಡ ಇದೆ.
ಕಳೆದ ಒಂದು ವಾರದ ಹಿಂದೆ ತೊಡಿಕಾನ, ಅರಂತೋಡು ಪರಿಸರದಲ್ಲಿ ಗಾಳಿ ಮಳೆ ಸುರಿದಿದೆ. ಈ ಗಾಳಿ ಮಳೆಗೆ ಕೆಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಕೃಷಿ ಬೆಳೆಯಾದ ಅಡಿಕೆ, ರಬ್ಬರ್ ಮರಗಳು ನೆಲಕಚ್ಚಿವೆ. ಮುಂದಿನ ದಿನಗಳಲ್ಲಿ ಭಾರಿ ಗಾಳಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಈ ಸಂದರ್ಭ ಮರ ರಸ್ತೆಗೆ ಉರುಳಿ ಬಿದ್ದರೆ ಅಪಾಯ ಹೆಚ್ಚಿದೆ.
ಒಣ ಮರದ ಅಡಿಯಲ್ಲಿಯೇ ತೊಡಿಕಾನಕ್ಕೆ ವಿದ್ಯುತ್ ಲೈನ್ ಹಾದು ಹೋಗುತ್ತಿದ್ದು, ಮರ ಉರುಳಿ ವಿದ್ಯುತ್ ಲೈನ್ ಮೇಲೆ ಬಿದ್ದರೆ ಅಪಾಯ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಗಳ ಕುರಿತು ವರದಿಯಲ್ಲಿ ತಿಳಿಸಲಾಗಿತ್ತು. ಇದರಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದೆ.