ಪಿರಿಯಾಪಟ್ಟಣ: ಸುಪ್ರೀಂ ಕೋರ್ಟ್‌ನ ಅದೇಶದಂತೆ ರಾಜಾದ್ಯಂತ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಮದ್ಯದಂಗಡಿಗಳು ಜು.1 ರಿಂದ ಅನಿವಾರ್ಯವಾಗಿ ಸ್ಥಳಾಂತರಗೊಳ್ಳಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಬಗ್ಗೆ 3 ತಿಂಗಳ ಹಿಂದೆ ಉತ್ಛ ನ್ಯಾಯಾಲಯವು ಈ ರೀತಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವ ಮದ್ಯದಂಗಡಿಗಳಿಂದ ರಾತ್ರಿ ಸಮಯದಲ್ಲಿ ಪ್ರಯಾಣಿಸುವ ವಿವಿಧ ವಾಹನಗಳ ಚಾಲಕರು ಮದ್ಯಪಾನ ಮಾಡಿ ಅಪಘಾತಕ್ಕೀಡಾಗುವ ಹಿನ್ನೆಲೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಇತ್ಯರ್ಥ ಪಡಿಸುತ್ತಾ ಈ ಆದೇಶ ಹೊರಡಿಸಿತ್ತು.
ಅಲ್ಲದೆ ಸ್ಥಳಾಂತರಗೊಳ್ಳಲು ಜೂ.30 ಕೊನೆಯ ದಿನವೆಂದು ನಿಗದಿಗೊಳಿಸಿತ್ತು. ಈ ಹಿನ್ನೆಲೆ ತಾಲೂಕಿನಲ್ಲಿ 43 ವಿವಿಧ ಮದ್ಯದಂಗಡಿಗಳಿದ್ದು, ಇದರಲ್ಲಿ ರಾಷ್ಟ್ರೀಯ ಹೆದ್ದಾರಿಯಾದ ಮೈಸೂರು ಬಂಟವಾಳ ಮುಖ್ಯ ರಸ್ತೆಯಲ್ಲಿ ಬರುವ ಮದ್ಯದಂಗಡಿಗಳ ಪೈಕಿ 25 ಮದ್ಯದಂಗಡಿಗಳನ್ನು 500 ಮೀ ದೂರಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಬಂದೊದಗಿದೆ.
ಕಸಬಾ ರಾವಂದೂರು, ಬೆಟ್ಟದಪುರ, ಹಾರನಹಳ್ಳಿ ಹಾಗೂ ಪಟ್ಟಣ ಸೇರಿದಂತೆ 32 ಅಂಗಡಿಗಳು ಸ್ಥಳಾಂತರಗೊಳ್ಳಬೇಕಾಗಿದೆ. ಶಾಲಾ-ಕಾಲೇಜು, ಮಸೀದಿ ಹಾಗೂ ದೇವಸ್ಥಾನಗಳಿಂದ 500 ಮೀ ದೂರಕ್ಕೆ ಮದ್ಯದಂಗಡಿಗಳು ಸ್ಥಳಾಂತರಗೊಳ್ಳಬೇಕಾಗಿದೆ ಎಂದು ಅಬಕಾರಿ ನಿರೀಕ್ಷಕ ಎನ್.ಟಿ.ಆನಂದ್‌ಕುಮಾರ್ ಹೇಳಿದರು.
ಒಟ್ಟಿನಲ್ಲಿ ಸರ್ಕಾರಿ ಬೊಕ್ಕಸಕ್ಕೆ ಬರುವ ಆದಾಯ ತಪ್ಪಿ ಹೋಗುವುದಲ್ಲದೆ ಸ್ಥಳಾಂತರಗೊಳ್ಳಲಿರುವ ಮಾಲೀಕರು 500 ಮೀ.ದೂರದಲ್ಲಿ ಕಟ್ಟಡಗಳನ್ನು ಹೊಂದಿ ವಹಿವಾಟ ನಡೆಸಬೇಕಾದ ಸ್ಥಿತಿ ಉಂಟಾಗಿ ಅತಂತ್ರಕ್ಕೆ ಒಳಗಾಗಿದ್ದಾರೆ. ತಾಲೂಕಿನ ಮದ್ಯದಂಗಡಿಗಳ ಪೈಕಿ ಸದ್ಯಕ್ಕೆ 11 ಅಂಗಡಿಗಳು ಮಾತ್ರ ಯಾವುದೇ ಸ್ಥಳಾಂತರ ವಿಲ್ಲದೆ ನಿರಾಳವಾಗಿ ವ್ಯವಹರಿಸಲಿವೆ. ಮಿಕ್ಕ ಮದ್ಯದಂಗಡಿಗಳು ಮುಂದಿನ ಸುಪ್ರೀಂ ಕೋರ್ಟ್‌ನ ಆದೇಶದಂತೆ ಬದ್ಧವಾಗಬೇಕಾಗಿದೆ.