ಶಿರ್ವ : ಇಂದು ರಸ್ತೆ ಬದಿಗಳಲ್ಲಿ ಕಂಡು ಬರುವ ಪ್ಲಾಸ್ಟಿಕ್, ಕಸ,ತ್ಯಾಜ್ಯಗಳ ನಿಯಂತ್ರಣವಾಗಲು ಪರಿಣಾಮಕಾರಿಯಾದ ನೀತಿ ಜಾರಿಯಾಗಬೇಕಿದೆ.ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಕಡಿಮೆಯಾಗಬೇಕಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ.
ಮಳೆಗಾಲದಲ್ಲಿ ಮನೆಗಳಲ್ಲಿ ಹರಿಯುವ ನೀರನ್ನು ಉಳಿಸಿಕೊಳ್ಳುವ ಕಾರ್ಯಕ್ರಮ ನಡೆಸಿ ಪರಿಸರದಲ್ಲಿ ಮರ ಗಿಡಗಳನ್ನು ಬೆಳೆಸುವುದರೊಂದಿಗೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಎಂದು ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್. ಪಾಟ್ಕರ್ ಹೇಳಿದರು.
ಅವರು ರವಿವಾರ ಶಿರ್ವ ಗ್ರಾ.ಪಂ., ಸ್ವಚ್ಛ ಭಾರತ್ ಮಿಶನ್ ಅವರ ಆಶ್ರಯದಲ್ಲಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದದ ಸಹಯೋಗದೊಂದಿಗೆ ಬಂಟಕಲ್ಲು ವಾರ್ಡ್ ಮಟ್ಟದ ಸ್ವಚ್ಛಮೇವ ಜಯತೇ ಮತ್ತು ಜಲಾಮೃತ ಆಂದೋಲನ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ಸಾರ್ವಜನಿಕರಿಗೆ ಸಸಿ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಗೆ ಪೂರಕವಾಗಿ ಬಟ್ಟೆ ಚೀಲ ಉಪಯೋಗಿಸುವಂತೆ ತಿಳಿಸಿ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಶಿರ್ವ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛತೆಯ ಪ್ರಮಾಣ ವಚನ ಬೋಧಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ,ಶಿರ್ವ ಗ್ರಾ.ಪಂ.ಸದಸ್ಯರಾದ ಗ್ರೇಸಿ ಕಾಡೋಜಾ, ಸುಜಾತಾ ಕುಲಾಲ್,ರಾ.ಸಾ. ಯುವ ವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್,ಕಾರ್ಯದರ್ಶಿ ಅನಂತ ರಾಮ ವಾಗ್ಲೆ, ಲಯನ್ಸ್ ಕ್ಲಬ್ ಉಡುಪಿ ಕರಾವಳಿಯ ಅಧ್ಯಕ್ಷ ರವೀಂದ್ರ ಆಚಾರ್ಯ, ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರು,ಸಾರ್ವಜನಿಕರು ಉಪಸ್ಥಿತರಿದ್ದರು.ಶಿರ್ವ ಗ್ರಾ.ಪಂ.ಸದಸ್ಯೆ ವೈಲೆಟ್ ಕ್ಯಾಸ್ತಲಿನೊ ನಿರೂಪಿಸಿ, ವಂದಿಸಿದರು