Advertisement

ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಘಟನೆ

02:09 AM Jun 10, 2019 | Sriram |

ಉತ್ತರ ಪ್ರದೇಶದ ಅಲಿಗಢದಲ್ಲಿ ಎರಡು ವರ್ಷದ ಬಾಲಕಿಯನ್ನು ಬರ್ಬರವಾಗಿ ಸಾಯಿಸಿದ ಘಟನೆ ಮಾನವೀಯತೆಯ ಮೇಲೆ ಎಸಗಿದ ಮಾರಕ ಆಕ್ರಮಣ. ಏನೂ ಅರಿಯದ ಮುಗ್ಧ ಬಾಲೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಹಿಂಸಿಸಿ ಕೊಂದ ಘಟನೆಯ ವಿವರಗಳನ್ನು ಕೇಳುವಾಗ ಕರುಳು ಕಿತ್ತು ಬರುತ್ತದೆ. ಹೆತ್ತವರು ಮಾಡಿದ 10,000 ರೂ. ಸಾಲವನ್ನು ತೀರಿಸಿಲ್ಲ ಎಂಬ ಕಾರಣಕ್ಕೆ ಈ ಬಾಲಕಿಯನ್ನು ಅಪಹರಿಸಿ ಸಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಮೊಹಮ್ಮದ್‌ ಜಾಹೀದ್‌ ಸೇರಿ ಕೆಲವರನ್ನು ಬಂಧಿಸಲಾಗಿದೆ. ಇದೇ ಮಾದರಿಯ ಇನ್ನೊಂದು ಘಟನೆ ಶನಿವಾರ ರಾತ್ರಿ ಮಧ್ಯ ಪ್ರದೇಶದ ಭೋಪಾಲದಲ್ಲಿ ಸಂಭವಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಮನೆ ಪಕ್ಕದ ಅಂಗಡಿಗೆಂದು ಹೋದ ಎಂಟರ ಹರೆಯದ ಬಾಲಕಿಯ ಶವ ಮರುದಿನ ಚರಂಡಿಯಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅತ್ಯಾಚಾರ ಎಸಗಿದ ಬಳಿಕ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Advertisement

ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾದಲ್ಲೂ ಇದೇ ಮಾದರಿಯ ಘಟನೆಯೊಂದು ಸಂಭವಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತಾಗಿತ್ತು.ದೇಶದ ಅಂತಃಕರಣವನ್ನು ಕಲಕಿದ ಘಟನೆಗಳಿವು. ಪ್ರತಿ ಘಟನೆ ಸಂಭವಿಸಿದಾಗಲೂ ಆಡಳಿತಾರೂಢರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ವಾಗ್ಧಾನ ನೀಡುತ್ತಾರೆ, ಆರೋಪಿಗಳು ಎಲ್ಲೇ ಅಡಗಿಕೊಂಡಿದ್ದರೂ ಬಿಡುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಆದರೆ ಘಟನೆ ಜನಮಾನಸದಿಂದ ಮರೆಯಾದ ಬಳಿಕ ಎಲ್ಲವೂ ಮಾಮೂಲು ಸ್ಥಿತಿಗೆ ಮರಳುತ್ತದೆ. ಮತ್ತೂಮ್ಮೆ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಾದರೆ ಮತ್ತೂಂದು ಘಟನೆ ಸಂಭವಿಸಬೇಕು.ವ್ಯವಸ್ಥೆಯ ಈ ಚಲ್ತಾ ಹೈ ಧೋರಣೆಯೇ ಪದೇ ಪದೇ ಈ ಮಾದರಿಯ ಪಾಶವಿ ಕೃತ್ಯಗಳು ಸಂಭವಿಸಲು ಒಂದು ಕಾರಣ.

ಬರೀ 10,000 ರೂ.ಗಾಗಿ ಮಗುವೊಂದನ್ನು ಚಿತ್ರಹಿಂಸೆ ನೀಡಿ ಸಾಯಿಸುವಷ್ಟು ಕ್ರೌರ್ಯ ಮನುಷ್ಯನಲ್ಲಿ ಇರುವುದಾದರೂ ಹೇಗೆ ಸಾಧ್ಯ? ಸಮಾಜದಲ್ಲಿ ಮಾನವೀಯತೆಯೆಂಬುದು ಸತ್ತು ಹೋಗಿದೆಯೇ? ಆಗಾಗ ಈ ಮಾದರಿಯ ಘಟನೆಗಳು ಸಂಭವಿಸಿದರೂ ನಮ್ಮ ವ್ಯವಸ್ಥೆಯೇಕೆ ಜಡವಾಗಿದೆ? ಅಲಿಗಢ ಪ್ರಕರಣದಲ್ಲಿ ತಡವಾಗಿ ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಅನ್ವಯಿಸಲಾಗಿದೆ ಹಾಗೂ ಕರ್ತವ್ಯಲೋಪದ ಆರೋಪದಲ್ಲಿ ಐವರು ಪೊಲೀಸರನ್ನು ಅಮಾನತಿನಲ್ಲಿಡಲಾಗಿದೆ.

ರಾಷ್ಟ್ರೀಯ ಅಪರಾಧ ಬ್ಯೂರೊ ಬಿಡುಗಡೆಗೊಳಿಸಿದ ದಾಖಲೆಗಳ ಪ್ರಕಾರ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಸಂಖ್ಯೆ ಶೇ. 11 ಹೆಚ್ಚಾಗಿದೆ. 2006ರಿಂದ 2016ರ ದಾಖಲೆಗಳನ್ನು ಪರಿಶೀಲಿಸಿದರೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ. 500 ಹೆಚ್ಚಾಗಿರುವುದು ಕಂಡು ಬರುತ್ತದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಬಿಹಾರಗಳಂಥ ರಾಜ್ಯಗಳು ದೌರ್ಜನ್ಯಗಳ ಪಟ್ಟಿಯಲ್ಲಿ ಮೇಲಿನ ಸ್ಥಾನಗಳಲ್ಲಿವೆ. ಪ್ರತಿ ಮೂರು ಪ್ರಕರಣಗಳ ಪೈಕಿ ಒಂದು ಅತ್ಯಾಚಾರವಾಗಿರುತ್ತದೆ ಎನ್ನುತ್ತದೆ ಈ ವರದಿ. ಹೀಗಿದ್ದರೂ ಪೊಲೀಸರ ಧೋರಣೆಯಲ್ಲಿ ಬದಲಾವಣೆ ಕಾಣುತ್ತಿಲ್ಲ.

ಅಲಿಗಢ ಪ್ರಕರಣಕ್ಕೆ ವ್ಯಕ್ತವಾಗುತ್ತಿರುವ ಆಕ್ರೋಶ ಸಹಜವಾದದ್ದು. ಆದರೆ ಈ ಆಕ್ರೋಶ ವ್ಯವಸ್ಥೆಯಲ್ಲಿ ಏನಾದರೂ ಗುಣಾತ್ಮಕವಾದ ಬದಲಾವಣೆ ತರಲು ಸಾಧ್ಯವಾದರೆ ಮಾತ್ರ ಅರ್ಥಪೂರ್ಣ. ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಯುವ ಸಲುವಾಗಿ 2002ರಲ್ಲೇ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ರಚಿಸಿತ್ತು. ಆದರೆ ರಾಷ್ಟ್ರೀಯ ಮಾನವಾಧಿಕಾರ ಆಯೋಗಕ್ಕೆ ಮಕ್ಕಳ ನಾಪತ್ತೆ ಪ್ರಕಣಗಳನ್ನು ಪರಿಶೀಲಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ನಿಠಾರಿ ಪ್ರಕರಣವೇ ಸಂಭವಿಸಬೇಕಾಯಿತು. ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ವೆಬ್‌ ಪೋರ್ಟಲ್ ಅಗತ್ಯ ಎಂದು 2009ರಲ್ಲಿ ಮಕ್ಕಳ ಮತ್ತು ಮಹಿಳಾ ಸಚಿವಾಲಯ ಮನಗಂಡಿತು. ಇದು ಕಾರ್ಯರೂಪಕ್ಕೆ ಬರಲು 4 ವರ್ಷ ಬೇಕಾಯಿತು. ವ್ಯವಸ್ಥೆಯೇ ಬಸವನ ಹುಳುವಿನ ವೇಗದಲ್ಲಿ ಚಲಿಸುತ್ತಿರಬೇಕಾದರೆ ಮಕ್ಕಳು ನಾಪತ್ತೆಯಾದ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೇ ಇರುವುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಒಂದು ನಾಗರಿಕ ಸಮಾಜವಾಗಿ ನಾವು ವಿಫ‌ಲವಾದಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next