Advertisement

ನಗರದ ಏಕೈಕ ಸಂತೆ; 5 ದಶಕಗಳ ಇತಿಹಾಸದ “ಬಿಕರ್ನಕಟ್ಟೆ ಸಂತೆ’ ಹೆದ್ದಾರಿ ಪಾಲು?

06:05 PM Feb 26, 2024 | Team Udayavani |

ಬಿಕರ್ನಕಟ್ಟೆ: ಸುಮಾರು ಐದು ದಶಕಗಳ ಇತಿಹಾಸವಿರುವ, ಮಂಗಳೂರು ನಗರದ ವ್ಯಾಪ್ತಿಯ “ಏಕೈಕ ಸಂತೆ’ ಎಂದು ಹೆಸರು ಪಡೆದ ಬಿಕರ್ನಕಟ್ಟೆ ಕೈಕಂಬದ ಶನಿವಾರ ಸಂತೆ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಕಾರಣಕ್ಕೆ ಬಲಿಯಾಗುವ ಸಾಧ್ಯತೆ ದಟ್ಟವಾಗಿದೆ.

Advertisement

ಸಂತೆ ನಡೆಯುವ ಮೈದಾನ ರಾ.ಹೆ.73 ಮತ್ತು ರಾ.ಹೆ. 169 ಸಂಧಿಸುವ ಪ್ರದೇಶದಲ್ಲಿದೆ. ರಾ.ಹೆ.169ರ ಮಂಗಳೂರು – ಕಾರ್ಕಳ ರಸ್ತೆ ವಿಸ್ತರಣೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಕುಡುಪು ವರೆಗೆ ಕಾಮಗಾರಿ ನಡೆಯುತ್ತಿದೆ. ಪದವು ಗ್ರಾಮದ ಭೂ ಸ್ವಾಧೀನಕ್ಕೆ
ಸಂಬಂಧಿಸಿದಂತೆ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿರುವಕಾರಣದಿಂದ ಈಗ ಯಾವುದೇ ಬೆಳವಣಿಗೆ ನಡೆದಿಲ್ಲ. ಸದ್ಯದ ಲೆಕ್ಕಾಚಾರದಂತೆ ಸಂತೆ ಇರುವ ಜಾಗ ರಸ್ತೆ ವಿಸ್ತರಣೆಗೆ ಮಾರ್ಕಿಂಗ್‌ ಮಾಡಲಾಗಿದೆ.

ನಗರದ ಏಕೈಕ ಸಂತೆ
ಪ್ರಸ್ತುತ ಸಂತೆ ನಡೆಯುವ ಸ್ಥಳವನ್ನು ಬಿಟ್ಟು ಅಕ್ಕ ಪಕ್ಕ ಬೇರೆಲ್ಲೂ ಸೂಕ್ತ ಸ್ಥಳವಿಲ್ಲ. ಬೇರೆ ಕಡೆ ಸಿಕ್ಕರೂ ಈಗಿರುವಷ್ಟು ಗ್ರಾಹಕರು ಬರುತ್ತಾರೆ ಎನ್ನಲು ಸಾಧ್ಯವಿಲ್ಲ. ಇದು ವ್ಯಾಪಾರಿ, ಗ್ರಾಹಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಾಲ್‌ ಸಂಸ್ಕೃತಿ, ಪ್ರತಿರಸ್ತೆಯಲ್ಲೂ ಸೂಪರ್‌ ಬಜಾರ್‌ಗಳು, ತರಕಾರಿ-ದಿನಸಿ ಸಾಮಗ್ರಿ ಆನ್‌ಲೈನ್‌ ಮೂಲಕ ಮನೆಗೇ ನೇರವಾಗಿ
ಬರುವಂತಹ ಈ ಕಾಲಘಟ್ಟದ ದಲ್ಲಿಯೂ ಬಿಕರ್ನನಟ್ಟೆ ಕೈಕಂಬದಲ್ಲಿ ನಗರದ ಏಕೈಕ ವಾರದ ಸಂತೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸುಮಾರು ಅರ್ಧ ಶತಮಾನದ ಇತಿಹಾಸವಿರುವ ಸಂತೆಯಲ್ಲಿ ಒಂದೇ ದಿನ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ನಡೆಯುವ ಮೂಲಕ ನಗರದ ಆರ್ಥಿಕ ವಹಿವಾಟಿನ ಮುಖ್ಯ ಕೇಂದ್ರವಾಗಿದೆ.

ಸಂತೆ ಆರಂಭವಾದದ್ದು ಹೇಗೆ?
ಬಿಕರ್ನಕಟ್ಟೆ ಪ್ರದೇಶದಲ್ಲಿ ಹಿಂದೆ ವಿವಿಧ ಕಾರ್ಖಾನೆಗಳಿತ್ತು. ಇದರಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶನಿವಾರ ಸಂಬಳದ ದಿನವಾದ್ದರಿಂದ ಆ ಕಾಲದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ “ಶನಿವಾರ ಸಂತೆ’ ಇಂದು ನಗರದಲ್ಲೇ ಪ್ರಸಿದ್ಧಿ ಪಡೆದಿದೆ. ಹೊರ ಜಿಲ್ಲೆಯವರು ತರಕಾರಿ, ಹಣ್ಣುಗಳನ್ನು ತಂದು ವ್ಯಾಪಾರ ಮಾಡುವವರು ಸಹಿತ ಸ್ಥಳೀಯ ವ್ಯಾಪಾರಿಗಳೂ ಇಲ್ಲಿದ್ದಾರೆ.

Advertisement

ಏನೆಲ್ಲ ಇವೆ?
ಸಂತೆಯಲ್ಲಿ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳು ಮಾತ್ರವಲ್ಲದೆ ದಿನಸಿ ಸಾಮಾನು, ತಿಂಡಿಗಳು, ಒಣ ಮೀನು, ಮೊಟ್ಟೆ, ಊರಿನ ತರಕಾರಿ, ಬಟ್ಟೆ. ಚಪ್ಪಲಿ, ಫ್ಯಾನ್ಸಿ ವಸ್ತುಗಳು, ಪ್ಲಾಸ್ಟಿಕ್‌ ಸಾಮಗ್ರಿಗಳು ಸಹಿತ ಎಲ್ಲ ರೀತಿಯ ವಸ್ತುಗಳು ದೊರೆಯುತ್ತವೆ. ಬೆಲೆಯಲ್ಲೂ ಚೌಕಾಶಿ ಸಾಮಾನ್ಯ. ಶನಿವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೂ ನಿರಂತರ ವಹಿವಾಟು ನಡೆಯುತ್ತದೆ. ವ್ಯಾಪಾರಿಗಳಲ್ಲೂ ಸೌಹಾರ್ದ ವಾತಾವರಣವಿದೆ.

ಸಂತೆಯ ಹಿರಿಯ ವ್ಯಾಪಾರಿಗಳಲ್ಲಿ ಓರ್ವರಾದ ಬೈಕಂಪಾಡಿಯ ಪುಷ್ಪಾ ಅವರು “ಉದಯವಾಣಿ ಸುದಿನ’ದ ಜತೆ ಮಾತನಾಡಿ, 50 ವರ್ಷಗಳಿಂದ ಸಂತೆಯಲ್ಲಿ ಒಣ ಮೀನು ವ್ಯಾಪಾರ ಮಾಡುತ್ತಿದ್ದೇನೆ. ಹಿಂದೆ ಇತರ ಸಂತೆಗಳಿಗೂ ಹೋಗುತ್ತಿದ್ದೆ, ಈಗ ಬಜಪೆ, ಇಲ್ಲಿಗೆ ಮಾತ್ರ ಬರುತ್ತೇನೆ. ಒಣ ಮೀನಿಗೆ ಈಗ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ವಾಹನಕ್ಕೆ ದುಬಾರಿ ಬಾಡಿಗೆ ಕೊಟ್ಟು ಮೀನು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಉತ್ತಮ ಬೇಡಿಕೆ
ನಾವು ಸುಮಾರು 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು ತಂದು ಮಾರಾಟ
ಮಾಡುತ್ತಿದ್ದೇವೆ. ರಾಸಾಯನಿಕಗಳನ್ನು ಬಳಸದ ಪರಿಶುದ್ಧ ತರಕಾರಿಯಾಗಿರುವುದರಿಂದ ಗ್ರಾಹಕರಿಂದ ಬೇಡಿಕೆಯೂ ಉತ್ತಮವಾಗಿದೆ. ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಿದರೆ ಅನುಕೂಲ ಎನ್ನುತ್ತಾರೆ ಊರಿನ ತರಕಾರಿ ವ್ಯಾಪಾರಿ ವಾಲೆಟ್‌ ಸಲ್ಡಾನ್ಹಾ, ಮೇರ್ಲಪದವು.

ಸಮಸ್ಯೆಗಳು ಹಲವು
ಒಂದೆಡೆ ಹೆದ್ದಾರಿಗಾಗಿ ಸಂತೆ ಜಾಗ ನಿಗದಿಯಾಗಿರುವ ಆತಂಕದ ಮಧ್ಯೆಯೇ ಸಂತೆ ಮೈದಾನ ತಗ್ಗು ಪ್ರದೇಶದಲ್ಲಿ ಇರುವುದರಿಂದ
ಮಳೆಗಾಲದಲ್ಲಿ ಹರಿದು ಬರುವ ನೀರಿನಿಂದ ನೆಲದಲ್ಲಿ ಕುಳಿತು ವ್ಯಾಪಾರ ಮಾಡುವವರಿಗೆ ಸಮಸ್ಯೆ ಇದೆ. ಬಿಸಿಲಿಗೆ ಅವರವರ ವ್ಯಾಪ್ತಿಗೆ ಟಾರ್ಪಾಲು ಹಾಕಿ ವ್ಯಾಪಾರ ಮಾಡಬೇಕಾಗಿದೆ. ನೆಲಕ್ಕೆ ಇಂಟರ್‌ಲಾಕ್‌, ಮೇಲ್ಭಾಗದಲ್ಲಿ ಛಾವಣಿ ಹಾಕಿದರೆ ಅನುಕೂಲ.

ಜತೆಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಿದ್ಯುತ್‌ದೀಪಗಳನ್ನು ಅಳವಡಿಸಬೇಕು ಎನ್ನುತ್ತಾರೆ ವ್ಯಾಪಾರಿಗಳು. ಎರಡು ಹೆದ್ದಾರಿ ಹಾದು ಹೋಗುವುದರಿಂದ ಪಾರ್ಕಿಂಗ್‌ಗೆ ಸ್ಥಳಾವಕಾಶವಿಲ್ಲ. ಫ್ಲೈ ಓವರ್‌ ಅಡಿಯಲ್ಲಿ ಪಾರ್ಕಿಂಗ್‌ ಮಾಡಬೇಕು ಎನ್ನುವುದು ಗ್ರಾಹಕರ ಮಾತು.

ಸಂತೆ ತೆರವಾಗುವ ಆತಂಕ
ರಾ.ಹೆ. ವಿಸ್ತರಣೆಯಿಂದಾಗಿ ಬಿಕರ್ನಕಟ್ಟೆ ಕೈಕಂಬ ಸಂತೆ ತೆರವಾಗುವ ಆತಂಕವಿದೆ. ಆದ್ದರಿಂದ ಸದ್ಯ ಕೆಲವೊಂದು ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ತೊಡಕಾಗಿದೆ. ಸಂತೆಗೆ ಪರ್ಯಾಯ ಸ್ಥಳದ ಬಗ್ಗೆ ಅವಲೋಕನ
ನಡೆಸಲಾಗುವುದು.
-ಕಿಶೋರ್‌ ಕೊಟ್ಟಾರಿ, ಮನಪಾ ಸದಸ್ಯ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next