Advertisement

ಅಹಿಂಸೆ ಹರಿಕಾರನಿಗೆ ನಮಿಸಿದ ನಗರ

01:01 AM Oct 03, 2019 | Lakshmi GovindaRaju |

ಬೆಂಗಳೂರು: ಸತ್ಯ ಹಾಗೂ ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರು ಹೆಮ್ಮ ಪಡುವ ವಿಚಾರ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಗಾಂಧಿ ಜಯಂತಿ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳ ಪದಗ್ರಹಣ ಹಾಗೂ “ಮಹಾತ್ಮ ಗಾಂಧೀಜಿ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ, ಅವರ ಉದಾತ್ತ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಲಹೆ ನೀಡಿದರು.

ಅಹಿಂಸಾ ಚಳವಳಿ ಮೂಲಕ ಜಗತ್ತೇ ಬೆರಗಾಗುವಂತೆ ಮಾಡಿದ ಮಹಾತ್ಮನ ಮಹತ್ತರ ಕೆಲಸದಿಂದಾಗಿ ಇಂದು ನಾವು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿದ್ದೇವೆ. ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹನ್‌ ವ್ಯಕ್ತಿ ಗಾಂಧೀಜಿ ಎಂದು ಬಣ್ಣಿಸಿದರು.

ಗೌರಿಗದ್ದೆ ಮಠದ ವಿನಯ ಗುರೂಜಿ ಮಾತನಾಡಿ, ಅನ್ನ ನೀಡುವ ರೈತರು ಮತ್ತು ಗೋವಿನ ಋಣ ಮರೆಯಬಾರದು ನಮಗೆ ಮಾತೃ ಮತ್ತು ಪಿತೃಋಣವಿದೆ. ಅನ್ನ ನೀಡುವ ರೈತರು ಮತ್ತು ಹಾಲು ಕೊಡುವ ತಾಯಿ ಗೋವಿನ ಋಣ ನಮ್ಮ ಮೇಲಿದೆ. ಅದನ್ನು ನಾವಿಗ ಮರೆತಿದ್ದೇವೆ. ತಾಯಿಯನ್ನು ಕೊಲ್ಲುವುದು ಎಷ್ಟು ಪಾಪವೋ ಗೋವನ್ನು ಹತ್ಯೆ ಮಾಡುವುದು ಅದಕ್ಕಿಂತ ಮಹಾಪಾಪ. ಗಾಂಧಿ ಜಯಂತಿ ಬರೀ ಕಾರ್ಯಕ್ರಮವಾದೇ ಸತ್ಯನಾರಾಯಣ ವ್ರತದ ರೀತಿ ಆಚರಿಸಬೇಕು. ಗಾಂಧಿ ಎಂದರೆ ಸತ್ಯ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಾತನಾಡಿ, ಗಾಂಧೀಜಿಯವರನ್ನು ಎರಡು ಬಾರಿ ನೋಡಿದ್ದೇನೆ. ಮಾರ್ಟಿನ್‌ ಲೂಥರ್‌ ಕಿಂಗ್‌, ಗಾಂಧೀಜಿಯವರ ತತ್ವದಿಂದ ಪ್ರೇರಿತರಾಗಿ ವರ್ಣಭೇದ ನೀತಿ ವಿರುದ್ಧ ಲೂಥರ್‌ ಕಿಂಗ್‌ ಹೊರಾಟ ಮಾಡಿದರು ಎಂದು ಹೇಳಿದರು. ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಅರವಿಂದ ಲಿಂಬಾವಳಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಇದ್ದರು.

Advertisement

ಗಣ್ಯರಿಗೆ ಮಹತ್ಮ ಗಾಂಧಿ ಪ್ರಶಸ್ತಿ: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಿಸರವಾದಿ ಸಾಲುಮರದ ತಿಮ್ಮಕ್ಕ, ಆದಾಯ ತೆರಿಗೆ ಇಲಾಖೆ ನಿವೃತ್ತ ಡಿಜಿ ಬಿ.ಆರ್‌.ಬಾಲಕೃಷ್ಣನ್‌, ಭಾರತ ಸೇವಾದಳದ ಉಪಾಧ್ಯಕ್ಷ ಐ.ಬಿ.ಶಂಕರ್‌, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಸಂಸ್ಥಾಪಕ ಡಾ.ಎಚ್‌.ಆರ್‌.ನಾಗೇಂದ್ರ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾಂಧೀಜಿಯವರು ಧರ್ಮ ಮೀರದೇ ಮಾತನಾಡುತ್ತಿದ್ದರು. ಪಾಕಿಸ್ತಾನೀಯರು ಧರ್ಮಕ್ಕೆ ಅನುಣವಾಗಿ ನಡೆದುಕೊಳ್ಳಲಿಲ್ಲ. ಅದರ ಫಲ ಅನುಭವಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಬ್ರಾಹ್ಮಣ ಸಮುದಾಯವೇ ಹೆಚ್ಚಾಗಿದ್ದರೂ ಹೆದರಿ ಮತಾಂತರವಾಗಿದ್ದರು.
-ವಿನಯ್‌ ಗುರೂಜಿ

ಬಾಪು ಆಶಯದಂತೆ ಸ್ವಚ್ಛತೆ ಕಾಪಾಡೋಣ
ಬೆಂಗಳೂರು: ನಗರದಲ್ಲಿ ಸ್ವಚ್ಛತೆ ಕಾಪಾಡುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ಬಿಬಿಎಂಪಿ, ಯುನೈಟೆಡ್‌ ವೇ ಇಂಡಿಯಾ ಮತ್ತು ಗೋ ನೇಟಿವ್‌ ಹಾಗೂ ಹಸಿರು ದಳ ಸಂಸ್ಥೆಗಳ ಸಹಯೋಗದಲ್ಲಿ ಮತ್ತಿಕೆರೆಯ ಜಯರಾಮ್‌ ಕೊಳೆಗೆರೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸ್ವಚ್ಛತಾ ಅಭಿಯಾನ ಹಾಗೂ “ಪ್ಲಾಗ್‌ ರನ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ಮೂಲ ಆಶಯದಂತೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಹಾಗೂ ಮಹಾತ್ಮ ಗಾಂಧಿ ಅವರ ಸ್ವಚ್ಚತಾ ಕಲ್ಪನೆಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಮೊದಲ ಬಾರಿ ಪ್ಲಾಗ್‌ರನ್‌ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ದೇಶದ 50ಕ್ಕೂ ಹೆಚ್ಚು ನಗರದಲ್ಲಿ ಪ್ಲಾಗ್‌ರನ್‌ ಕಾರ್ಯಕ್ರಮ ನಡೆಯುತ್ತಿದೆ. ಇದು ಬೆಂಗಳೂರಿನ ಹೆಮ್ಮೆಯ ಸಂಗತಿಯಾಗಿದೆ. ನಗರದ ಅನೇಕ ಕಡೆ ನಡೆಯುತ್ತಿರುವ ಪ್ಲಾಗ್‌ ರನ್‌ಗೆ ಸಾವಿರಾರು ಜನ ಭಾಗವಹಿಸಿದ್ದಾರೆ. ಈ ಅಭಿಯಾನ ಒಂದು ದಿನಕ್ಕೆ ಸೀಮಿತವಾಗದೆ ವರ್ಷದ 365 ದಿನವೂ ಕಾರ್ಯಕ್ರಮ ನಡೆಸುತ್ತೇವೆ ಎಂದು ಹೇಳಿದರು.

ನಗರದ 43 ಕಡೆ ಪ್ಲಾಗ್‌ ರನ್‌: ಬೆಂಗಳೂರು ರೈಲು ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ, ಇಂದಿರಾ ನಗರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಸಿಲ್ಕ್ ಬೋರ್ಡ್‌, ಯಶವಂತಪುರ, ದಾಸರಹಳ್ಳಿ ಕೆರೆ, ಪ್ರಮುಖ್ಯ ಮೆಟ್ರೋ ನಿಲ್ದಾಣಗಳು, ಆಟದ ಮೈದಾನ, ಶಾಲಾ- ಕಾಲೇಜು ಸೇರಿ ಒಟ್ಟು 43 ಸ್ಥಳಗಳಲ್ಲಿ ಪ್ಲಾಗ್‌ ರನ್‌ ನಡೆಸಲಾಯಿತು. ಸ್ವಯಂ ಸೇವಕರು 3 ಕಿ.ಮೀ ಜಾಗೃತಿ ಓಟ ನಡೆಸಿ ರಸ್ತೆ, ಪಾದಚಾರಿ ಮಾರ್ಗ, ಪಾರ್ಕ್‌  ಹಾಗೂ ಆಟದ ಮೈದಾನ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಬಿದ್ದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಕವರ್‌,

ನೀರು ಹಾಗೂ ತಂಪು ಪಾನೀಯದ ಬಾಟಲ್‌ಗ‌ಳನ್ನು ಆಯ್ದು ತರುವ ಮೂಲಕ ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಗರದ 43 ಸ್ಥಳದಲ್ಲಿ ನಡೆಸಿದ ಪ್ಲಾಗ್‌ರನ್‌ ಅಭಿಯಾನದಲ್ಲಿ 8 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು 7.5 ಟನ್‌ ಪ್ಲಾಸ್ಟಿಕ್‌ ಸಂಗ್ರಹಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಮೂಹಿಕ ಸ್ವಚ್ಛತಾ ಅಭಿಯಾನದಲ್ಲಿ ಹಸಿರು ನ್ಯಾಯಾಧಿಕರಣ ರಾಜ್ಯ ಘಟಕದ ಅಧ್ಯಕ್ಷ ನ್ಯಾ.ಸುಭಾಷ್‌.ಬಿ.ಆದಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಬಿಬಿಎಂಪಿಯ ಆಯುಕ್ತ ಅನಿಲ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

ಸಹಿಷ್ಣುತೆ ತತ್ವ ಎಂದಿಗೂ ಪ್ರಸ್ತುತ
ಬೆಂಗಳೂರು: ಸಹಿಷ್ಣುತೆ ಸೇರಿದಂತೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಹಾಗೂ ತತ್ವಗಳು ಎಂದಿಗೂ ಪ್ರಸ್ತುತ ಎಂದು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಎ.ಎಸ್‌.ಓಕಾ ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ, ಕರ್ನಾಟಕ ಬಾರ್‌ ಕೌನ್ಸಿಲ್‌ ಹಾಗೂ ಬೆಂಗಳೂರು ವಕೀಲರ ಸಂಘದಿಂದ ಬುಧವಾರ ಹೈಕೋರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಹಿಂಸೆ ಜತೆಗೆ ಮಹಾತ್ಮ ಗಾಂಧೀಜಿ ಸಹಿಷ್ಣುತೆ ತತ್ವವನ್ನು ಬಹಳ ಪ್ರಬಲವಾಗಿ ಪ್ರತಿಪಾದಿಸಿ, ಅದರಂತೆ ಸ್ವತಃ ನಡೆದುಕೊಂಡರು. ಈ ಬಗ್ಗೆ ಅವರು ಹರಿಜನ ಹಾಗೂ ಯಂಗ್‌ ಇಂಡಿಯಾ ಪತ್ರಿಕೆಗಳಲ್ಲಿ ಯಥೇಚ್ಛ ಲೇಖನಗಳನ್ನು ಬರೆದಿದ್ದಾರೆ. ಅದನ್ನು ಇಂದಿನ ಯುವಪೀಳಿಗೆ ಓದಬೇಕು. ಅದರಲ್ಲೂ 2019ರ ಈ ವರ್ಷದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ವಿವಿಧ ಧರ್ಮ ಹಾಗೂ ವರ್ಗಗಳ ಭಾರತದಲ್ಲಿ ಸಹಿಷ್ಣುತೆಯ ಪಾಲನೆ, ಪ್ರಸಾರ ಹಾಗೂ ಪ್ರತಿಪಾದನೆ ಪ್ರತಿಯೊಬ್ಬರ ಹೊಣೆಯಾಗಿದೆ. ಅವರ ತ್ಯಾಗ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಮಾತನಾಡಿದರು. ಡಾ.ಗುರುರಾಜ ಕರ್ಜಗಿ, ಪ್ರೊ. ಮೀನಾ ದೇಶಪಾಂಡೆ, ಪ್ರೊ. ಜಿ.ಬಿ. ಬಸವರಾಜು ಮಹಾತ್ಮಾ ಗಾಂಧೀಜಿಯವರ ಮೌಲ್ಯ ಮತ್ತು ತತ್ವಗಳ ಪ್ರಸ್ತುತತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ನ್ಯಾ. ಅರವಿಂದ್‌ ಕುಮಾರ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ್‌ ಕೆ. ನಾವದಗಿ, ಬಾರ್‌ ಕೌನ್ಸಿಲ್‌ ಅಧ್ಯಕ್ಷ ಕೆ.ಬಿ. ನಾಯಕ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀದೇವಿ ಎಸ್‌. ಅಂಗಡಿ ಮತ್ತಿತರರು ಇದ್ದರು.

ಮನದಲ್ಲೇ ಗಾಂಧೀಜಿ ಪೂಜಿಸಿ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಮನಸಿನಲ್ಲಿಟ್ಟು ಪೂಜಿಸಿ. ಆದರೆ ಗುಡಿಕಟ್ಟಿ ಆರಾಧಿಸಬೇಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದ್ದಾರೆ. ಸಪ್ನ ಬುಕ್‌ ಹೌಸ್‌, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಸಿ.ಎನ್‌.ರಾಮಚಂದ್ರನ್‌ ಅವರ “ಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇತ್ತೀಚೆಗೆ ಕೆಲವರು ಗೋಡ್ಸೆಯ ದೇವಾಲಯ ಕಟ್ಟಲು ಹೊರಟಿದ್ದಾರೆ. ಆದರೆ ಗಾಂಧೀಜಿ ಅನುಯಾಯಿಗಳು ಬಾಪು ಅವರನ್ನು ದೇವಸ್ಥಾನದಲ್ಲಿಟ್ಟು ಪೂಜಿಸಬೇಡಿ. ಅವರ ಆದರ್ಶ ಗುಣಗಳನ್ನು ಪೂಜಿಸಿ, ಆರಾಧಿಸಿ ಮುಂದೆ ಸಾಗಿ ಎಂದರು. ದಿಢೀರ್‌ ಶ್ರೀಮಂತರಾಗಲು ಬೆಟ್ಟಗುಡ್ಡಗಳನ್ನು ಕರಗಿಸುವ ಪ್ರವೃತ್ತಿ ಸಾಗಿದೆ. ಇದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ. ಪ್ರಸ್ತುತ ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದ್ದು, ಜನ ಕುಂಭಕರ್ಣ ನಿದ್ದೆ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಬಲಹೀನವಾಗಿವೆ. ಹೀಗಾದರೆ, ಪ್ರಜಾಪ್ರಭುತ್ವದ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕವಿ ಜಯಂತ ಕಾಯ್ಕಿಣಿ ಮಾತನಾಡಿ, “ಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯ’ ಕೃತಿಯು ಗಾಂಧೀಜಿ ಅವರ ಸಂವಾದದ ರೀತಿಯಲ್ಲಿದೆ. ಗಾಂಧೀಜಿ ಕುರಿತು ಹಲವು ಹೆಸರಾಂತ ಸಾಹಿತಿಗಳು, ಲೇಖಕರು ಬರೆದಿದ್ದು ಅದನ್ನು ಒಟ್ಟುಗೂಡಿಸಿ ಪುಸ್ತಕ ಹೊರತರಲಾಗಿದೆ. ಗಾಂಧಿ ಕುರಿತ ಕವಿತೆಗಳಿಗೂ ಆದ್ಯತೆ ನೀಡಲಾಗಿದೆ. ಹೀಗಾಗಿ ಈ ಕೃತಿ ವಿಶಿಷ್ಟ ಎನಿಸಿಕೊಳ್ಳುತ್ತದೆ ಎಂದರು. ಬರೋಡ ವಿವಿ ಪ್ರಾಧ್ಯಾಪಕ ಮತ್ತು ಕೃತಿಯ ಪ್ರಧಾನ ಸಂಪಾದಕ ಡಾ.ಗಣೇಶ ದೇವಿ ಮಾತನಾಡಿದರು. ಕಸಾಪ ಅಧ್ಯಕ್ಷ ಮನು ಬಳಿಗಾರ್‌, ಲೇಖಕ ಸಿ.ಎನ್‌.ರಾಮಚಂದ್ರನ್‌, ಸ್ವಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ, ದೊಡ್ಡೇಗೌಡ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next