ಮಹಾನಗರ: ಈಗಾಗಲೇ ಎಲ್ ಇಡಿ ಬಲ್ಬ್ ಅಳವಡಿಸಿ ಬೆಳಗಬೇಕಿದ್ದ ನಗರದಲ್ಲಿ ಇನ್ನೂ ಶೇ.90ರಷ್ಟು ಬಲ್ಬ್ ಅಳವಡಿಸಲು ಬಾಕಿ ಇದೆ. ಗಡುವು ಸಮೀಪಿಸುತ್ತಿದ್ದರೂ ಇನ್ನೂ ಆರಂಭಿಕ ಲಕ್ಷಣವೇ ಕಾಣಿಸುತ್ತಿಲ್ಲ. ಈ ಹಂತದಲ್ಲಿ ಮತ್ತೆ ಮೂರು ತಿಂಗಳು ಇಒಟಿ ನೀಡಬೇಕೆಂದು ಗುತ್ತಿಗೆ ಕಂಪೆನಿ ಮಂಗಳೂರು ಪಾಲಿಕೆಯನ್ನು ಕೇಳಿಕೊಂಡಿದೆ.
ಟೆಂಡರ್ ವಹಿಸಿಕೊಂಡ ಸಂಸ್ಥೆಯು ಕೋವಿಡ್ ನೆಪವನ್ನಿಟ್ಟು ಕೆಲವು ತಿಂಗಳ ಹಿಂದೆ ಇಒಟಿ (ಟೆಂಡರ್ ಪೂರ್ಣ ಅವಧಿಯ ವಿಸ್ತರಣೆಗೆ) ಕೇಳಿತ್ತು. ಈ ಕುರಿತಂತೆ ಮಂಗಳೂರು ಪಾಲಿಕೆಯಿಂದ ಕೆಯುಐಡಿಎಫ್‌ಸಿಗೆ ಪತ್ರ ಬರೆದು ಅನುಮತಿ ಗಿಟ್ಟಿಸಲಾಗಿತ್ತು. ಬಳಿಕ ಟೆಂಡರ್ ವಹಿಸಿದ ಸಂಸ್ಥೆಯು ಹಣಕಾಸಿನ ವ್ಯವಸ್ಥೆ ಮಾಡಿ ಕಾಮಗಾರಿ ಆರಂಭಿಸಬೇಕಿತ್ತು. ಮೂರು ತಿಂಗಳ ಇಒಟಿ ಅವಧಿ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇನ್ನೂ ಹಣಕಾಸು ಹೊಂದಿಸಲಾಗಿಲ್ಲ. ಇದೀಗ ಮತ್ತೆ ಮೂರು ತಿಂಗಳು ಇಒಟಿಯನ್ನು ಕೇಳಲಾಗಿದೆ.
ಈ ಯೋಜನೆಯ ಪ್ರಕಾರ 60 ಕೋಟಿ ರೂ. ವೆಚ್ಚದಲ್ಲಿ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದೆ. ನಗರದ 60 ವಾರ್ಡ್ ಗಳಲ್ಲಿ ಸುಮಾರು 66,000 ಎಲ್‌ಇಡಿ ಬೀದಿ ದೀಪ ಅಳವಡಿಸಬೇಕು. 2021ರ ಡಿಸೆಂಬರ್ ತಿಂಗಳಾಂತ್ಯಕ್ಕೆ ಅಳವಡಿಕೆ ಪೂರ್ಣಗೊಳ್ಳಬೇಕು. ಟೆಂಡರ್ ವಹಿಸಿದ ಸಂಸ್ಥೆ 7 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು. ಅದಕ್ಕೆಂದು 7 ವರ್ಷಗಳವರೆಗೆ ಪಾಲಿಕೆಯಿಂದ ತಿಂಗಳಿಗೆ ಸುಮಾರು 80 ಲಕ್ಷ ರೂ. ಇಎಂಐ ಸಂದಾಯವಾಗಲಿದೆ. ಆದರೆ ಗುತ್ತಿಗೆ ಅವಧಿ ಪೂರ್ಣಗೊಂಡು ವರ್ಷ ಸಮೀಪಿಸುತ್ತಿದೆ. ಆಯ್ದ ವಾರ್ಡ್ ಗಳಲ್ಲಿ ಸುಮಾರು 14,000 ಬೀದಿ ದೀಪ ಮಾತ್ರ ಅಳವಡಿಸಲಾಗಿದೆ. ಹಣಕಾಸಿನ ಮುಗ್ಗಟ್ಟು, ಉಪಕರಣದ ಕೊರತೆ ಸಹಿತ ವಿವಿಧ ನೆಪದಿಂದ ಕಾಮಗಾರಿ ಸದ್ಯಕ್ಕೆ ನಿಂತಿದೆ.
ಸದ್ಯದಲ್ಲಿ ಸಚಿವರ ಜತೆ ಮೀಟಿಂಗ್
ಮಂಗಳೂರಿನಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸುವ ಸಂಬಂಧ ಪಾಲಿಕೆ ಮತ್ತು ಗುತ್ತಿಗೆ ವಹಿಸಿದ ಸಂಸ್ಥೆಯೊಂದಿಗೆ ಸದ್ಯದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರೊಂದಿಗೆ ಮಾತುಕತೆ ನಡೆಯಲಿದೆ. ಮುಂದಿನ ಗಡುವು ನೀಡುವುದು ಸಹಿತ ಎಲ್‌ಇಡಿ ಅಳವಡಿಕೆಗೆ ಇರುವ ತೊಡಕುಗಳ ಕುರಿತು ಸಭೆಯಲ್ಲಿ ಪ್ರಸ್ತಾವವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.