Advertisement
ಶಿವರಾತ್ರಿ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ, ಜಯನಗರ, ಗಂಗಾನಗರ, ಕೆ.ಆರ್.ಮಾರುಕಟ್ಟೆ, ಸಂಜಯನಗರ ಮುಖ್ಯರಸ್ತೆ, ಚಾಮರಾಜಪೇಟೆ, ಕೆಂಗೇರಿ, ಜೆ.ಪಿ.ನಗರ, ಬನಶಂಕರಿ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಆಗತ್ಯ ವಸ್ತುಗಳ ಜತೆ ಹೂವು -ಹಣ್ಣು ಖರೀದಿಯಲ್ಲಿ ಜನ ನಿರತರಾಗಿದ್ದರು. ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರೆಗೆ ಹೆಚ್ಚಿನ ಬೇಡಿಕೆಯಿತ್ತು.
ತೆಂಗಿನ ಬೆಲೆ ಏರಿಕೆ: ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಬೆಲೆ ಗಗನಕೇರಿದೆ. ಸಣ್ಣ ಗಾತ್ರದ ತೆಂಗಿನ ಕಾಯಿಗೆ 22 ರೂ., ಮಧ್ಯಮ ಗಾತ್ರದ ತೆಂಗಿನ ಕಾಯಿಗೆ ರೂ.25 ಮತ್ತು ದೊಡ್ಡ ಗಾತ್ರದ ತೆಂಗಿನ ಕಾಯಿ 28 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಹೂವು ದುಬಾರಿ: ಮಾರುಕಟ್ಟೆಯಲ್ಲಿ ಈ ಹಿಂದೆ 300ರಿಂದ 400 ರೂ.ನಂತೆ ಮಾರಾಟವಾಗುತ್ತಿದ್ದ ಕನಕಾಂಬರ ಬೆಲೆ ದಿಢೀರ್ ದುಪ್ಪಟ್ಟಾಗಿದ್ದು ಪ್ರತಿ ಕೆಜಿಗೆ 500ರಿಂದ 600 ರೂ.ಗೆ ಏರಿತ್ತು. 300 ರೂ.ಇದ್ದ ಮಲ್ಲಿಗೆ ಮೊಗ್ಗು 400ರಿಂದ 500 ರೂ., 80 ರೂ.ಇದ್ದ ಸುಗಂಧರಾಜ 200 ರೂ.ಗೆ ಹಾಗೂ ಕಾಕಡ ಹೂ ಕೆಜಿಗೆ 350 ರೂ. ದರದಲ್ಲಿ ಮಾರಾಟ ಮಾಡಲಾಗಿದೆ ಎಂದು ಹೂವು ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ.ಎಂ.ದಿವಾಕರ್ ಮಾಹಿತಿ ನೀಡಿದ್ದಾರೆ.
Related Articles
ಬೆಂಗಳೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ವಿವಿಧ ಶಿವದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುನಿರೆಡ್ಡಿಲೇಔಟ್‌ನಲ್ಲಿ ಅದ್ವೆ„ತ ಕೇಂದ್ರದ ಉದ್ಘಾಟನೆ, ಅದ್ವೆ„ತ ಜ್ಯೋತಿ ಹಾಗೂ ಪಾದುಕೆ ಮೆರವಣಿಗೆ ನಡೆಯಲಿದೆ. ಗಿರಿನಗರದ ಶ್ರೀ ತಾರೆಮರದ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ವಿಜಯನಗರದ ಆರ್ಯವೈಶ್ಯ ಮಂಡಳಿ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು ಶ್ರೀ ಶಕ್ತೀಶ್ವರ ಸ್ವಾಮಿ ದರ್ಶನ ಏರ್ಪಡಿಸಿದೆ.
Advertisement
ರಾಜಾಜಿನಗರದ ಶ್ರೀಮಂಜುನಾಥೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಮೇಯರ್ ಜಿ.ಪದ್ಮಾವತಿ ಚಾಲನೆ ನೀಡುವರು. ಸಭಾ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್‌ಕುಮಾರ್, ಬಿಬಿಎಂಪಿ ಸದಸ್ಯೆ ಚಂದ್ರಕಲಾ ಗಿರೀಶ್, ಮಾಜಿ ಸದಸ್ಯ ರವೀಂದ್ರ ಮತ್ತಿತರು ಪಾಲ್ಗೊಳ್ಳುವರು. ಮಲ್ಲೇಶ್ವರಂನ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಗುಹಾಂತರ ದ್ವಾದಶ ಜ್ಯೋತಿರ್ಲಿಂಗ ದರ್ಶನ, ಪಂಚಾಮೃತ, ರುದ್ರಾಭಿಷೇಕ ನಡೆಯಲಿದೆ. ಕುಮಾರಸ್ವಾಮಿ ಬಡಾವಣೆಯ ವರಪ್ರದ ಶ್ರೀ ಅಭಯ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್‌ನಿಂದ ಶಿವರಾತ್ರಿ ಪ್ರಯುಕ್ತ ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.
ಗವೀಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಪಾಲ್ಗೊಳ್ಳಲಿದ್ದಾರೆ. ನಗರ್ತರಪೇಟೆಯ ಶ್ರೀನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜಾ ಕೈಂಕರ್ಯಗಳು. ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಮಹಾಶಿವರಾತ್ರಿ ಮಹೋತ್ಸವ-2017.ಗದ್ದುಗೆ ಮೇಲಿರುವ ಶಿವಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಮತ್ತು ಕ್ಷೀರಾಭಿಷೇಕ, ಸ್ಫಟಿಕ ಲಿಂಗ ದರ್ಶನ ನೆರವೇರಲಿದೆ.
ರಾಜ್ಯಾದ್ಯಂತ ಗಂಗಾ ಜಲ ವಿತರಣೆಬೆಂಗಳೂರು: ಮಹಾಶಿವರಾತ್ರಿ ಅಂಗವಾಗಿ ಹಿಮಾಲಯದಿಂದ ತರಿಸಲಾದ ಗಂಗಾಜಲವನ್ನು ರಾಜ್ಯದ ಶಿವನ ದೇವಾಲಯಗಳಿಗೆ ತಲುಪಿಸುವ ಕಾರ್ಯಕ್ಕೆ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಗುರುವಾರ ನಗರದಲ್ಲಿ ಚಾಲನೆ ನೀಡಿದರು. ಹಿಮಾಲಯದ ತಪ್ಪಲಿನಿಂದ 27,000 ಲೀಟರ್‌ನಷ್ಟು ಗಂಗಾಜಲ ಹೊತ್ತ ಟ್ಯಾಂಕರ್ ಲಾರಿ ಬೆಳಗ್ಗೆ ಗವಿಪುರದ ಧೋಂಡೂಸ ಕಲ್ಯಾಣ ಮಂಟಪ ತಲುಪಿತು. ಬಳಿಕ ಅಲ್ಲಿ ಟ್ಯಾಂಕರ್‌ನಲ್ಲಿದ್ದ ಗಂಗಾಜಲಕ್ಕೆ ಆನಂದ ಗುರೂಜಿ ಅವರಿಂದ ಪೂಜೆ ಸಲ್ಲಿಸುವ ಮೂಲಕ ಶಿವದೇವಾಲಯಗಳಿಗೆ ರವಾನೆ ಮಾಡಲಾಯಿತು. ಈ ಗಂಗಾಜಲವನ್ನು ಕ್ಯಾನ್‌ಗಳಲ್ಲಿ ತುಂಬಿ 28 ವಾಹನಗಳ ಮೂಲಕ ಮುಜರಾಯಿ ಇಲಾಖೆ ವ್ಯಾಪ್ತಿಯ ಮತ್ತು ಖಾಸಗಿ ಒಡೆತನದ ರಾಜ್ಯ ಮೂಲೆ ಮೂಲೆಯ ಒಟ್ಟು 3700 ಪುನಾರತನ ಶಿವ ದೇವಾಲಯಗಳಿಗೆ ತಲುಪಿಸಲಾಗುವುದು. ಶಿವರಾತ್ರಿ ದಿನವಾದ ಫೆ.24ರ ಶುಕ್ರವಾರ ಮುಂಜಾನೆ ವೇಳೆಗೆ ಗಂಗಾಜಲದ ಎಲ್ಲಾ ಶಿವ ದೇವಾಲಯಗಳಿಗೆ ತಲುಪಲಿದೆ. ಇದರೊಂದಿಗೆ ಶಿವನಿಗೆ ಗಂಗಾಜಲದ ಅಭಿಷೇಕ ಮತ್ತು ಭಕ್ತರಿಗೆ ಗಂಗಾಜಲದ ತೀರ್ಥಪ್ರಸಾದ ವಿನಿಯೋಗ ನಡೆಯುತ್ತಿದೆ ಎಂದು ಹೇಳಿದರು. ಗಂಗಾಧರೇಶ್ವರನಿಗೆ ಗಂಗಾಜಲ ಅಭಿಷೇಕ: ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಗುರುವಾರವೇ ಗಂಗಾಜಲದ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಶಿವರಾತ್ರಿಯಂದು ಮಾಂಸ ಮಾರಾಟ ನಿಷೇಧ
ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಶುಕ್ರವಾರ ಮಾಂಸ ಮಾರಾಟ ನಿಷೇಧಿಸಲಾಗಿದೆ. ಮಹಾಶಿವರಾತ್ರಿ ಅಂಗವಾಗಿ ಅಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು (ಪಶುಪಾಲನೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.